ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಮಕ್ಕಳ ಆರೈಕೆಯ ವಿಶೇಷ ಕೊಠಡಿ ಉದ್ಘಾಟನೆಗೆ ಸಜ್ಜು

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಶಿಶು ಪಾಲನೆ, ವಿಶ್ರಾಂತಿ ಕೊಠಡಿ
Last Updated 31 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರಿ ನೌಕರರಿಗೆ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಮಕ್ಕಳ ಆರೈಕೆ, ಎರಡನ್ನೂ ನಿಭಾಯಿಸುವುದು ದೊಡ್ಡ ಸವಾಲು. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶಿಶು ಪಾಲನಾ ಕೇಂದ್ರ ಸ್ಥಾಪನೆಯಾಗಿದ್ದು, ಉದ್ಘಾಟನೆಗೆ ಸಜ್ಜಾಗಿದೆ.

ಎಲ್ಲ ಸರ್ಕಾರಿ ಕಚೇರಿಗಳ ಆವರಣದಲ್ಲಿ ಏಳು ವರ್ಷದ ಒಳಗಿನ ಮಕ್ಕಳ ಪಾಲನೆಗಾಗಿ ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸರ್ಕಾರವೂ ಸೂಚಿಸಿತ್ತು. ಅದರಂತೆ ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ತೆರೆಯಲಾಗಿದೆ. ತಾಯಂದಿರು ಸಣ್ಣ ಮಕ್ಕಳಿಗೆ ಸ್ತನ್ಯಪಾನ ಮಾಡಿಸಲು ಬೇಕಾದ ಕೊಠಡಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೇ ನೌಕರರ ಮಕ್ಕಳು ಆಟವಾಡುತ್ತ ಸಮಯ ಕಳೆಯಲು ಅಗತ್ಯವಾದ ಆಟಿಕೆಗಳೂ ಇಲ್ಲಿ ಇರಲಿವೆ.

ಬೇರೆ ಬೇರೆ ಊರುಗಳಿಂದ ವರ್ಗಾವಣೆಯಾಗಿ ಬರುವ ನೌಕರರು ಮುಖ್ಯವಾಗಿ ಮಕ್ಕಳ ಪಾಲನೆಯ ಬಗ್ಗೆ ಚಿಂತಿತರಾಗುತ್ತಾರೆ. ಪತಿ, ಪತ್ನಿ ಇಬ್ಬರೂ ಉದ್ಯೋಗದಲ್ಲಿದ್ದರೆ ಅಥವಾ ಯಾರಾದರೊಬ್ಬರು ಅನಿವಾರ್ಯವಾಗಿ ಮನೆಯಲ್ಲಿ ಇಲ್ಲದಿದ್ದರೆ ಮಕ್ಕಳನ್ನು ಯಾರು ಆರೈಕೆ ಮಾಡುತ್ತಾರೆ ಎಂಬ ಆತಂಕ ಕಾಡುತ್ತದೆ.

ಪುಟ್ಟ ಮಕ್ಕಳು ತಂದೆ, ತಾಯಿ ಕಣ್ಣಮುಂದೆಯೇ ಇರಬೇಕು ಎಂದು ಬಯಸುತ್ತಾರೆ. ಶಿಶುಪಾಲನಾ ಕೇಂದ್ರ ಸಿದ್ಧಗೊಂಡಿರುವ ಕಾರಣ ಜಿಲ್ಲಾ ಪಂಚಾಯಿತಿಯ ನೌಕರರಿಗೆ ಇನ್ನುಮುಂದೆ ಆ ಚಿಂತೆ ಕಡಿಮೆಯಾಗಲಿದೆ. ಇದರೊಂದಿಗೆ ಪುರುಷ ಮತ್ತು ಮಹಿಳಾ ನೌಕರರಿಗೆ ವಿಶ್ರಾಂತಿ ಕೊಠಡಿಯೂ ಸಿದ್ಧವಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪ್ರಿಯಾಂಗಾ, ‘ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಈ ರೀತಿಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅದರ ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಾಡಲಾಗಿದೆ’ ಎಂದು ತಿಳಿಸಿದರು.

ಕೇಂದ್ರದಲ್ಲಿ ಏನೇನಿದೆ?:ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಿದ್ಧಗೊಂಡಿರುವ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳನ್ನು ಆಕರ್ಷಿಸುವಂಥ ವಿನ್ಯಾಸ ಮಾಡಲಾಗಿದೆ. ಹಾವು ಏಣಿ ಆಟದ ನೆಲಹಾಸು ಅಳವಡಿಸಲಾಗಿದೆ. ಗೋಡೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ವರ್ಣಮಾಲೆಗಳು, ಸಂಖ್ಯೆಗಳನ್ನು ಬರೆಯಲಾಗಿದೆ. ಅಲ್ಲದೇ ಸುಂದರವಾದ ಚಿತ್ರಗಳನ್ನೂ ರಚಿಸಲಾಗಿದೆ. ತೊಟ್ಟಿಲು, ಪುಸ್ತಕಗಳು, ಮಕ್ಕಳು ಒಳಾಂಗಣದಲ್ಲಿ ಆಟವಾಡುವಂಥ ಕೆಲವು ಆಟಿಕೆಗಳೂ ಇಲ್ಲಿ ಇರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

–––––

ಮಕ್ಕಳನ್ನು ನೋಡಿಕೊಳ್ಳಲು ಒಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗುವುದು. ಮಕ್ಕಳನ್ನು ಅಲ್ಲಿ ಬಿಟ್ಟು ನೌಕರರು ತಮ್ಮ ಕರ್ತವ್ಯದಲ್ಲಿ ಭಾಗವಹಿಸಬಹುದು.
– ಎಂ.ಪ್ರಿಯಾಂಗಾ, ‌ಜಿಲ್ಲಾ ಪಂಚಾಯಿತಿ ಸಿ.ಇ.ಒ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT