ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ | ಬಾಗಿಲು ಮುಚ್ಚಿದ ಸಿನಿಮಾ ಮಂದಿರ: ಸಿನಿಪ್ರಿಯರಿಗೆ ನಿರಾಸೆ

Published 1 ಜನವರಿ 2024, 6:58 IST
Last Updated 1 ಜನವರಿ 2024, 6:58 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನಲ್ಲಿ ದಶಕಗಳಿಂದ ಸಿನಿಪ್ರಿಯರಿಗೆ ರಂಜನೆ ನೀಡುತ್ತಿದ್ದ 4 ಚಿತ್ರಮಂದಿರಗಳು ನಿರೀಕ್ಷಿತ ಆದಾಯ ಇರದ ಕಾರಣ ಬಾಗಿಲು ಮುಚ್ಚಿವೆ. ಇದರಿಂದಾಗಿ ಈಚಿಗೆ ತೆರೆ ಕಾಣುವ ಹೊಸ ಸಿನಿಮಾ ನೋಡಲು ಜನರು ನೆರೆಯ ಬೈಂದೂರು ಇಲ್ಲವೇ ಹೊನ್ನಾವರ ತಾಲ್ಲೂಕಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನ ಮುರುಡೇಶ್ವರದಲ್ಲಿ ವಿಜಯಾ, ಶಿರಾಲಿಯಲ್ಲಿ ವೆಂಕಟೇಶ್ವರ, ಪಟ್ಟಣದ ಚನ್ನಪಟ್ಟಣ ಹನುಮಂತ ದೇವಸ್ಥಾನದ ಬಳಿ ಲಕ್ಷ್ಮಿ ಹಾಗೂ ಪಟ್ಟಣದ ಮಣ್ಕುಳಿಯಲ್ಲಿ ಪುಷ್ಪಾಂಜಲಿ ಚಿತ್ರಮಂದಿರ ಕಾರ್ಯನಿರ್ವಹಿಸುತ್ತಿದ್ದವು. ಹಿಂದಿನ ದಿನಗಳಲ್ಲಿ ಹೊಸ ಚಿತ್ರಗಳು ಚಿತ್ರಮಂದಿರಕ್ಕೆ ಕಾಲಿಡುತ್ತಲೇ ಪ್ರೇಕ್ಷಕರು ಭರ್ತಿಯಾಗಿ ಚಿತ್ರಮಂದಿರದ ಮಾಲಿಕರಿಗೆ ಕೈ ತುಂಬಾ ಆದಾಯ ಸಿಗುತ್ತಿತ್ತು. ಈಗ ತಂತ್ರಜ್ಞಾನ ಸುಧಾರಣೆ ಆದಂತೆ ಮೊಬೈಲ್ ಹಾಗೂ ಟಿವಿಯಲ್ಲಿ ಹೊಸ ಚಿತ್ರಗಳು ನೋಡಲು ಸಿಗುತ್ತಿರುವ ಕಾರಣ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಕ್ರಮೇಣ ಕ್ಷೀಣಿಸುತ್ತ ಬಂದಿದೆ.

ಬಿಡುಗಡೆಯಾಗುವ ಹೊಸ ಚಿತ್ರಗಳನ್ನು ಲಕ್ಷ ಲಕ್ಷ ನೀಡಿ ಚಿತ್ರಮಂದಿರಕ್ಕೆ ತಂದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಬಾರದ ಕಾರಣ ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುತ್ತಿದ್ದ ಕಾರಣ ಬಂದ್‌ ಮಾಡುವ ಅನಿವಾರ್ಯತೆ ಎದುರಾಯಿತು. ಅದರಲ್ಲೂ ಭಟ್ಕಳದ ಬಹುಸಂಖ್ಯಾತ ಮುಸ್ಲಿಮರು ಚಿತ್ರಮಂದಿರಕ್ಕೆ ಬಾರದಿರುವುದು ಚಿತ್ರಮಂದಿರಗಳ ಹಾನಿಗೆ ಬಹುದೊಡ್ಡ ಕಾರಣವಾಗಿದೆ.

ಕೆಲವು ವರ್ಷಗಳ ಹಿಂದೆ ಮುಚ್ಚಲಾಗಿದ್ದ ಮುರುಡೇಶ್ವರದ ವಿಜಯಾ ಚಿತ್ರಮಂದಿರವನ್ನು ವಸತಿಗೃಹವನ್ನಾಗಿ ಬದಲಾಯಿಸಲಾಗಿದೆ. ಪಟ್ಟಣದ ಲಕ್ಷ್ಮಿ ಚಿತ್ರಮಂದಿರವನ್ನು ಸೂಪರ್‌ ಮಾರ್ಕೆಟ್‌ ಆಗಿ ಬದಲಾಯಿಸುವ ಕಾಮಗಾರಿ ನಡೆಯುತ್ತಿದೆ. ಶಿರಾಲಿಯ ವೆಂಕಟೇಶ್ವರ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲಾಗಿದೆ.

ಕೊರೊನಾ ನಂತರ ಪ್ರದರ್ಶನ ಕಾಣದ ಪುಷ್ಪಾಂಜಲಿ: ತಾಲ್ಲೂಕಿನ ಅತಿ ದೊಡ್ಡ ಸುಸಜ್ಜಿತ ಚಿತ್ರಮಂದಿರ ಎಂದರೆ ಅದು ಪಟ್ಟಣದ ಪುಷ್ಪಾಂಜಲಿ. ಹೊಸದಾಗಿ ಬಿಡುಗಡೆಯಾಗುವ ಬಹುತೇಕ ಚಿತ್ರಗಳು ಇಲ್ಲಿಯೇ ತೆರೆಕಾಣುತ್ತಿದ್ದವು. ಹಾನಿಯಾದರೂ ಚಿಂತೆ ಮಾಡದ ಚಿತ್ರಮಂದಿರ ಮಾಲಿಕ ಗೋಪಾಲಕೃಷ್ಣ ಭಟ್ಕಳ ಹೊಸ ಚಿತ್ರಗಳನ್ನು ಖರೀದಿ ಮಾಡಿ ತಂದು ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಿದ್ದರು. ಆದರೆ ಕೊರೊನಾ ಕಾಲದಲ್ಲಿ ನೀಡಿದ ಹೊಡೆತ ಮಾಲೀಕರಿಗೆ ಎದ್ದೇಳಲು ಅವಕಾಶ ನೀಡಲಿಲ್ಲ. ಕೊರೊನಾ ನಂತರದ ದಿನಗಳಲ್ಲಿ ಇಲ್ಲಿ ಚಿತ್ರ ಪ್ರದರ್ಶನ ಸಂಪೂರ್ಣ ಸ್ಥಗಿತಗೊಂಡಿದೆ. ಸಿನಿ ಪ್ರೇಕ್ಷಕರು ಬಿಡುಗಡೆಯಾಗುವ ಹೊಸ ಸಿನಿಮಾ ವೀಕ್ಷಣೆಗೆ ದೂರದ ಊರುಗಳಿಗೆ ಹೋಗುತ್ತಿದ್ದಾರೆ.

ಮಲ್ಟಿಪ್ಲೆಕ್ಸ್‌ ಚಿತ್ರಮಂದಿರ ಬರಲಿ
ತಾಲ್ಲೂಕಿನ 4 ಚಿತ್ರಮಂದಿರಗಳು ಮುಚ್ಚಿರುವುದು ಸಿನಿಪ್ರಿಯರಿಗೆ ನಿರಾಸೆಯಾಗಿದೆ. ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಕೂಡ ಚಿತ್ರಮಂದಿರ ಇಲ್ಲ. ಈಗಿರುವ ಚಿತ್ರಮಂದಿರವನ್ನು ಮಲ್ಟಿಪ್ಲೆಕ್ಸ್‌ ಚಿತ್ರಮಂದಿರವನ್ನಾಗಿ ಬದಲಾಯಿಸಬೇಕು. ಸಿನಿಮಾರಂಗ ಚಿತ್ರಮಂದಿರ ಮಾಲೀಕರ ನೆರವಿಗೆ ಮುಂದಾಗಬೇಕು ಎಂದು ಸ್ಥಳೀಯರಾದ ನಾಗರಾಜ ನಾಯ್ಕ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT