ಕುಮಟಾ: ಕಾರವಾರದ ಕಾಳಿ ಸೇತುವೆ ಕುಸಿದ ಬೆನ್ನಲ್ಲೇ ಚತುಷ್ಪಥ ಹೆದ್ದಾರಿ ಹಾದು ಹೋಗಿರುವ ತಾಲ್ಲೂಕಿನ ದೀವಗಿಯ ಅಘನಾಶಿನಿ ನದಿಗೆ ನಿರ್ಮಿಸಿದ 61 ವರ್ಷ ಹಳೆಯದಾದ ಸೇತುವೆಯ ಸುರಕ್ಷತೆ ಬಗ್ಗೆ ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿದೆ.
ಅಘನಾಶಿನಿ ನದಿಯ ಹಳೆಯ ಸೇತುವೆಯ ಸುರಕ್ಷತೆಯ ಬಗ್ಗೆ ಬುಧವಾರ ಸಾಮಾಜಿಕ ಜಾಲ ತಾಣದಲ್ಲಿ ಅನೇಕರು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಚತುಷ್ಪಥ ಹೆದ್ದಾರಿ ನಿರ್ಮಾಣ ಮಾಡುವಾಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಘನಾಶಿನಿ ನದಿಗೆ ಒಂದು ಹೊಸ ಸೇತುವೆ ಮಾತ್ರ ನಿರ್ಮಿಸಿ ಹಳೆಯ ಸೇತುವೆಯನ್ನು ದುರಸ್ತಿ ಮಾಡಿ ಹಾಗೇ ಉಳಿಸಿಕೊಂಡಿದೆ.
ಅಂದಿನ ಮೈಸೂರು ಸರ್ಕಾರದ ಲೋಕೋಪಯೋಗಿ ಸಚಿವ ರಾವ್ ಬಹಾದ್ದೂರು ಎನ್ನುವವರು 1963ರ ಮೇ 22ರಂದು ಅಘನಾಶಿನಿ ನದಿ ಸೇತುವೆಯನ್ನು ಉದ್ಘಾಟಿಸಿದ್ದರು. ಅದಕ್ಕೂ ಮೊದಲು ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಡಿ. ಜತ್ತಿ ಅವರು ಸೇತುವೆಗೆ ಅಡಿಗಲ್ಲು ಹಾಕಿದ ಬಗ್ಗೆ ಸೇತುವೆಯ ಪಕ್ಕದ ಕಂಬಗಳ ಮೇಲೆ ಬರೆದ ಬರಹ ಇದೆ.
‘ನಮ್ಮ ಕಚೇರಿಯಲ್ಲಿ ಅಘನಾಶಿನಿ ಸೇತುವೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ’ ಎಂದು ಸ್ಥಳೀಯ ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪಿ. ನಾಯ್ಕ ತಿಳಿಸಿದರು.
‘ಅಂದು ಅಘನಾಶಿನಿ ಸೇತುವೆಯ ಕಂಬಗಳನ್ನು ನಿರ್ಮಿಸುವಾಗ ನದಿಯಾಳದಲ್ಲಿ ಸೂಕ್ತ ನೆಲೆ ಸಿಗದೆ ಸಮಸ್ಯೆಯಾದ ಬಗ್ಗೆ ನಾವೆಲ್ಲ ಚಿಕ್ಕವರಿರುವಾಗ ಮನೆಯಲ್ಲಿ ಚರ್ಚೆ ನಡೆಸುತ್ತಿದ್ದುದನ್ನು ಕೇಳಿದ್ದೇನೆ' ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
‘ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಮಾರ್ಗರೆಟ್ ಆಳ್ವ ಜಿಲ್ಲೆಯ ಸಂಸದೆಯಾಗಿದ್ದರು. ಆಗಲೇ ಅವರು ಹಲವು ಬಾರಿ ಅಘನಾಶಿನಿ ಸೇತುವೆ ಶಿಥಿಲಗೊಂಡ ಬಗ್ಗೆ ಆಕ್ಷೇಪ ಎತ್ತಿ ಸೇತುವೆಯ ಮೇಲೆ ವಾಹನ ಓಡಾಡುವಾಗ ಭಯವಾಗುತ್ತದೆ ಎಂದಿದ್ದರು. ನಂತರ ಚತುಷ್ಪಥ ಹೆದ್ದಾರಿ ಕಾಮಗಾರಿ ಆರಂಭವಾಗಿ ಜಿಲ್ಲೆಯ ಉಳಿದೆಲ್ಲ ನದಿಗಳಿಗೆ ಎರಡು ಹೊಸ ಸೇತುವೆ ನಿರ್ಮಿಸಲಾಗಿದೆ. ಅಘನಾಶಿನಿಗೆ ದಿವಗಿ ಬಳಿ ಒಂದೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೆಯ ಸೇತುವೆಯನ್ನೇ ದುರಸ್ತಿ ಮಾಡಿ ಬಳಸಿಕೊಳ್ಳಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಹೆದ್ದಾರಿ ನಿರ್ಮಿಸಿದ ಐ.ಆರ್.ಬಿ ಕಂಪನಿ ಅಘನಾಶಿನಿ ಹಳೆಯ ಸೇತುವೆಯ ಸುರಕ್ಷತೆ ಹಾಗೂ ಬಾಳಿಕೆಯ ಬಗ್ಗೆ, ಇನ್ನೊಂದು ಸೇತುವೆ ನಿರ್ಮಾಣ ಕಾರ್ಯ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಜನತೆಗೆ ತಕ್ಷಣ ತಿಳಿಸಬೇಕು' ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವ ‘ಪ್ರಜಾವಾಣಿ’ಗೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್.ಬಿ ಅಧಿಕಾರಿಗಳು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.
Highlights - 1963ರ ಮೇ 22ರಂದು ಉದ್ಘಾಟನೆಗೊಂಡಿದ್ದ ಅಘನಾಶಿನಿ ನದಿ ಸೇತುವೆ ಸೇತುವೆ ಬಗ್ಗೆ ಯಾವುದೇ ಮಾಹಿತಿ ಇಲ್ಲವೆಂದ ಎಂಜಿನಿಯರ್ ಸೇತುವೆ ಸುರಕ್ಷತೆ, ಬಾಳಿಕೆ ಬಗ್ಗೆ ಮಾಹಿತಿ ನೀಡಲು ನಿವೇದಿತ್ ಆಳ್ವ ಆಗ್ರಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.