ಯಲ್ಲಾಪುರ: ‘ಕಾಂಗ್ರೆಸ್ ಪಕ್ಷವು ಜಿಲ್ಲೆಯನ್ನು ದೀರ್ಘಕಾಲ ಆಳಿದರೂ ಯಾವುದೇ ಬೃಹತ್ ನೀರಾವರಿ ಯೋಜನೆ ತಂದಿಲ್ಲ. ಕೋವಿಡ್ ಸಮಯದಲ್ಲಿ ಆಹಾರದ ಕಿಟ್ ವಿತರಿಸಿ ಬಡವರ ಹಸಿವು ತಣಿಸಿಲ್ಲ. ಪರಿಶಿಷ್ಟರ ಕುರಿತ ಅವರ ಕಾಳಜಿ ಕೇವಲ ಭಾಷಣಕ್ಕೆ ಸೀಮಿತ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಟೀಕಿಸಿದರು.
ಪಟ್ಟಣದ ರೈತ ಸಭಾಭವನದ ಆವರಣದಲ್ಲಿ ಮಂಗಳವಾರ ಬಿಜೆಪಿ ಪರಿಶಿಷ್ಟ ಪಂಗಡಗಳ ಮೋರ್ಚಾದ ಜಿಲ್ಲಾ ಘಟಕದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಎಸ್.ಟಿ. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ನಾಯ್ಕ ಮಾತನಾಡಿ, ‘ದೇಶವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್ ಪರಿಶಿಷ್ಟರನ್ನು ಕೇವಲ ಮತಬ್ಯಾಂಕ್‌ನಂತೆ ಪರಿಗಣಿಸಿತು. ಸಂವಿಧಾನ ಕೊಡಮಾಡಿದ ಮೀಸಲಾತಿ ಹೊರತುಪಡಿಸಿ ಸ್ವಇಚ್ಛೆಯಿಂದ ಯಾವುದೇ ಮೀಸಲಾತಿ ಕೊಡಲಿಲ್ಲ. ಆದರೆ ರಾಜ್ಯದ ಬೊಮ್ಮಾಯಿ ಸರ್ಕಾರ ಹೆಚ್ಚಿನ ಮೀಸಲಾತಿ ನೀಡಿದೆ. ಸಮಾಜದ ಮುಖ್ಯ ವಾಹಿನಿಯಿಂದ ದೂರವಿದ್ದ ಅನೇಕ ತಳ ಸಮುದಾಯದವರನ್ನು ಮುನ್ನೆಲೆಗೆ ತಂದಿದೆ’ ಎಂದರು.
ಪಂಚಾಯತ್ ರಾಜ್ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ‘ಕಾಂಗ್ರೆಸ್ ಸಾಮಾಜಿಕ ನ್ಯಾಯ ಒದಗಿಸದೇ ಪರಿಶಿಷ್ಟರನ್ನು ತನ್ನ ಅಗತ್ಯಕ್ಕೆ ಬಳಸಿಕೊಂಡಿತು’ ಎಂದರು.
ಎಸ್.ಟಿ. ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸಿ.ಪಿ.ಪಾಟೀಲ್, ಪ್ರಮುಖರಾದ ಎಲ್.ಟಿ.ಪಾಟೀಲ, ಮಹೇಶ ಹೊಸಕೊಪ್ಪ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಮುಖರಾದ ವೀಣಾ ಸಿದ್ದಿ, ಉಷಾ ಹೆಗಡೆ, ಚಂದ್ರು ಎಸಳೆ, ವಿಜಯ ಮಿರಾಶಿ, ಉಮೇಶ ಬಿಜಾಪುರ, ಸುನಂದಾ ದಾಸ, ಶ್ಯಾಮಿಲಿ ಪಾಟಣಕರ, ಗುಡ್ಡಪ್ಪ ತಳವಾರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.