ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರಿಲ್ಲದೆ ಖಾಲಿಯಾದ ಕಾಂಗ್ರೆಸ್: ನಳಿನ್‌ಕುಮಾರ್ ಕಟೀಲ್‌

ಜನ ಸಂಕಲ್ಪ ಸಮಾವೇಶದಲ್ಲಿ ನಳಿನ್‌ ಕುಮಾರ್ ಕಟೀಲ್ ವ್ಯಂಗ್ಯ
Last Updated 7 ಫೆಬ್ರುವರಿ 2023, 15:39 IST
ಅಕ್ಷರ ಗಾತ್ರ

ಕಾರವಾರ: ‘ಪ್ರಜಾಧ್ವನಿ ಹೆಸರಿನಲ್ಲಿ ಹೊರಟಿರುವ ಕಾಂಗ್ರೆಸ್ ಯಾತ್ರೆ ಕಾರ್ಯಕರ್ತರ ಧ್ವನಿ ಅಡಗಿಸುವ ಯಾತ್ರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಮನೆ ಸೇರುತ್ತಿದ್ದಾರೆ. ಕಾಂಗ್ರೆಸ್‌ ಕಾರ್ಯಕರ್ತರಿಲ್ಲದೆ ಖಾಲಿಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ವ್ಯಂಗ್ಯವಾಡಿದರು.

ಇಲ್ಲಿನ ಮಾಲಾದೇವಿ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯ ಸಂಕಲ್ಪ ಅಭಿಯಾನ ಹಾಗೂ ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ನಲ್ಲಿ ಡಿ.ಕೆ‌.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಧ್ವನಿ ಮಾತ್ರ ಇದೆ. ಜೆಡಿಎಸ್, ಕಾಂಗ್ರೆಸ್ ದುರಾಡಳಿತಕ್ಕೆ ಬೇಸತ್ತು ಜನ ಬಿಜೆಪಿಯನ್ನು ಒಪ್ಪಿಕೊಳ್ಳುತ್ತಿದ್ದಾರೆ. ಮತದಾರರ ಹೃದಯದಲ್ಲಿ ಕಮಲ ಅರಳುತ್ತಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ, ‘ಕಾರ್ಯಕರ್ತರೇ ನಿಜವಾದ ದೇವರು. ಮಹಿಳೆಯೊಬ್ಬರು ವಿಧಾನಸಭೆ ಪ್ರವೇಶಿಸಲು ಅನುವು ಮಾಡಿಕೊಡಲು ಕಾರ್ಯಕರ್ತರ ಶ್ರಮವಿತ್ತು. ನಾನು ಶಾಸಕಿ ಎಂಬುದಕ್ಕಿಂತಲೂ ಪಕ್ಷದ ಸಾಮಾನ್ಯ ಕಾರ್ಯಕರ್ತೆ ಎಂದು ಹೇಳಿಕೊಳ್ಳುವದು ಹೆಮ್ಮೆ. ಭಿನ್ನಮತಕ್ಕೆ ಆಸ್ಪದ ನೀಡದೆ ಕೆಲಸ ಮಾಡಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ‘ಪಕ್ಷಕ್ಕೆ ಚುನಾವಣೆ ಎಂಬ ಪರೀಕ್ಷೆ ಎದುರಾಗಿದೆ‌. ಕಾರ್ಯಕರ್ತರು ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಿ ಪಕ್ಷವನ್ನು ಪಾಸು ಮಾಡಿಸುವ ಕೆಲಸ ಮಾಡಬೇಕು’ ಎಂದರು.

ಕಾರವಾರ, ಅಂಕೋಲಾ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳ ಸದಸ್ಯರು, ಮುಖಂಡರು ಸೇರಿದಂತೆ 200ಕ್ಕೂ ಹೆಚ್ಚು ಜನ ಬಿಜೆಪಿಗೆ ಸೇರ್ಪಡೆಗೊಂಡರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಪ್ರಮುಖರಾದ ಎನ್.ಎಸ್.ಹೆಗಡೆ, ಭಾರತಿ ಜಂಬಗಿ, ಪ್ರಸನ್ನ ಕೆರೆಕೈ, ರಾಜೇಂದ್ರ ನಾಯ್ಕ, ಹೂವಾ ಖಂಡೇಕರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಗಂಗಾಧರ ಭಟ್, ನಾಗೇಶ ಕುರ್ಡೇಕರ, ಸಂಜಯ ನಾಯ್ಕ, ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT