ಗುರುವಾರ , ಡಿಸೆಂಬರ್ 8, 2022
18 °C

ಭಟ್ಕಳ: ಷರತ್ತಿನ ಮೇಲೆ ಪಾಕಿಸ್ತಾನಿ ಮಹಿಳೆಯ ಬಿಡುಗಡೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಟ್ಕಳ: ಪಾಕಿಸ್ತಾನದಿಂದ ಕಳ್ಳ ದಾರಿಯ ಮೂಲಕ ಭಟ್ಕಳದ ಗಂಡನ ಮನೆ ಸೇರಿಕೊಂಡು, ನಂತರ ಕಳೆದ ವರ್ಷ ಜೂನ್‌ನಲ್ಲಿ ಪೊಲೀಸರು ಬಂಧಿಸಿದ್ದ ಮಹಿಳೆ ಖತೀಜಾ ಮೆಹರೀನ್ ರುಕ್ಕುದ್ದೀನ್ ಎಂಬುವವರನ್ನು ಷರತ್ತಿನ ಮೇಲೆ ಬಿಡುಗಡೆಗೆ ಹೈಕೋರ್ಟ್‌ ಆದೇಶಿಸಿದೆ.

ಅವರ ಬಿಡುಗಡೆಗೆ ಹೈಕೋರ್ಟ್ ಅ.20ರಂದೇ ಆದೇಶ ನೀಡಿದೆ. ಶುಕ್ರವಾರ (ನ.4) ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ವಕೀಲರಾದ ಸಿ.ರಂಗನಾಥ, ಝಮೀರ್ ಪಾಶಾ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಭಟ್ಕಳ ನ್ಯಾಯಾಲಯದಲ್ಲಿ ಆರೋಪಿ ಮಹಿಳೆಯ ಪರ ರಾಜವರ್ಧನ ವಾದಿಸಿದ್ದರು.

ಖತೀಜಾ ಸದ್ಯ ಕಾರವಾರದ ಜೈಲಿನಲ್ಲಿದ್ದಾರೆ. ಪ್ರಕರಣದ ವಿಚಾರಣೆ ಮುಕ್ತಾಯವಾಗುವ ತನಕ ಎಲ್ಲಿ ವಾಸವಿರುತ್ತಾರೆ ಎಂಬ ಬಗ್ಗೆ ಲಿಖಿತವಾಗಿ ತಿಳಿಸಬೇಕು. ವಿಚಾರಣೆ ಮುಗಿಯುವ ತನಕ ಭಟ್ಕಳ ಬಿಟ್ಟು ಹೋಗುವಂತಿಲ್ಲ. ₹ 1 ಲಕ್ಷದ ಮುಚ್ಚಳಿಕೆ ನೀಡಬೇಕು. ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಭಟ್ಕಳದಲ್ಲಿಯೇ ಜನಿಸಿದ್ದ ಖತೀಜಾ ಬಾಲ್ಯದಲ್ಲಿಯೇ ತಂದೆ ತಾಯಿ ಜೊತೆ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿನ ಪೌರತ್ವ ಪಡೆದುಕೊಂಡಿದ್ದರು. ಅವರ ಪಾಲಕರು ಉದ್ಯೋಗದ ನಿಮಿತ್ತ ಈ ಹಿಂದೆ ದುಬೈನಲ್ಲಿ ನೆಲೆಸಿದ್ದರು. ತಮ್ಮ ಸಂಬಂಧಿ, ಭಟ್ಕಳದ ನವಾಯತ್ ಕಾಲೊನಿ ನಿವಾಸಿ ಜಾವೇದ್‌ ಎಂಬುವವರನ್ನು ಅಲ್ಲಿ ಮದುವೆ ಮಾಡಿಕೊಂಡಿದ್ದರು. ಬಳಿಕ ಸ್ವಲ್ಪ ಸಮಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದರು. 2015ರಲ್ಲಿ ನೇಪಾಳದ ಮೂಲಕ ಭಾರತ ಪ್ರವೇಶಿಸಿದ್ದರು.

ಆರು ವರ್ಷಗಳಿಂದ ಭಟ್ಕಳದ ನವಾಯತ್ ಕಾಲೊನಿಯಲ್ಲಿ ವಾಸವಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಈ ನಡುವೆ, ಸುಳ್ಳು ದಾಖಲೆಗಳನ್ನು ನೀಡಿ ಜನ್ಮ ದಾಖಲೆ, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರ ಬಗ್ಗೆ ದೂರು ದಾಖಲಾಗಿತ್ತು.

ಪೊಲೀಸರು 2021ರ ಜೂನ್ 9ರಂದು ಅವರನ್ನು ಬಂಧಿಸಿ, ವಿದೇಶಿಗರ ಕಾಯ್ದೆ 1946ರ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೇ ಪತಿ ಜಾವೇದ್ ಹಾಗೂ ಖತೀಜಾಗೆ ಸರ್ಕಾರಿ ದಾಖಲೆಗಳನ್ನು ಒದಗಿಸಿದ್ದ ಭಟ್ಕಳ ತಹಶೀಲ್ದಾರ್ ಕಚೇರಿಯಲ್ಲಿ ಕೂಡ ತನಿಖೆ ನಡೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು