ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಆಸ್ಪತ್ರೆಗಳಲ್ಲಿ ಸಿದ್ಧಗೊಂಡ ಕೋವಿಡ್ ವಾರ್ಡ್

ಪ್ರತಿದಿನ ಸರಾಸರಿ 25 ರಿಂದ 30 ಮಂದಿಯ ಗಂಟಲುದ್ರವ ತಪಾಸಣೆ
ಗಣಪತಿ ಹೆಗಡೆ
Published 24 ಡಿಸೆಂಬರ್ 2023, 5:33 IST
Last Updated 24 ಡಿಸೆಂಬರ್ 2023, 5:33 IST
ಅಕ್ಷರ ಗಾತ್ರ

ಕಾರವಾರ: ರಾಜ್ಯದಲ್ಲಿ ಮತ್ತೆ ಕೋವಿಡ್ ಹಾವಳಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ವಿಶೇಷ ವಾರ್ಡ್ ಸ್ಥಾಪಿಸಲಾಗಿದೆ.

ಇಲ್ಲಿನ ಕ್ರಿಮ್ಸ್ ಅಧೀನದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ 25 ಹಾಸಿಗೆಯ ಪ್ರತ್ಯೇಕ ಕೋವಿಡ್ ವಾರ್ಡ್ ಸ್ಥಾಪಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಚಿಕಿತ್ಸೆ ನೀಡಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡದಲ್ಲಿಯೂ ವಿಶೇಷ ಸೌಲಭ್ಯದ ಪ್ರತ್ಯೇಕ ವಾರ್ಡ್ ಸ್ಥಾಪನೆಗೊಂಡಿದೆ. ಸುಮಾರು 250ಕ್ಕೂ ಹೆಚ್ಚು ಹಾಸಿಗೆಯ ಕೋವಿಡ್ ಚಿಕಿತ್ಸಾ ಕೊಠಡಿ ಜಿಲ್ಲೆಯಲ್ಲಿ ಸ್ಥಾಪನೆಗೊಂಡಿದೆ.

ಕೇರಳ ಗಡಿಭಾಗದಲ್ಲಿ ಸೋಂಕು ಉಲ್ಬಣಿಸಿದ ನಂತರ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಗೋವಾ ರಾಜ್ಯದ ಜತೆಗೆ ಗಡಿ ಹಂಚಿಕೊಂಡಿರುವ ಜಿಲ್ಲೆಯಲ್ಲಿಯೂ ಅಗತ್ಯ ತಪಾಸಣೆ ನಡೆಸಲು ಸೂಚಿಸಿದೆ. ಗಡಿಭಾಗದಲ್ಲಿ ತಪಾಸಣೆಗೆ ಯಾವುದೇ ಕ್ರಮವಾಗಿಲ್ಲ. ಆದರೆ ಸೋಂಕಿನ ಲಕ್ಷಣ ಇದ್ದವರ ಗಂಟಲುದ್ರವ ಸಂಗ್ರಹಿಸಿ ಚಿಕಿತ್ಸೆಗೆ ಒಳಪಡಿಸುವ ಕೆಲಸ ಮಾಡಲಾಗುತ್ತಿದೆ.

‘ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ ಆಗಿಲ್ಲ. ಸರ್ಕಾರದ ಮಾರ್ಗಸೂಚಿ ಅನ್ವಯ ಜ್ವರ, ಶೀತ, ಉಸಿರಾಟದ ಸಮಸ್ಯೆಯಂತಹ ರೋಗ ಲಕ್ಷಣ ಇದ್ದವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಕ್ರಿಮ್ಸ್, ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿವ ಕೋವಿಡ್ ಪತ್ತೆ ಪ್ರಯೋಗಾಲಯದಲ್ಲಿ ನಿತ್ಯ ಸಾಸರಿ 25 ರಿಂದ 30 ಮಂದಿಯ ಗಂಟಲುದ್ರವ ಪರೀಕ್ಷೆಗೆ ಒಳಪಡುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ತಿಳಿಸಿದರು.

‘ತೀವ್ರತರದ ಜ್ವರ, ಉಸಿರಾಟದ ಸಮಸ್ಯೆ ಇದ್ದವರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರೆ ಅವರನ್ನು ಪರೀಕ್ಷೆಗೆ ಒಳಪಡುವಂತೆ ಮನವೊಲಿಸಲಾಗುತ್ತಿದೆ. ಚಿಕಿತ್ಸೆಯೆ ಅಗತ್ಯವಿದ್ದರೆ ಅವರನ್ನು ದಾಖಲಿಸಿ ಚಿಕಿತ್ಸೆ ಒದಗಿಸಲು ಪ್ರತ್ಯೇಕ ವಾರ್ಡ್ ಕೂಡ ಸ್ಥಾಪಿಸಿದ್ದೇವೆ. ಕೋವಿಡ್ ಪರಿಸ್ಥಿತಿ ನಿಭಾಯಿಸಿದ ಅನುಭವಿ ಸಿಬ್ಬಂದಿಯನ್ನು ಅಂತಹ ವಾರ್ಡ್‍ಗೆ ನಿಯೋಜಿಸಲಾಗಿದೆ. ಅನುಭವಿ ಸಿಬ್ಬಂದಿ ಇರುವುದರಿಂದ ಸದ್ಯ ಅವರಿಗೆ ಇನ್ನೊಂದು ಸುತ್ತಿನ ಪ್ರಾಥಮಿಕ ತರಬೇತಿ ನೀಡಲಾಗಿದೆ’ ಎಂದು ಕ್ರಿಮ್ಸ್ ವೈದ್ಯಕೀಯ ಅಧಿಕ್ಷಕ ಡಾ.ಶಿವಾನಂದ ಕುಡ್ತಲಕರ ಹೇಳಿದರು.

ಕೋವಿಡ್ ಚಿಕಿತ್ಸೆಗೆ ಬೇಕಿರುವ ಸಿಬ್ಬಂದಿ ಔಷಧ ಸೌಲಭ್ಯಗಳು ಲಭ್ಯವಿದೆ. ಯಾವುದಕ್ಕೂ ಕೊರತೆ ಇಲ್ಲ. ಜನರು ಯಾವುದೇ ಆತಂಕಗೊಳ್ಳುವ ಅಗತ್ಯವಿಲ್ಲ
. ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

‘ಸಾರಿ’ ಸಮಸ್ಯೆಗೆ ಪ್ರತ್ಯೇಕ ವಾರ್ಡ್ ‘ತೀವ್ರ ಸ್ವರೂಪದ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುತ್ತಿರುವ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದರೆ ಅವರಿಗೆ ಚಿಕಿತ್ಸೆ ನೀಡಲು ದ್ರವರೂಪದ ಆಕ್ಸಿಜನ್ ಪೂರೈಕೆ ಆಗುವ ಸೌಲಭ್ಯ ಹೊಂದಿರುವ ವಿಶೇಷ ವಾರ್ಡ್ ಕ್ರಿಮ್ಸ್ ನಲ್ಲಿ ತೆರೆಯಲಾಗಿದೆ. ಅಗತ್ಯ ಬಿದ್ದರೆ ಮಾತ್ರ ಈ ವಾರ್ಡ್ ಬಳಕೆ ಮಾಡಿಕೊಳ್ಳಲಾಗುತ್ತದೆ. ಸದ್ಯದ ಮಟ್ಟಿಗೆ ತೀವ್ರ ಸ್ವರೂಪದ ಸೋಂಕಿತರು ಪತ್ತೆಯಾಗಿಲ್ಲ’ ಎಂದು ಕ್ರಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಾನಂದ ಕುಡ್ತಲಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT