ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅನುದಾನ ಬಿಡುಗಡೆಯಗಿ ವರ್ಷ ಸಮೀಪಿಸಿದರೂ ಆರಂಭಗೊಳ್ಳದ ನಗರೋತ್ಥಾನ ಕಾಮಗಾರಿ

Published 9 ನವೆಂಬರ್ 2023, 4:49 IST
Last Updated 9 ನವೆಂಬರ್ 2023, 4:49 IST
ಅಕ್ಷರ ಗಾತ್ರ

ಶಿರಸಿ: ನಗರದ ಅಭಿವೃದ್ಧಿಗೆ ಪೂರಕವಾಗಿದ್ದ ನಗರೋತ್ಥಾನ ಹಂತ 4ರ ಕಾಮಗಾರಿಗಳು ಅನುಷ್ಠಾನವಾಗದೆ ಸಮಸ್ಯೆ ನಿರಂತರವಾಗಿದೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿಧಾನಸಭೆ ಅಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಶೇಷ ಆಸಕ್ತಿವಹಿಸಿ ಮೂಲ ಸೌಕರ್ಯ ಅಭಿವೃದ್ದಿಗೆ ಇಲ್ಲಿನ ನಗರಸಭೆಗೆ ನಗರೋತ್ಥಾನ ಹಂತ 4ರಲ್ಲಿ ₹30 ಕೋಟಿ ವಿಶೇಷ ಅನುದಾನ ತರಲು ಸಫಲರಾಗಿದ್ದರು. ಆದರೆ ಸಕಾಲದಲ್ಲಿ ಅನುದಾನ ಬಳಕೆ ಆಗದೇ ಉಳಿದಕೊಂಡಿದೆ ಎಂಬ ಆರೋಪಗಳಿವೆ.

ರಾಜ್ಯ ಸರ್ಕಾರ ಕಳೆದ ವರ್ಷವೇ ನಗರವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಲ್ಲಿನ ನಗರಸಭೆಗೆ ನಗರೋತ್ಥಾನ ಯೋಜನೆಯಡಿ ₹ 30 ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. 16 ಕಾಮಗಾರಿಗಳಲ್ಲಿ ಕೆಲ ಕಾಮಗಾರಿಗೆ ಟೆಂಡರ್‌ ಕೂಡ ಕರೆಯಲಾಗಿತ್ತು. ಇನ್ನೂ ಕೆಲ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆದು, ಕಾಮಗಾರಿ ಆರಂಭವಾಗುವಷ್ಟರಲ್ಲಿ 2023ರ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿ ನೀತಿ ಸಂಹಿತೆ ಅಡ್ಡಿಯಾಗಿತ್ತು. ಇದೇ ವೇಳೆ ಕೆಲ ಗುತ್ತಿಗೆದಾರರು ಕೋರ್ಟ್ ಮೆಟ್ಟಿಲೇರಿದ ಕಾರಣಕ್ಕೆ ಕಾಮಗಾರಿ ಇಷ್ಟು ವಿಳಂಬವಾಗಿದೆ. ಒಳಚರಂಡಿ ಕಾಮಗಾರಿ, ಹಾಳಾದ ರಸ್ತೆಗಳ ದುರಸ್ತಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ನಗರೋತ್ಥಾನ ಯೋಜನೆ ಹಣದಿಂದ ಶೀಘ್ರವಾಗಿ ಕಾಮಗಾರಿ ಆರಂಭಗೊಂಡು ಹೊಸದಾಗಿ ರಸ್ತೆಯಾಗುತ್ತದೆ ಎಂದು ನಿರೀಕ್ಷೆ ಮಾಡಿದ್ದವರಿಗೆ ಇದರಿಂದ ನಿರಾಸೆ ಹುಟ್ಟಿಸಿದೆ.

‘ನಗರದ ಬಹುತೇಕ ವಾರ್ಡ್‍ಗಳಲ್ಲಿ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿದೆ. ಕೆಲವೆಡೆ ಚರಂಡಿ ಕಾಮಗಾರಿಗಳು ಅರೆಬರೆಯಾಗಿದ್ದು, ಸಂಚಾರಕ್ಕೆ ತೀವ್ರ ತೊಡಕಾಗುತ್ತಿವೆ. ಮರಾಠಿಕೊಪ್ಪ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಇಡೀ ನಗರದಲ್ಲಿ ಎಲ್ಲೇ ಹೋದರೂ ರಸ್ತೆ ಹಾಳಾಗಿದ್ದು ಧೂಳಿನಿಂದ ಕೂಡಿರುತ್ತವೆ. ಇವೆಲ್ಲ ಬಗೆಹರಿಯಲು ಪೂರಕವಾಗಿ ನಗರೋತ್ಥಾನ ಯೋಜನೆ ಅನುಷ್ಠಾನ ಅನುಕೂಲ ಆಗುತ್ತಿತ್ತು’ ಎಂಬುದು ನಗರನಿವಾಸಿ ರಾಜೇಶ ನಾಯ್ಕ ದೂರು.

‘ಹಾಳಾಗಿರುವ ಚರಂಡಿ, ರಸ್ತೆಯನ್ನು ಶೀಘ್ರವಾಗಿ ದುರಸ್ತಿ ಮಾಡುವುದಾಗಿ ಅನೇಕ ವಾರ್ಡ್‌ಗಳಲ್ಲಿ ನಗರಸಭೆ ಸದಸ್ಯರು ಜನರಿಗೆ ಭರವಸೆ ನೀಡಿದ್ದರು. ಆದರೆ ಇನ್ನೂ ಕಾಮಗಾರಿಗೆ ಟೆಂಡರ್‌ ಆಗದಿರುವುದರಿಂದ ಜನರಿಗೆ ಉತ್ತರ ಕೊಡುವುದೇ ಕಷ್ಟವಾಗಿದೆ’ ಎಂಬುದು ನಗರಸಭೆಯ ಬಹುತೇಕ ಸದಸ್ಯರ ದೂರು.

ಕಾನೂನಾತ್ಮಕ ತೊಡಕುಗಳಿದ್ದರೆ ಸರ್ಕಾರ ಅಧಿಕಾರಿಗಳ ಮೂಲಕ ತಕ್ಷಣ ಬಗೆಹರಿಸಬೇಕು. ಶೀಘ್ರದಲ್ಲಿ ಮಂಜೂರಾದ ಕಾಮಗಾರಿ ಆರಂಭಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕು.
- ವಿಶ್ವೇಶ್ವರ ಹೆಗಡೆ, ಕಾಗೇರಿ ವಿಧಾನಸಭೆ ಮಾಜಿ ಅಧ್ಯಕ್ಷ
ಚುನಾವಣೆ ನೀತಿ ಸಂಹಿತೆ ಹಾಗೂ ಕಾನೂನಾತ್ಮಕ ತೊಡಕು ಎದುರಾದ ಕಾರಣಕ್ಕೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಶೀಘ್ರದಲ್ಲೇ ಎಲ್ಲ ಕಾಮಗಾರಿಯನ್ನೂ ಆರಂಭಿಸಲಾಗುವುದು.
ಕಾಂತರಾಜ್, ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT