ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ತಾಪಮಾನ: ವಾಹನದಲ್ಲೇ ಹಣ್ಣಾಗುವ ಅನಾನಸ್

Published 6 ಏಪ್ರಿಲ್ 2024, 0:14 IST
Last Updated 6 ಏಪ್ರಿಲ್ 2024, 0:14 IST
ಅಕ್ಷರ ಗಾತ್ರ

ಶಿರಸಿ: ಏರುತ್ತಿರುವ ತಾಪಮಾನದ ಪರಿಣಾಮ ಅನಾನಸ್ ಹೊರರಾಜ್ಯಗಳ ಮಾರುಕಟ್ಟೆ ತಲುಪುವ ಮುನ್ನವೇ ಹಣ್ಣಾಗುತ್ತಿದೆ. ಇದರಿಂದ ದರ ಇಳಿಕೆಯಾಗುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. 

‘ಬನವಾಸಿಯ ಅನಾನಸ್‌ಗೆ ಸ್ಥಳೀಯ ಮಾರುಕಟ್ಟೆಗಿಂತ ದೆಹಲಿ, ಮುಂಬೈ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು  ಬೇಡಿಕೆ ಇದೆ. ಅಲ್ಲಿಗೆ ಸಾಗಿಸಲು ಅನಾನಸ್ ಹಣ್ಣಾಗುವ 15 ದಿನಗಳ ಮೊದಲೇ ಕಟಾವು ಮಾಡಬೇಕು. ಆಯಾ ರಾಜ್ಯಗಳಿಗೆ ತಲುಪುವ ಮೊದಲೇ ಹಣ್ಣಾಗುವ ಕಾರಣ ಅವುಗಳನ್ನು ವ್ಯಾಪಾರಸ್ಥರು ಕಡಿಮೆ ದರಕ್ಕೆ ಖರೀದಿಸುತ್ತಾರೆ’ ಎಂದು ಅನಾನಸ್ ಬೆಳೆಗಾರರು ತಿಳಿಸಿದರು.

‘ಎರಡು ತಿಂಗಳ ಹಿಂದೆ ದೆಹಲಿಯಲ್ಲಿ 1 ಕೆಜಿಗೆ ₹ 25 ಇದ್ದ ಅನಾನಸ್ ದರ ಈಗ ₹15ರಿಂದ ₹18ಕ್ಕೆ ಕುಸಿದಿದೆ. ಕಳೆದ ತಿಂಗಳು ಅನಾನಸ್ ಹಣ್ಣಾಗುವ ಮುನ್ನವೇ ದೆಹಲಿ ತಲುಪಿದ್ದು, ಉತ್ತಮ ದರ ಲಭಿಸಿತ್ತು. ಆದರೆ ಈ ಸಲ ಶೇ 75ರಷ್ಟು ಕಾಯಿಗಳು ವಾಹನದಲ್ಲೇ ಹಣ್ಣಾಗಿವೆ’ ಎಂದು ರೈತ ದೇವರಾಜ ನಾಯ್ಕ ಬೇಸರ ವ್ಯಕ್ತಪಡಿಸಿದರು. 

‘ಒಣಭೂಮಿ ಸಾಗುವಳಿ ಮತ್ತು ಮಡಿ ಮಾಡಿ ಅನಾನಸ್ ಸಸಿ ನೆಡಲು, ಗೊಬ್ಬರ–ಔಷಧ ಸಿಂಪಡಿಸಲು ತುಂಬಾ ಖರ್ಚಾಗುತ್ತದೆ. ಉತ್ತಮ ಬೆಳೆ ಬಂದರೂ ಒಳ್ಳೆಯ ಬೆಲೆ ಮಾತ್ರ ಇಲ್ಲ. ಕಟಾವು ಮಾಡಿದ ಅನಾನಸ್‍ನ್ನು ಲಾರಿಗೆ ಲೋಡ್ ಮಾಡಿಸಲು ಕೂಲಿ ನೀಡಲು ಈ ಬೆಲೆ ಸಾಕಾಗುವುದಿಲ್ಲ’ ಎಂದರು.

ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿ ರೈತರು ಮೊದಲಿನಿಂದ ಮಳೆಯಾಶ್ರಿತ ಜಮೀನಿನಲ್ಲಿ ಭತ್ತ ಬೆಳೆಯುತ್ತಿದ್ದರು. ಈಚೆಗೆ ಕೊಳವೆಬಾವಿ ಕೊರೆಸಿ ಅಡಿಕೆ, ಬಾಳೆ, ಶುಂಠಿ ಹಾಗೂ ಅನಾನಸ್ ಬೆಳೆಯುತ್ತಿದ್ದಾರೆ. ಆದರೆ, ಈ ಬೆಳೆಗಳಿಗೂ ಸ್ಥಿರ ಬೆಲೆ ಸಿಗದಿರುವುದು ಅವರಿಗೆ ಆತಂಕ, ಬೇಸರ ಉಂಟು ಮಾಡಿದೆ.

ಈ ಸಲದ ತಾಪಮಾನವು ಅನಾನಸ್ ಬೆಳೆಗಾರರಿಗೆ ಶಾಪವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅರ್ಧ ಉತ್ಪನ್ನ ಕೈಸೇರುತ್ತಿದೆ. ಬೆಲೆಯೂ ಕುಸಿದಿದೆ.
- ಬಸವರಾಜ ಗೌಡ, ಅನಾನಸ್ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT