ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಪ್ರಾಣಿ, ಪಕ್ಷಿಗಳ ದಾಹ ನೀಗಿಸುವ ಭಕ್ತರು

ನ್ಯಾಸರ್ಗಿ ಆಂಜನೇಯ ಗುಡ್ಡದಲ್ಲಿ ವ್ಯವಸ್ಥೆ; ಅರಣ್ಯ ಇಲಾಖೆಯ ಸಹಕಾರ
Published 14 ಏಪ್ರಿಲ್ 2024, 5:36 IST
Last Updated 14 ಏಪ್ರಿಲ್ 2024, 5:36 IST
ಅಕ್ಷರ ಗಾತ್ರ

ಮುಂಡಗೋಡ: ಪ್ರಾಣಿ, ಪಕ್ಷಿಗಳ ಬಾಯಾರಿಕೆ ಇಂಗಿಸಲು, ದೇವಸ್ಥಾನದ ಆವರಣದಲ್ಲಿ ಬಕೆಟ್‌ಗಳಲ್ಲಿ ನೀರು,  ಪಕ್ಷಿಗಳಿಗೆ ಅಕ್ಕಿ ಸೇರಿದಂತೆ ಇತರ ದವಸಧಾನ್ಯಗಳನ್ನು ಇಡಲಾಗುತ್ತಿದೆ. ಎರಡು ಕಿ.ಮೀ ದೂರದಿಂದ ಭಕ್ತರು ಕೊಡದಲ್ಲಿ ತರುವ ನೀರನ್ನು ಪ್ರಾಣಿ ಪಕ್ಷಿಗಳಿಗೂ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ.

ತಾಲ್ಲೂಕಿನ ನ್ಯಾಸರ್ಗಿ ಆಂಜನೇಯ ಗುಡ್ಡದಲ್ಲಿ ಪ್ರಾಣಿ–ಪಕ್ಷಿಗಳ ಬಾಯಾರಿಕೆ ನೀಗಿಸಲು ಭಕ್ತರು ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ನ್ಯಾಸರ್ಗಿ ಗ್ರಾಮದಿಂದ ನಾಲ್ಕೈದು ಕಿ.ಮೀ ಅಂತರದಲ್ಲಿರುವ ಗುಡ್ಡದ ಆಂಜನೇಯ ದರ್ಶನ ಮಾಡಲು, ಪ್ರತಿ ಶನಿವಾರ ನೂರಾರು ಭಕ್ತರು ಬರುತ್ತಾರೆ. ರಸ್ತೆಯಿಂದ 2 ಕಿ.ಮೀ.ನಷ್ಟು ಗುಡ್ಡ ಏರಬೇಕು. ಪಾದಗಟ್ಟಿ ಹತ್ತಿರ ತುಂಬಿಟ್ಟಿರುವ ನೀರಿನ ಕೊಡಗಳನ್ನು ಭಕ್ತರೇ ಹೊತ್ತು ಗುಡ್ಡ ಏರುತ್ತಾರೆ. ಪೂಜೆ, ಪ್ರಸಾದಕ್ಕೆ ಬಳಸಿದ ನಂತರ, ಉಳಿದ ನೀರನ್ನು ಪ್ರಾಣಿ, ಪಕ್ಷಿಗಳಿಗೆ ದೇವಸ್ಥಾನದ ಎದುರಿಗೆ ಬಕೆಟ್‌ಗಳಲ್ಲಿ ತುಂಬಿಡುತ್ತಿದ್ದಾರೆ. ಬಿಸಿಲ ಬೇಗೆಗೆ ತತ್ತರಿಸಿರುವ ಪ್ರಾಣಿ, ಪಕ್ಷಿಗಳಿಗೆ ಇದರಿಂದ ಅನುಕೂಲವಾಗುತ್ತಿದೆ.

ʼದೇವಸ್ಥಾನದ ಆವರಣದಲ್ಲಿ ಯಾವುದೇ ನೀರಿನ ವ್ಯವಸ್ಥೆಯಿಲ್ಲ. ಭಕ್ತರೇ ಗುಡ್ಡದ ಕೆಳಗಿನಿಂದ ಕೊಡಗಳಲ್ಲಿ ತುಂಬಿಟ್ಟಿರುವ ನೀರನ್ನು ಹೊತ್ತು ತರುತ್ತಾರೆ. ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ, ತುಂಬಿಟ್ಟಿದ್ದ ನೀರಿನ ಟಾಕಿಯನ್ನು ಮಂಗಗಳು ಕೆಡವಿ ನೀರು ಕುಡಿಯುತ್ತಿದ್ದವು. ನೀರಿಗಾಗಿ ಪಾತ್ರೆಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ಇದನ್ನು ಕಂಡ ಮೇಲೆ, ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕೆಂಬ ಯೋಚನೆ ಬಂತು. ಅಂದಿನಿಂದ ಅಂದರೆ ಎರಡು ತಿಂಗಳಿನಿಂದ ವಾರದಲ್ಲಿ ಎರಡು ಬಾರಿ, ಎಂಟತ್ತು ದೊಡ್ಡ ಸ್ಟೀಲಿನ ಹಾಗೂ ಪ್ಲಾಸ್ಟಿಕ್‌ ಬಕೆಟ್‌ಗಳಲ್ಲಿ ನೀರನ್ನು ತುಂಬಿಡುತ್ತಿದ್ದೇವೆ. ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ಕಂಡುಬರುತ್ತಿರುವುದರಿಂದ, ಅವುಗಳಿಗೆ ಅಕ್ಕಿ ಸೇರಿದಂತೆ ಇನ್ನಿತರ ದವಸಧಾನ್ಯಗಳನ್ನು ಅಲ್ಲಲ್ಲಿ ಇಡುತ್ತಿದ್ದೇವೆ’ ಎನ್ನುತ್ತಾರೆ ಭಕ್ತ ಉದಯ ಶಿರಾಲಿ.

ʼಈ ಭಾಗದಲ್ಲಿ ಮಂಗಗಳು ಹೆಚ್ಚು, ಅವುಗಳಿಗೆ ಬಾಳೆಹಣ್ಣು ಹಾಗೂ ಪ್ರಸಾದವನ್ನು ಅಲ್ಲಲ್ಲಿ ಇಟ್ಟಿರುತ್ತೇವೆ.  ಗುಡ್ಡದ ಆಂಜನೇಯ ಕೆಳಗಡೆ ಭಾಗದಲ್ಲಿ, ಅಂದರೆ ಸುಮಾರು ಒಂದೂವರೆಯಿಂದ ಎರಡು ಕಿ.ಮೀ ಅಂತರದಲ್ಲಿ, ಕೊಳ್ಳ, ಕೆರೆಕಟ್ಟೆಗಳು ಇವೆ. ಆದರೆ, ಅಲ್ಲಿ ನೀರು ಬತ್ತಿರುವುದರಿಂದ, ಗುಡ್ಡದ ಮೇಲ್ಭಾಗದಲ್ಲಿ ಆಹಾರ, ನೀರಿಗಾಗಿ ಪ್ರಾಣಿ, ಪಕ್ಷಿಗಳು ಬರುತ್ತವೆ. ಶನಿವಾರ ಹೊರತುಪಡಿಸಿ, ಮಧ್ಯದ ದಿನಗಳಲ್ಲಿ ಬಂದರೂ, ಪ್ರಾಣಿಪಕ್ಷಿಗಳಿಗೆ ಆಗುವಷ್ಟು ನೀರನ್ನು ತುಂಬಿಸಿ ಹೋಗುತ್ತೇವೆ. ಸದ್ಯದ ಬಿಸಿಲಿಗೆ ಜನರೇ ಏದುಸಿರು ಬಿಡುತ್ತಿರುವಾಗ, ಪ್ರಾಣಿಪಕ್ಷಿಗಳಿಗೆ ಕೈಲಾದಷ್ಟು ಸಹಾಯ ಮಾಡುವುದು ಖುಷಿ ನೀಡುತ್ತದೆ’ ಎಂದು ಅರ್ಚಕ ಕೃಷ್ಣಮೂರ್ತಿ ರಾವ್‌, ಭಕ್ತರಾದ ವೆಂಕಟೇಶ ಖಟಾವಕರ, ರಾಜು ಹೇಳಿದರು.

ʼಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಲೆಂದು ದೇವಸ್ಥಾನದ ಆವರಣದಲ್ಲಿ ಸಣ್ಣ ತೊಟ್ಟಿ ನಿರ್ಮಿಸಲಾಗಿದೆ. ಅದರಲ್ಲಿ ವಾರಕ್ಕೊಮ್ಮೆ ನೀರು ತುಂಬಿಸುತ್ತೇವೆ. ಅದರಿಂದಲೂ ಅವುಗಳು ಬಾಯಾರಿಕೆಯನ್ನು ಇಂಗಿಸಿಕೊಳ್ಳುತ್ತಿವೆ. ಮಳೆಗಾಲ ಆರಂಭವಾಗುವರೆಗೂ ಈ ವ್ಯವಸ್ಥೆ ಮುಂದುವರೆಯಲಿದೆ. ಅರಣ್ಯ ಇಲಾಖೆಯವರೂ ಸಹಕರಿಸುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT