ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಬೀದಿನಾಯಿ ಕಡಿತ ಪ್ರಕರಣ ಹೆಚ್ಚಳ: ಆತಂಕ

Published 22 ಆಗಸ್ಟ್ 2024, 4:35 IST
Last Updated 22 ಆಗಸ್ಟ್ 2024, 4:35 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಷ್ಟೇ ಅಲ್ಲದೆ ಗ್ರಾಮೀಣ ಭಾಗದಲ್ಲಿಯೂ ಬೀದಿನಾಯಿಗಳ ಉಪಟಳ ಹೆಚ್ಚುತ್ತಿರುವ ಕುರಿತು ದೂರು ವ್ಯಾಪಕವಾಗಿದೆ. ಕಳೆದ ಏಳೂವರೆ ತಿಂಗಳಿನಲ್ಲಿ ಜಿಲ್ಲೆಯಲ್ಲಿ 5,494 ಬೀದಿ ನಾಯಿ ಕಡಿತದ ಪ್ರಕರಣ ದಾಖಲಾಗಿರುವುದು ಆತಂಕ ಸೃಷ್ಟಿಸಿದೆ.

ನಗರದ ಟ್ಯಾಗೋರ್ ಕಡಲತೀರದಲ್ಲಿ ಪಾಲಕರೊಂದಿಗೆ ನಿಂತಿದ್ದಾಗಲೆ ನಾಲ್ಕು ವರ್ಷದ ಬಾಲಕಿಯೊಬ್ಬಳ ಮೇಲೆ ಬೀದಿನಾಯಿ ಎರಡು ದಿನದ ಹಿಂದೆ ದಾಳಿ ನಡೆಸಿ ಗಾಯಗೊಳಿಸಿತ್ತು. ಇಂತಹ ಹಲವು ಘಟನೆಗಳು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಡೆಯುತ್ತಿದೆ. ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ನಾಯಿಗಳು ಜನರ ಮೇಲೆ ದಾಳಿ ನಡೆಸುವ ದೂರು ಹೆಚ್ಚಿದೆ.

ರಾತ್ರಿ ಅವಧಿಯಲ್ಲಿ ನಾಯಿಗಳ ದಾಳಿ ಹೆಚ್ಚು ನಡೆಯುತ್ತಿದೆ. ಹಗಲಿನ ವೇಳೆ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ ಹಲವು ಘಟನೆಗಳು ಶಿರಸಿ, ಕಾರವಾರ, ಕುಮಟಾ ಸೇರಿದಂತೆ ಹಲವೆಡೆ ವರದಿಯಾಗಿದೆ. ಇದರಿಂದ ಮಕ್ಕಳನ್ನು ಒಬ್ಬಂಟಿಯಾಗಿ ಕಳಿಸಲು ಪಾಲಕರು ಹಿಂದೇಟು ಹಾಕುವ ಸ್ಥಿತಿ ಉಂಟಾಗಿದೆ.

ಪಶು ಸಂಗೋಪನಾ ಇಲಾಖೆ ಈ ಹಿಂದೆ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಾದ್ಯಂತ ಅಂದಾಜು 75 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳು ಇರುವುದಾಗಿ ಅಂದಾಜಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇವೆ ಎಂಬುದಾಗಿ ಇಲಾಖೆಯ ವರದಿಗಳು ಹೇಳುತ್ತಿವೆ.

‘ನಗರ ವ್ಯಾಪ್ತಿಯಲ್ಲಷ್ಟೆ ಅಲ್ಲದೆ ಹಳ್ಳಿಗಳಲ್ಲಿಯೂ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಿದೆ. ನಗರ ವ್ಯಾಪ್ತಿಯಲ್ಲಿ ಅವುಗಳಿಂದ ಎದುರಾಗುತ್ತಿರುವ ಉಪಟಳ ಹೆಚ್ಚಿದೆ. ಪ್ರತಿ ವರ್ಷ ನಗರ ಸ್ಥಳೀಯ ಸಂಸ್ಥೆಗಳು ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ವ್ಯಯಿಸುತ್ತಿದ್ದರೂ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ದೀಪಕ ನಾಯ್ಕ ದೂರುತ್ತಾರೆ.

‘ಹೊಟೆಲ್ ತ್ಯಾಜ್ಯ, ಮಾಂಸಾಹಾರಗಳನ್ನು ಕಸದ ತೊಟ್ಟಿ ಅಥವಾ ಖಾಲಿ ಜಾಗದಲ್ಲಿ ಎಸೆಯಲಾಗುತ್ತಿದೆ. ಇವುಗಳು ಬೀದಿನಾಯಿಗಳ ಬೆಳವಣಿಗೆಗೆ ಅನುಕೂಲವಾಗಿವೆ. ಅನಾರೋಗ್ಯಕ್ಕೆ ತುತ್ತಾಗುವ ನಾಯಿಗಳನ್ನು ಸೆರೆಹಿಡಿಯುವ ಅಥವಾ ಅವುಗಳಿಗೆ ಚಿಕಿತ್ಸೆ ನೀಡುವ ಕೆಲಸ ನಡೆಯುತ್ತಿಲ್ಲ. ರೇಬಿಸ್ ತಗುಲಿದ ನಾಯಿಗಳ ಓಡಾಟವೂ ಹೆಚ್ಚುತ್ತಿದೆ. ಇವುಗಳಿಂದ ಮಕ್ಕಳು, ಜನರಿಗೆ ಅಪಾಯ ಕಟ್ಟಿಟ್ಟಬುತ್ತಿ’ ಎನ್ನುತ್ತಾರೆ ಪೂಜಾ ಕಳಸ.

ನಾಯಿ ಕಡಿತಕ್ಕೆ ಚಿಕಿತ್ಸೆಗೆ ಅಗತ್ಯ ಔಷಧಗಳು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಸ್ತಾನಿದೆ. ಹುಚ್ಚು ನಾಯಿ ಕಡಿದರೆ ಚಿಕಿತ್ಸೆಗೆ ಅಗತ್ಯವಿರುವ ಆರ್.ಐ.ಜಿ ಹೆಚ್ಚು ದಾಸ್ತಾನು ಇಲ್ಲಡಾ.
ನೀರಜ್ ಬಿ.ವಿ,ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT