ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಹಾನಿ ₹ 59 ಕೋಟಿ, ಪರಿಹಾರ ₹ 11 ಕೋಟಿ!

ಬರಹಾನಿಗೆ ಬಿಡಿಗಾಸು ಪರಿಹಾರ ನೀಡದ ಕೇಂದ್ರ, ರಾಜ್ಯದ ಅಲ್ಪ ಮೊತ್ತಕ್ಕೆ ಅಸಮಾಧಾನ
Published 8 ಫೆಬ್ರುವರಿ 2024, 5:29 IST
Last Updated 8 ಫೆಬ್ರುವರಿ 2024, 5:29 IST
ಅಕ್ಷರ ಗಾತ್ರ

ಕಾರವಾರ: ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಬೀಳದೇ ಜಿಲ್ಲೆಯಲ್ಲಿ ಬರದ ಸ್ಥಿತಿ ಆವರಿಸಿದೆ. ಕೈಸೇರಬೇಕಿದ್ದ ಫಸಲು ಸಿಗದೆ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದ ಪರಿಹಾರ ಮೊತ್ತವಾದರೂ ಸಿಗಬಹುದೆಂಬ ಕನಸು ಕಮರಿದೆ.

ಮಳೆ ಕೊರತೆಯ ಪರಿಣಾಮದಿಂದ ಹೊನ್ನಾವರ ಹೊರತುಪಡಿಸಿ ಉಳಿದ ಎಲ್ಲ 11 ತಾಲ್ಲೂಕುಗಳನ್ನು ಬರ ಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಜಿಲ್ಲೆಯಲ್ಲಿ ಈ ಬಾರಿ 58,345 ಹೆಕ್ಟೇರ್ ಪ್ರದೇಶದಲ್ಲಿ ಬರದ ಸ್ಥಿತಿಯಿಂದ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆಯು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಬೆಳೆ ಹಾನಿಯ ಮೊತ್ತ ಅಂದಾಜು ₹ 59.60 ಕೋಟಿ ಎಂದು ಅಂದಾಜಿಸಲಾಗಿತ್ತು.

ಆದರೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್.ಡಿ.ಆರ್.ಎಫ್) ಮಾರ್ಗಸೂಚಿ ಅನ್ವಯಿಸಿ ಪ್ರತಿ ಹೆಕ್ಟೇರ್ ಬೆಳೆಹಾನಿಗೆ ಪರಿಹಾರ ನೀಡಬೇಕಿದ್ದ ಕೇಂದ್ರ ಸರ್ಕಾರ ಈವರೆಗೆ ಬಿಡಿಗಾಸೂ ಪರಿಹಾರ ನೀಡಿಲ್ಲ ಎಂಬ ಆರೋಪವಿದೆ. ಈವರೆಗೆ ರೈತರ ಖಾತೆಗೆ ಕೇಂದ್ರದ ಪರಿಹಾರ ಮೊತ್ತ ಪಾವತಿಯಾಗಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ರೈತರ ಅಸಮಾಧಾನ ಶಮನಗೊಳಿಸುವ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರವು ಪ್ರತಿ ರೈತರ ಖಾತೆಗೆ ತಲಾ ₹ 2 ಸಾವಿರ ಮೊತ್ತ ಜಮಾ ಮಾಡಿದೆ. ಜಿಲ್ಲೆಯಲ್ಲಿ ಒಟ್ಟು ಐದು ಹಂತದಲ್ಲಿ 71,803 ರೈತರ ಖಾತೆಗೆ ₹11.31 ಕೋಟಿ ಮೊತ್ತ ಪಾವತಿಯಾಗಿದೆ.

‘ಬರ ಪರಿಹಾರಕ್ಕೆ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಪ್ರತಿ ಹೆಕ್ಟೇರ್ ಬೆಳೆಹಾನಿಗೆ ತಲಾ ₹ 6,800 ಪರಿಹಾರ ಮೊತ್ತ ಪಾವತಿಯಾಗಬೇಕಿದೆ. ಈ ಮೊತ್ತ ಇನ್ನಷ್ಟೇ ಪಾವತಿಯಾಗಬೇಕಿದ್ದು ಸರ್ಕಾರಕ್ಕೆ ಹಾನಿಯ ಸಂಪೂರ್ಣ ವರದಿ ಸಲ್ಲಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೌಡ ತಿಳಿಸಿದರು.

‘ಮಳೆಯಾಶ್ರಿತ ಬೆಳೆಯನ್ನೇ ಜಿಲ್ಲೆಯ ರೈತರು ಅವಲಂಬಿಸಿದ್ದಾರೆ. ಮಳೆಯ ಕೊರತೆಯಿಂದ ದೊಡ್ಡ ಮಟ್ಟದಲ್ಲಿ ಹಾನಿ ಉಂಟಾಗಿದೆ. ಪ್ರತಿ ಎಕರೆಗೆ ಸಾವಿರಾರು ರೂಪಾಯಿ ವ್ಯಯಿಸಿ ಕೃಷಿ ಮಾಡಿದ್ದ ರೈತರು ಸಾಲಕ್ಕೆ ತುತ್ತಾಗಿದ್ದಾರೆ. ಸರ್ಕಾರ ನೀಡುವ ಬಿಡಿಗಾಸಿನ ಪರಿಹಾರದಿಂದ ಯಾವ ಪ್ರಯೋಜನವೂ ಆಗದು. ಅಲ್ಪ ಮೊತ್ತವನ್ನೂ ನೀಡಲಾಗದ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ’ ಎಂದು ಹಸಿರು ಸೇನೆ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ದೂರಿದರು.

₹100 ಸೇರಿಸಿ ಮರಳಿಸುತ್ತೇವೆ
‘ತೀವ್ರ ಬರಗಾಲದ ಸ್ಥಿತಿಯಿಂದ ರೈತರು ಚಿಂತಾಕ್ರಾಂತರಾಗಿದ್ದು ಆರ್ಥಿಕ ನಷ್ಟ ಎದುರಿಸುತ್ತಿದ್ದರೆ ಸರ್ಕಾರಗಳು ಪರಿಹಾರ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿವೆ. ಕೇಂದ್ರ ಸರ್ಕಾರದಿಂದ ನಯಾಪೈಸೆ ಪರಿಹಾರ ಬಂದಿಲ್ಲ. ರಾಜ್ಯ ಸರ್ಕಾರ ಪ್ರತಿ ರೈತರಿಗೆ ₹2 ಸಾವಿರ ಪರಿಹಾರ ಮೊತ್ತ ನೀಡಿ ರೈತರ ಜೀವನವನ್ನೇ ಲೇವಡಿ ಮಾಡಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡಲಾಗದ ದಿವಾಳಿ ಸ್ಥಿತಿಯಲ್ಲಿ ಸರ್ಕಾರ ಇದೆ ಎಂದಾದರೆ ರೈತರೇ ಸರ್ಕರ ನೀಡಿರುವ ಪರಿಹಾರ ಮೊತ್ತಕ್ಕೆ ₹100 ಸೇರಿಸಿ ಮರಳಿಸುತ್ತೇವೆ. ಈ ಮೂಲಕ ರೈತ ವಿರೋಧಿ ನೀತಿ ಖಂಡಿಸುತ್ತೇವೆ’ ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT