ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಬಂದರು ಹೂಳೆತ್ತಲು ಸಿದ್ಧತೆ

ಐದು ವರ್ಷಗಳ ಬಳಿಕ ಆಳವಾಗಲಿದೆ ಹಡಗು ಚಲಿಸುವ ಕಾಲುವೆ
Published 29 ಡಿಸೆಂಬರ್ 2023, 5:21 IST
Last Updated 29 ಡಿಸೆಂಬರ್ 2023, 5:21 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿಯ ವಾಣಿಜ್ಯ ಬಂದರಿಗೆ ಸರಕು ಹೊತ್ತು ತರುವ ಹಡಗುಗಳು ಸಂಚರಿಸುವ ಮಾರ್ಗ, ಲಂಗರು ಹಾಕುವ ವಾರ್ಫ್ (ಹಡಗು ಕಟ್ಟೆ) ಆಳ ಹೆಚ್ಚಿಸುವ ಸಲುವಾಗಿ ಹೂಳು ತೆಗೆಯುವ ಕಾರ್ಯ ಶೀಘ್ರವೇ ಆರಂಭಗೊಳ್ಳಲಿದೆ. ಇದಕ್ಕಾಗಿ ಸಿದ್ಧತೆ ನಡೆದಿದ್ದು ಹೂಳು ತೆಗೆಯುವ ಯಂತ್ರಗಳು ಬಂದಿವೆ.

2018ರಲ್ಲಿ ವಾಣಿಜ್ಯ ಬಂದರು ವ್ಯಾಪ್ತಿಯಲ್ಲಿ ಹೂಳು ತೆಗೆಯುವ ಕೆಲಸ ನಡೆದಿತ್ತು. ₹ 32 ಕೋಟಿ ವೆಚ್ಚದಲ್ಲಿ ಚೆನ್ನೈ‍ನ ಖಾಸಗಿ ಕಂಪನಿಯೊಂದು ಆರೇಳು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿ ಹೂಳು ತೆಗೆದಿತ್ತು. ಐದು ವರ್ಷಗಳ ಬಳಿಕ ಈಗ ಹೂಳು ತೆಗೆಯುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಬ್ಯಾಕ್ ಹೋ (ಹೂಳು ತೆಗೆಯುವ ಯಂತ್ರ) ಒಳಗೊಂಡ ಹಡಗೊಂದು ಬಂದರು ಸಮೀಪದಲ್ಲಿ ಬಂದು ನಿಂತಿದೆ.

‘ವಾಣಿಜ್ಯ ಬಂದರಿನ ವಾರ್ಫ್, ಹಡಗು ತಿರುಗುವ ಸ್ಥಳ, ಹಡಗು ಬಂದರು ಒಳಪ್ರವೇಶಿಸುವ ಮಾರ್ಗ, ಹೊರಗೆ ಹೋಗುವ ಮಾರ್ಗಗಳಲ್ಲಿ ಹೂಳು ತೆಗೆಯುವ ಕೆಲಸ ನಡೆಯಲಿದೆ. ಈ ಪ್ರದೇಶಗಳಲ್ಲಿ ಸದ್ಯ ಸರಾಸರಿ 6.5 ಮೀ.ನಿಂದ 7.5 ಮೀ.ವರೆಗೆ ಆಳವಿದೆ. ಅದನ್ನು 8.5 ಮೀ.ಗೆ ಹೆಚ್ಚಿಸಲಾಗುತ್ತದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ವಿ. ಪ್ರಸಾದ್ ತಿಳಿಸಿದರು.

‘ಕಳೆದ ವರ್ಷವೇ ಬಂದರಿನಲ್ಲಿ ಹೂಳು ತುಂಬಿಕೊಂಡಿರುವ ಪ್ರಮಾಣದ ಕುರಿತು ಸಮೀಕ್ಷೆ ಕಾರ್ಯ ನಡೆದಿತ್ತು. ವಾಣಿಜ್ಯ ಬಂದರಿನಿಂದ ಹಡಗು ಹೊರಕ್ಕೆ ಹೋಗುವ ಸುಮಾರು 3.5 ಕಿ.ಮೀದಿಂದ 4 ಕಿ.ಮೀ ದೂರದವರೆಗೆ 17.5 ಲಕ್ಷ ಘನ ಮೀಟರ್ ಹೂಳು ತುಂಬಿಕೊಂಡಿದೆ. ಅದನ್ನು ತೆರವುಗೊಳಿಸಿ ಹಡಗುಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ತೆಗೆದ ಹೂಳನ್ನು ಐದು ನಾಟಿಕಲ್ ಮೈಲು ದೂರದ ಆಳಪ್ರದೇಶಕ್ಕೆ ಕೊಂಡೊಯ್ದು ಹಾಕಲಾಗುತ್ತದೆ’ ಎಂದು ವಿವರಿಸಿದರು.

‘ಬ್ಯಾಕ್ ಹೋ ಯಂತ್ರ ಹೊಂದಿರುವ ಹಡಗು ವಾರ್ಫ್, ಹಡಗು ತಿರುಗುವ ಸ್ಥಳದಲ್ಲಿ ಹೂಳು ತೆಗೆಯುವ ಕೆಲಸ ನಡೆಸಲಿದೆ. ಹಡಗು ಸಂಚರಿಸುವ ಮಾರ್ಗದಲ್ಲಿ ಹೂಳು ತೆಗೆಯುವ ಅತ್ಯಾಧುನಿಕ ತಂತ್ರಜ್ಞಾನದ ಟಿ.ಎಸ್.ಎಚ್.ಡಿ ಸೌಲಭ್ಯದ ಹಡಗು ಹೂಳು ತೆಗೆಯಲಿದೆ. ಏಕಕಾಲಕ್ಕೆ ಅದು 7 ಸಾವಿರ ಘನ ಮೀಟರ್ ಹೂಳು ತೆರವುಗೊಳಿಸುವ ಸಾಮರ್ಥ್ಯ ಹೊಂದಿದೆ’ ಎಂದರು.

‘ವಾಣಿಜ್ಯ ಬಂದರು ಹೂಳು ತೆಗೆಯಲು ಮುಂಬೈ ಮೂಲದ ಡಿ.ವಿ.ಪಿ ಇನ್‍ಫ್ರಾ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಗುತ್ತಿಗೆ ಪಡೆದಿದೆ. ₹ 36 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಒಂದೆರಡು ದಿನಗಳೊಳಗೆ ಕೆಲಸ ಆರಂಭಗೊಳ್ಳಲಿದೆ’ ಎಂದೂ ತಿಳಿಸಿದರು.

ವಾಣಿಜ್ಯ ಬಂದರಿನಲ್ಲಿ ಪ್ರತಿ ವರ್ಷವೂ ಹೂಳು ತೆಗೆದರೆ ಹಡಗುಗಳ ಸಂಚಾರಕ್ಕೆ ಸುಗಮ ಅವಕಾಶವಾಗುತ್ತದೆ. ಐದು ವರ್ಷದ ಬಳಿಕ ಹೂಳು ತೆಗೆಯಲು ಆರಂಭಿಸುತ್ತಿದ್ದೇವೆ.

- ಂ.ವಿ.ಪ್ರಸಾದ್ ಎಕ್ಸಿಕ್ಯೂಟಿವ್ ಎಂಜಿನಿಯರ್ ಬಂದರು ಜಲಸಾರಿಗೆ ಮಂಡಳಿ

ಬೈತಕೋಲ ಬಂದರಿನಲ್ಲಿ ಸರ್ವೆ

‘ಬೈತಕೋಲದ ಮೀನುಗಾರಿಕೆ ಬಂದರಿನಲ್ಲಿ ಹೂಳು ತೆಗೆಯಲು ₹3.5 ಕೋಟಿ ಮೀಸಲಿಡಲಾಗಿದೆ. ಸಿ.ಆರ್.ಝಡ್ ಅನುಮತಿಯೂ ಸಿಕ್ಕಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರವೇ ಅದು ಮುಗಿಯಲಿದೆ. ಹೂಳಿನ ಪ್ರಮಾಣದ ಕುರಿತು ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ. ಅವೆಲ್ಲ ಮುಗಿದ ಬಳಿಕ ಹೂಳು ತೆಗೆಯುವ ಕೆಲಸ ನಡೆಯಲಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ಇಇ ಎಂ.ವಿ.ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT