ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ವೆನಿಲ್ಲಾ ತೀವ್ರ ದರ ಕುಸಿತ: ಬಳ್ಳಿ ಮಾರಿ ಆದಾಯ ಕಂಡುಕೊಂಡ ಬೆಳೆಗಾರರು

Published 20 ನವೆಂಬರ್ 2023, 5:53 IST
Last Updated 20 ನವೆಂಬರ್ 2023, 5:53 IST
ಅಕ್ಷರ ಗಾತ್ರ

ಶಿರಸಿ: ಹವಾಮಾನ ವೈಪರಿತ್ಯದಿಂದ ಇಳುವರಿ ಕುಂಠಿತದ ಜತೆ ದರ ಕುಸಿತದ ಕಾರಣಕ್ಕೆ ವೆನಿಲ್ಲಾ ಬೆಳೆಗಾರರು ಬಳ್ಳಿ ಮಾರಾಟದತ್ತ ಚಿತ್ತ ಹರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ದಶಕದ ಹಿಂದೆ ಬಂಗಾರದ ಬೆಳೆಯಾಗಿದ್ದ ವೆನಿಲ್ಲಾ ವಿವಿಧ ಕಾರಣಗಳಿಂದ ರೈತರ ತೋಟದಿಂದ ದೂರಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಉತ್ಸಾಹಿ ರೈತರು ವೆನಿಲ್ಲಾ ಕೃಷಿಯತ್ತ ಹೊರಳಿದ್ದರು. ಬೆರಳೆಣಿಕೆ ಬೆಳೆಗಾರರು ದೊಡ್ಡ ಪ್ರಮಾಣದಲ್ಲಿ ಈ ಕೃಷಿಯಲ್ಲಿ ತೊಡಗಿದರೂ, ನೂರಾರು ಕೃಷಿಕರು ತಮ್ಮ ತೋಟ, ಬೆಟ್ಟಗಳಲ್ಲಿ ನೂರರ ಲೆಕ್ಕದಲ್ಲಿ ಬಳ್ಳಿ ನಾಟಿ ಮಾಡಿ ಫಸಲು ಕೊಯ್ಲು ಆರಂಭಿಸಿದ್ದರು. ಆದರೆ ಪ್ರಸಕ್ತ ವರ್ಷ ಮಳೆಯಾಗದ ಕಾರಣ ವೆನಿಲ್ಲಾ ಬೀನ್ಸ್ ನಿರೀಕ್ಷಿತ ಗುಣಮಟ್ಟ ಬಂದಿಲ್ಲ. ಈವರೆಗೆ ‘ಎ’ ಗ್ರೇಡ್ ಫಸಲು ತೆಗೆಯುತ್ತಿದ್ದ ಬಹುತೇಕ ಬೆಳೆಗಾರರದ್ದು ‘ಸಿ’ ಗ್ರೇಡ್ ಬೀನ್ಸ್ ಪ್ರಮಾಣವೇ ಹೆಚ್ಚಿದೆ. ಇದರಿಂದ ಹತಾಶರಾದ ರೈತರು ಬಳ್ಳಿಯನ್ನು ಮಾರುತ್ತಿದ್ದಾರೆ.

ಜಾಗತಿಕವಾಗಿ ಹೆಚ್ಚಿನ ಪ್ರಮಾಣದಲ್ಲಿ ವೆನಿಲ್ಲಾ ಬೆಳೆಯುವ ಉಗಾಂಡ, ಇಂಡೋನೇಶಿಯಾ, ಮಡಗಾಸ್ಕರ್ ಭಾಗದಿಂದ ದೇಶದ ಮಾರುಕಟ್ಟೆಗೆ ಕಡಿಮೆ ಬೆಲೆಗೆ ವೆನಿಲ್ಲಾ ಆಮದಾಗುತ್ತಿದೆ. ಹೀಗಾಗಿ ಮೂರು ವರ್ಷಗಳಿಂದ ಇಳಿಮುಖವಾಗುತ್ತ ಸಾಗಿದ್ದ ವೆನಿಲ್ಲಾ ದರ ಈ ವರ್ಷ ಕನಿಷ್ಠಮಟ್ಟಕ್ಕೆ ತಲುಪಿದೆ. ಕೆಜಿ ಹಸಿ ಬೀನ್ಸ್ ದರ ₹200–300ಕ್ಕೆ ಕುಸಿತವಾಗಿದೆ. ಒಣಗಿದ ಬೀನ್ಸ್ ದರ ಕೆಜಿಗೆ ₹1500ರಿಂದ ಆರಂಭವಾಗುತ್ತದೆ. ಕಾರಣ ಸ್ಥಳೀಯ ಉತ್ಪನ್ನಕ್ಕೆ ಸೂಕ್ತ ದರ ಸಿಗದಂತಾಗಿದೆ. ಉತ್ತಮ ದರದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಇದು ಹತಾಶ ತಂದಿದೆ’ ಎಂಬುದು ಬೆಳೆಗಾರರ ಮಾತಾಗಿದೆ.

ದರ ಇಳಿಕೆಯ ಕಾರಣ ಕಳೆದ ವರ್ಷಗಳಲ್ಲಿ ₹1 ಸಾವಿರಕ್ಕೆ ಕೆಜಿ ಹಸಿ ಬೀನ್ಸ್ ಖರೀದಿಸಿ ಒಣಗಿಸಿ ಸಂಗ್ರಹಿಸಿದ್ದ ವ್ಯಾಪಾರಿಗಳಿಗೆ ನಷ್ಟದ ಪ್ರಮಾಣ ಹೆಚ್ಚಿದೆ. ಹೀಗಾಗಿ ಪ್ರಸಕ್ತ ವರ್ಷ ವ್ಯಾಪಾರಿಗಳು ಒಣ ಬೀನ್ಸ್ ಖರೀದಿಗೆ ಆಸಕ್ತಿ ತೋರುತ್ತಿಲ್ಲ. ಜತೆಗೆ, ಈ ಬಾರಿ ಗುಣಮಟ್ಟದ ಹಸಿ ಬೀನ್ಸ್ ಲಭ್ಯವಾಗದ ಕಾರಣ ಗ್ರೇಡ್ ಮಾನದಂಡ ಅನುಸರಿಸದೆ ಸಟ್ಟಾ ಖರೀದಿಸುತ್ತಿದ್ದಾರೆ. ಇದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ. ಇಂಥ ಸಮಸ್ಯ ನೀಗಲು ಸ್ವತಃ ಬೆಳೆಗಾರರು ಬಳ್ಳಿಯನ್ನು ಇತರ ಆಸಕ್ತ ರೈತರಿಗೆ ಸೂಕ್ತ ಬೆಲೆಗೆ ಮಾರುತ್ತಿದ್ದಾರೆ. ಮೀಟರ್ ಅಳತೆಯ ಬಳ್ಳಿಗೆ ₹70–₹80ರಂತೆ ಮಾರಲಾಗುತ್ತಿದೆ. ಇದು ಬೀನ್ಸ್‌ ಬೆಳೆದು ಮಾರುವುದಕ್ಕಿಂತ ಹೆಚ್ಚಿನ ಲಾಭ ತಂದು ಕೊಡುತ್ತದೆ ಎಂಬುದು ರೈತರ ಮಾತಾಗಿದೆ.

‘ಜಿಲ್ಲೆಯಲ್ಲಿ 1200ಕ್ಕೂ ಹೆಚ್ಚು ವೆನಿಲ್ಲಾ ಬೆಳೆಗಾರರಿದ್ದಾರೆ. ಅವರಲ್ಲಿ ಕೆಲವರು ಮಾತ್ರ ಬೀನ್ಸ್ ಸಂಸ್ಕರಿಸಿ ಸಂಗ್ರಹಿಸುತ್ತಿದ್ದಾರೆ. ಬಹುತೇಕ ಸಣ್ಣ ಬೆಳೆಗಾರರಿದ್ದು, ಅವರು ಹಸಿ ಬೀನ್ಸ್ ಮಾರುತ್ತಿದ್ದಾರೆ. ಸಮರ್ಪಕ ದರ ಲಭಿಸದ ಕಾರಣ ಅಂಥ ಬೆಳೆಗಾರರು ಆಸಕ್ತ ರೈತರಿಗೆ ಬಳ್ಳಿ ಮಾರುತ್ತಿದ್ದಾರೆ’ ಎಂಬುದು ಶಿರಸಿಯ ವೆನಿಲ್ಲಾ ವ್ಯಾಪಾರಿ ರವೀಂದ್ರ ಭಟ್ ಅಭಿಪ್ರಾಯ.

ವೆನಿಲ್ಲಾ ಬೀನ್ಸ್‌ಗೆ ಕಳೆದೆರಡು ವರ್ಷಗಳಿಂದ ಲಭಿಸುತ್ತಿರುವ ದರಕ್ಕೆ ಹೋಲಿಕೆ ಮಾಡಿದರೆ ಬೀನ್ಸ್ ಬೆಳೆಯುವುದಕ್ಕಿಂತ ಬಳ್ಳಿ ಮಾರಿದರೇ ಹೆಚ್ಚಿನ ಆದಾಯ ಬರುತ್ತಿದೆ
–ಶ್ರೀಧರ ಹೆಗಡೆ ಶಿರಸಿ– ವೆನಿಲ್ಲಾ ಬೆಳೆಗಾರ
ಬೆಳೆಗಾರರು ವೆನಿಲ್ಲಾ ಬೀನ್ಸ್ ಒಣಗಿಸಿ ವ್ಯಾಕ್ಯೂಮ್ ಪ್ಯಾಕ್ ಮಾಡಿಟ್ಟುಕೊಂಡರೆ ಕನಿಷ್ಠ 4ರಿಂದ 5 ವರ್ಷ ಕೆಡದಂತೆ ಇಡಬಹುದು. ದರ ಏರಿಕೆಯಾದಾಗ ಮಾರಬಹುದು. ದೊಡ್ಡ ಮಟ್ಟದಲ್ಲಿ ಬಳ್ಳಿ ಬೆಳೆದು ಮಾರಿದರೂ ಲಾಭದಾಯಕವೇ ಆಗುತ್ತದೆ
– ಸತೀಶ ಹೆಗಡೆ– ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT