ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಮಾರಿಕಾಂಬೆ ಸನ್ನಿಧಿಯಲ್ಲಿ ಇ–ಹುಂಡಿ, ಕ್ಯೂಆರ್ ಕೋಡ್ ಅಳವಡಿಕೆ

ಆನ್‍ಲೈನ್ ಮೂಲಕ ಕಾಣಿಕೆ ಪಾವತಿಗೆ ಅವಕಾಶ
Last Updated 26 ಅಕ್ಟೋಬರ್ 2022, 4:07 IST
ಅಕ್ಷರ ಗಾತ್ರ

ಶಿರಸಿ: ವಾರ್ಷಿಕವಾಗಿ ಸಾವಿರಾರು ಭಕ್ತರು ಭೇಟಿ ನೀಡುವ ಇಲ್ಲಿನ ಮಾರಿಕಾಂಬಾ ದೇವಾಲಯದಲ್ಲಿ ‘ಇ–ಹುಂಡಿ’ ಸೇವೆ ಆರಂಭಿಸಲಾಗಿದೆ. ಈ ಮೂಲಕ ಭಕ್ತರು ಆನ್‍ಲೈನ್ ಪಾವತಿ ಮೂಲಕ ಕಾಣಿಕೆ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೆರವಿನೊಂದಿಗೆ ದೇವಸ್ಥಾನದ ಧರ್ಮದರ್ಶಿ ಮಂಡಳಿ ಇದೇ ಮೊದಲ ಬಾರಿಗೆ ಮಾರಿಕಾಂಬಾ ದೇವಾಲಯದಲ್ಲಿ ಇ–ಹುಂಡಿ ಸೇವೆ ಪರಿಚಯಿಸಿದೆ. ದೇವಸ್ಥಾನದ ಮೂರು ಕಡೆಗಳಲ್ಲಿ, ಎದುರಿನಲ್ಲಿರುವ ಉಪದೇವಾಲಯ, ಮರ್ಕಿದುರ್ಗಿ ದೇವಸ್ಥಾನದ ಸೇರಿದಂತೆ ಒಟ್ಟೂ 6 ಕಡೆಗಳಲ್ಲಿ ಕ್ಯೂಆರ್ ಕೋಡ್ ಇರುವ ಫಲಕ ಅಳವಡಿಕೆ ಮಾಡಲಾಗಿದೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಕ್ತರು ಕಾಣಿಕೆ ಪಾವತಿಸಬಹುದಾಗಿದೆ. ಗೂಗಲ್ ಪೇ, ಫೋನ್ ಪೇ, ಭೀಮ್ ಆ‍್ಯಪ್ ಸೇರಿದಂತೆ ವಿವಿಧ ಬಗೆಯ ಆನ್‍ಲೈನ್ ಪಾವತಿಗೆ ಇರುವ ಆ‍್ಯಪ್ ಬಳಸಿ ಭಕ್ತರು ಕಾಣಿಕೆ ಸಲ್ಲಿಸಬಹುದಾಗಿದೆ. ಈ ಮೊತ್ತ ದೇವಸ್ಥಾನದ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಆಗಲಿದೆ.

‘ಒಂದು ತಿಂಗಳ ಹಿಂದೆಯೇ ಇ–ಹುಂಡಿ ಸೇವೆ ಆರಂಭಿಸಲಾಗಿದೆ. ನವರಾತ್ರಿ ಉತ್ಸವದ ವೇಳೆ ವ್ಯಾಪಕ ಸಂಖ್ಯೆಯಲ್ಲಿ ಭೇಟಿ ನೀಡಿದ್ದ ಭಕ್ತರ ಪೈಕಿ ಹಲವರು ಇ–ಹುಂಡಿ ಮೂಲಕ ಕಾಣಿಕೆ ಅರ್ಪಿಸಿದ್ದಾರೆ. ವಿಶೇಷವಾಗಿ ಈಗಿನ ಯುವಕ, ಯುವತಿಯರು ಈ ಸೇವೆ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ’ ಎಂದು ದೇವಸ್ಥಾನದ ವ್ಯವಸ್ಥಾಪಕ ಚಂದ್ರಕಾಂತ್ ತಿಳಿಸಿದರು.

‘ದೇವಸ್ಥಾನದಲ್ಲಿ ಆನ್‍ಲೈನ್ ಮೂಲಕ ಕಾಣಿಕೆ ಪಾವತಿಗೆ ಅವಕಾಶ ಕಲ್ಪಿಸುವಂತೆ ಭಕ್ತರಿಂದಲೂ ಕೋರಿಕೆ ಇದ್ದವು. ಎಲ್ಲೆಡೆ ನಗದು ರಹಿತ ವ್ಯವಸ್ಥೆ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ದೇವಸ್ಥಾನದಲ್ಲಿಯೂ ಇಂತಹ ವ್ಯವಸ್ಥೆ ಜಾರಿಗೆ ತರುವ ಉದ್ದೇಶಕ್ಕೆ ಇ–ಹುಂಡಿ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು’ ಎಂದು ದೇವಸ್ಥಾನದ ಅಧ್ಯಕ್ಷ ಆರ್.ಜಿ.ನಾಯ್ಕ ಪ್ರತಿಕ್ರಿಯಿಸಿದರು.

‘ಕಾಣಿಕೆ ಡಬ್ಬಿಯಲ್ಲಿ ಸಂಗ್ರಹವಾಗುವ ಮೊತ್ತವನ್ನು ಪ್ರತಿ ಎರಡು ಮೂರು ತಿಂಗಳಿಗೊಮ್ಮೆ ಎಣಿಸಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇ–ಹುಂಡಿ ಸೇವೆಯಿಂದ ಕಾಣಿಕೆ ನೇರವಾಗಿ ದೇವಸ್ಥಾನದ ಬ್ಯಾಂಕ್ ಖಾತೆಗೆ ಜಮಾವಣೆಯಾಗಲಿದೆ’ ಎಂದರು.

*
ಭಕ್ತರು ನೀಡಿದ ಹಣ ತಕ್ಷಣ ಖಾತೆಗೆ ಜಮಾ ಆಗುವುದರಿಂದ ದೇವಸ್ಥಾನಕ್ಕೆ ಅಗತ್ಯ ವಸ್ತುಗಳ ಖರೀದಿಗೆ ಹಣ ಪಾವತಿಸಲು ಅವಕಾಶವಾಗುತ್ತದೆ.
-ಆರ್.ಜಿ.ನಾಯ್ಕ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT