ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಲಬಾಧೆ: 45 ರೈತರು ಆತ್ಮಹತ್ಯೆ

ಕೋವಿಡ್ ಬಳಿಕ ಹೆಚ್ಚುತ್ತಿರುವ ಅನ್ನದಾತರ ಆತ್ಮಹತ್ಯೆ ಘಟನೆ
Published 25 ಮೇ 2024, 7:04 IST
Last Updated 25 ಮೇ 2024, 7:04 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಸಾಂಕ್ರಾಮಿಕ ತಲೆದೋರಿದ ಬಳಿಕ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆ ಹೆಚ್ಚತೊಡಗಿರುವುದು ಕಳವಳ ಸೃಷ್ಟಿಸಿದೆ.

ಕೃಷಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಸಾಲಬಾಧೆ, ಬೆಳೆ ಹಾನಿಯ ಕಾರಣಕ್ಕೆ ಚಿಂತೆಗೊಂಡು ರೈತರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಮಳೆ ಕೊರತೆಯ ಕಾರಣಕ್ಕೆ ಎದುರಾದ ಬರ ಪರಿಸ್ಥಿತಿಯಿಂದಲೂ ನೊಂದು ಸಾವಿಗೆ ಶರಣಾದ ಘಟನೆಯೂ ನಡೆದಿದೆ. ದಶಕಗಳಿಗೂ ಮುಂಚಿನ ವರ್ಷಗಳಿಗೆ ಹೋಲಿಸಿದರೆ ತೀರಾ ಈಚೆಗೆ ಇಂತಹ ಘಟನೆಗಳು ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತಿದೆ.

2019–20ರ ಬಳಿಕ ಐದು ವರ್ಷದಲ್ಲಿ ಜಿಲ್ಲೆಯಲ್ಲಿ 45 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ ಮುಂಡಗೋಡ ತಾಲ್ಲೂಕಿನಲ್ಲಿ ಹೆಚ್ಚು ಘಟನೆಗಳು ನಡೆದಿವೆ. ಆ ತಾಲ್ಲೂಕಿನ 22 ಮಂದಿ ರೈತರು ಹಿಂದಿನ ಐದು ವರ್ಷದಲ್ಲಿ ಸಾಲಬಾಧೆಗೆ ಹೆದರಿ ಜೀವ ತೆತ್ತಿದ್ದಾರೆ ಎನ್ನುತ್ತಿದೆ ಕೃಷಿ ಇಲಾಖೆಯ ಮಾಹಿತಿ.

‘ಆತ್ಮಹತ್ಯೆ ಮಾಡಿಕೊಂಡವರಲ್ಲಿ ಸಣ್ಣ ಹಿಡುವಳಿದಾರರೇ ಹೆಚ್ಚಿದ್ದಾರೆ. ಸಾಲಬಾಧೆ ಆತ್ಮಹತ್ಯೆಗೆ ಪ್ರಮುಖ ಕಾರಣ ಎಂಬುದು ಮೃತರ ಕುಟುಂಬಸ್ಥರು ನೀಡಿದ್ದ ಪೊಲೀಸ್ ದೂರಿನ ಮೂಲಕ ತಿಳಿದಿದೆ. ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ಬಹುತೇಕ ಮಂದಿ ಸಣ್ಣ ಮೊತ್ತದ ಸಾಲ ಹೊಂದಿದ್ದವರೇ ಆಗಿದ್ದರು. ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಸಿಗದಿರುವುದು, ಕಾಡುಪ್ರಾಣಿಗಳ ಉಪಟಳದಿಂದ ಬಂದಿದ್ದ ಫಸಲು ಕೈಸೇರದಂತಾಗಿರುವುದು ಅವರ ಸ್ಥೈರ್ಯ ಕುಸಿಯುವಂತೆ ಮಾಡಿರಬಹುದು. ಈ ಕಾರಣಕ್ಕೆ ಅವರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.

‘ಕೋವಿಡ್ ವೇಳೆ ಎದುರಾದ ಲಾಕ್‍ಡೌನ್ ಪರಿಣಾಮ ಹಲವು ಬೆಳೆಗಳಿಗೆ ಮಾರುಕಟ್ಟೆ ಸಮಸ್ಯೆ ಎದುರಾಯಿತು. ಶುಂಠಿ, ಅನಾನಸ್‍ನಂತಹ ಬೆಳೆಗಳು ಈ ಸಾಲಿನಲ್ಲಿ ಸೇರಿದ್ದವು. ಅವುಗಳನ್ನು ಬೆಳೆದ ರೈತರು ಫಸಲು ಮಾರಾಟ ಮಾಡಲಾಗದೆ ಅವು ಗದ್ದೆ, ಮನೆ ಅಂಗಲದಲ್ಲೇ ಕೊಳೆತು ಹಾಳಾದವು. ಇದರಿಂದ ಖಿನ್ನರಾದ ಹಲವರು ಸಾವಿನ ಹಾದಿ ತುಳಿದರು. ಇದೇ ಕಾರಣಕ್ಕೆ 2021–22ರಲ್ಲಿ 13 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಲ್ಲಿ ಬಹುಪಾಲು ರೈತರು ಮುಂಡಗೋಡ ತಾಲ್ಲೂಕಿನವರು. ಅವರೆಲ್ಲ ಭತ್ತ, ಶುಂಠಿ, ಅನಾನಸ್ ಬೆಳೆದು ನಷ್ಟ ಅನುಭವಿಸಿದ್ದರು’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT