ಬುಧವಾರ, ಫೆಬ್ರವರಿ 1, 2023
18 °C
ಕೋವಿಡ್ ಕಾರಣದಿಂದ ಎರಡು ವರ್ಷ ನೆಲಕಚ್ಚಿದ್ದ ಪ್ರವಾಸೋದ್ಯಮ

ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರ ಆಗಮನ: ಕೋವಿಡ್‌ ಕಾರಣದಿಂದ ಮಂಕಾಗಿದ್ದ ಟೂರಿಸಂ

ರವಿ ಸೂರಿ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ‍ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಗೋಕರ್ಣಕ್ಕೆ ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದ್ದಾರೆ. ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ನೆಲಕಚ್ಚಿದ್ದ ಪ್ರವಾಸೋದ್ಯಮವು, ವಿದೇಶಿಗರ ಬರುವಿಕೆಯಿಂದ ಹೊಸ ಹುರುಪು ಹುಟ್ಟಿಸಿದೆ.

ಶಿವನ ನಾಡಿಗೆ ವಿದೇಶಿಗರು ಮನಸೋತಿದ್ದಾರೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ, ಸಂಪ್ರದಾಯಬದ್ಧ ಆಚರಣೆಗಳು ಪ್ರತಿ ವರ್ಷವೂ ಬರುವಂತೆ ಪೇರೇಪಿಸುತ್ತಿದೆ. ಓಂ ಬೀಚ್, ಕುಡ್ಲೆ ಬೀಚ್ ಹಾಗೂ ಮೇನ್ ಬೀಚ್‌ಗಳಲ್ಲಿ ವಿದೇಶಿಗರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಬ್ರಿಟನ್, ಫ್ರಾನ್ಸ್, ಇಟಲಿ, ಸ್ಪೇನ್, ಜರ್ಮನಿ, ಆಸ್ಟ್ರಿಯಾ ದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೊದಲಿನಿಂದಲೂ ಬರುತ್ತಾರೆ. ಇಸ್ರೇಲ್ ಮತ್ತು ರಷ್ಯಾದ ಸಾಕಷ್ಟು ಮಂದಿ ಕೂಡ ಹಲವಾರು ವರ್ಷಗಳಿಂದ ಭೇಟಿ ನೀಡುತ್ತಿದ್ದಾರೆ. ಕೆಲವರಂತೂ ಸತತವಾಗಿ 2– 3 ದಶಕಗಳಿಂದ ಬರುತ್ತಿದ್ದಾರೆ. 

ಕೆಲವು ವರ್ಷಗಳಿಂದ ವಿದೇಶಿಗರಿಗೆ ಗೋವಾಕ್ಕಿಂತಲೂ ಗೋಕರ್ಣ ನೆಚ್ಚಿನ ತಾಣವಾಗಿದೆ. ಗೋಕರ್ಣದ ಶೇ 90ರಷ್ಟು ಜನ ಪ್ರವಾಸೋದ್ಯಮವನ್ನೇ ಅವಲಂಬಿಸಿಕೊಂಡಿದ್ದಾರೆ. ವಾರಾಂತ್ಯದಲ್ಲಿ ಸ್ವದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ.

ಪರಿಹಾರವಾಗದ ಸಮಸ್ಯೆ

ವಿದೇಶಿಗರ ಉಪಯೋಗಕ್ಕಾಗಿ ಸಮುದ್ರ ತೀರಗಳಲ್ಲಿ ಸ್ಥಳೀಯರು ಪ್ರತಿ ವರ್ಷ ತಾತ್ಕಾಲಿಕ ಶೆಕ್ಸ್‌, ವಸತಿ ಗೃಹಗಳು ಹಲವು ವರ್ಷಗಳಿಂದ ನಿರ್ಮಿಸುತ್ತಿದ್ದಾರೆ. ಅದಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿಯು ಜಾಗದ ಮಾಲೀಕರಿಂದ ನಿರ್ದಿಷ್ಟ ಶುಲ್ಕ ಪಡೆಯುತ್ತದೆ. ಗೋಕರ್ಣದ ಎಲ್ಲಾ ಬೀಚ್‌ಗಳಲ್ಲಿ 300ಕ್ಕೂ ಹೆಚ್ಚು ಅಂಗಡಿಗಳಿವೆ.

ಸ್ಥಳೀಯ ಆಡಳಿತ ನಿಗದಿ ಪಡಿಸಿದ ಹಣವನ್ನು ತುಂಬಿ ತಾತ್ಕಾಲಿಕ ಪರವಾನಗಿ ಪಡೆದರೂ ಉಳಿದ ಇಲಾಖೆಗಳಿಂದ ಸಮಸ್ಯೆ ಉಂಟಾಗುತ್ತಿದೆ. ಸಮುದ್ರ ದಂಡೆಯಲ್ಲಿ ಪ್ರವಾಸಿಗರ ರಕ್ಷಣೆಗೆಗಾಗಿ ನಿಯುಕ್ತಿಗೊಂಡ ಜೀವರಕ್ಷಕರಿಗೂ ಅಂಗಡಿಕಾರರೇ ಹಣ ಸಂದಾಯ ಮಾಡಬೇಕಾಗಿದೆ. ಎಲ್ಲಾ ಇಲಾಖೆಯರಿಗೂ ಬೀಚ್ ಅಂಗಡಿಕಾರರೇ ಗುರಿಯಾಗಿದ್ದಾರೆ ಎಂಬ ಟೀಕೆಗಳಿವೆ.

ಸಮಸ್ಯೆಯಲ್ಲಿ ಯುರೋಪ್

‘ಕೋವಿಡ್ ಸಂಕಷ್ಟದಿಂದ ಇನ್ನೂ ಮೇಲೇಳದ ಯುರೋಪಿನ ಕೆಲವು ದೇಶಗಳು ತೀವ್ರ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿವೆ. ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ನಾಗರಿಕರು ಅನವಶ್ಯವಾಗಿ ಬೇರೆ ದೇಶಗಳಿಗೆ ಹೋಗಬಾರದು. ದೇಶದಲ್ಲಿಯೇ ಇದ್ದು ಕೆಲಸ ನಿರ್ವಹಿಸಬೇಕು. ವಿದೇಶಗಳಿಗೆ ಹೋಗಿ ಕಾಲ ಕಳೆಯುವುದಾದರೆ ಸರ್ಕಾರದಿಂದ ನೀಡುವ ಪಿಂಚಣಿಯನ್ನು ನಿಲ್ಲಿಸುವುದಾಗಿ ಸುತ್ತೋಲೆ ಹೊರಡಿಸಿದ್ದಾರೆ’ ಎಂದು ಜರ್ಮನ್ ಪ್ರಜೆ ಡೀಟ್ ಥ್ರಿಸ್ಕೊಲ್ ‘ಪ್ರಜಾವಾಣಿ’ಗೆ  ಇ–ಮೇಲ್ ಮುಖಾಂತರ ಪ್ರತಿಕ್ರಿಯಿಸಿದ್ದಾರೆ. ಅವರು ಮೂರು ದಶಕಗಳಿಂದ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದರು.

ಬ್ರಿಟನ್, ಇಟಲಿ, ಫ್ರಾನ್ಸ್ ಮುಂತಾದ ದೇಶಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ ಎಂದು ಅಲ್ಲಿಯ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.

ಎರಡು ವರ್ಷಗಳಿಂದ ವಿದೇಶಿಯರಿಗೆ ವೀಸಾ ಸಮಸ್ಯೆ ಕೂಡ ಎದುರಾಗುತ್ತಿದೆ. ಮೊದಲು ಆರು ತಿಂಗಳು ಅಥವಾ ಒಂದು ವರ್ಷದ ತನಕ ವೀಸಾ ನೀಡುತ್ತಿದ್ದರು. ಆದರೆ, ಈಗ ಕೇವಲ ಮೂರು ತಿಂಗಳ ಮಟ್ಟಿಗೆ ಪ್ರವಾಸಿ ವೀಸಾ ನೀಡಲಾಗುತ್ತಿದೆ. ವ್ಯಾಪಾರಿ ವೀಸಾ ಮಾತ್ರ ಒಂದು ವರ್ಷದ ಮಟ್ಟಿಗೆ ನೀಡಲಾಗುತ್ತಿದೆ.

––––

* ಭಾರತ ನನ್ನ ಎರಡನೇ ಜನ್ಮಭೂಮಿ. ಕೋವಿಡ್ ಕಾರಣದಿಂದ ಎರಡು ವರ್ಷಗಳಿಂದ ಬರಲು ಆಗಿರಲಿಲ್ಲ. ಈ ವರ್ಷ ಪುನಃ ಬಂದಿರುವುದು ತುಂಬ ಸಂತೋಷವಾಗಿದೆ.

– ಶೋಲಾ ಸ್ಕ್ರೆಂಡೀಸ್, ಜರ್ಮನ್ ಮಹಿಳೆ

* ಈ ವರ್ಷ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ. ರಷ್ಯಾ ಒಂದರಲ್ಲೇ ಸುಮಾರು 90 ಸಾವಿರ ಭಾರತೀಯ ವೀಸಾ ನೀಡಿರುವ ಮಾಹಿತಿಯಿದೆ.

– ನಾಗ ಕುಮಾರ ಗೋಪಿ, ರೆಸಾರ್ಟ್ ಮಾಲೀಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು