ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಾನುವರುಗಳ ಮೇಲೆ ದಾಳಿ: ನಾಡಿನತ್ತ ಕಾಡುಪ್ರಾಣಿಗಳ ವಲಸೆ

ಬೆಳೆ ನಾಶಗೊಳ್ಳುತ್ತಿರುವ ಆತಂಕ
Published 11 ಜೂನ್ 2024, 6:30 IST
Last Updated 11 ಜೂನ್ 2024, 6:30 IST
ಅಕ್ಷರ ಗಾತ್ರ

ಹೊನ್ನಾವರ: ಕಾಡಿನಲ್ಲಿ ಸಂಚರಿಸಬೇಕಿದ್ದ ಚಿರತೆ, ಕಡವೆ, ಹಂದಿ, ಮಂಗ, ಕೆಂದಳಿಲು ಮತ್ತಿತರ ಪ್ರಾಣಿಗಳು ಈಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಡಿನತ್ತ ಮುಖ ಮಾಡಿದ್ದು, ಜನ ಹಾಗೂ ಜಾನುವಾರುಗಳ ಬದುಕಿಗೆ ಆತಂಕ ತಂದೊಡ್ಡಿವೆ.

ಸಾಲ್ಕೋಡ, ವಂದೂರು, ನೀಲ್ಕೋಡ, ಅರೆಅಂಗಡಿ ಮತ್ತಿತರ ಊರುಗಳಲ್ಲಿ ಜಾನುವಾರು ಹಾಗೂ ಸಾಕುಪ್ರಾಣಿಗಳನ್ನು ಚಿರತೆ ಹೊತ್ತೊಯ್ಯುತ್ತಿರುವ ಘಟನೆಗಳು ಆಗಾಗ ನಡೆಯುತ್ತಿವೆ.

ಹೆರಾವಲಿಯಲ್ಲಿ ಕಡವೆ, ಕಾನುಕುರಿ ನಾಯಿದಾಳಿಗೆ ತುತ್ತಾಗಿರುವ ಘಟನೆಗಳು ಈಚೆಗೆ ನಡೆದಿವೆ. ಜತೆಗೆ ಮಂಗ, ಕೆಂದಳಿಲು ಹಗಲಿನಲ್ಲಿ ಹಾಗೂ ಹಂದಿ, ಮುಳ್ಳುಹಂದಿ ಮತ್ತಿತರ ಪ್ರಾಣಿಗಳು ರಾತ್ರಿ ವೇಳೆಯಲ್ಲಿ ತೋಟಕ್ಕೆ ನುಗ್ಗಿ ತೆಂಗು, ಅಡಿಕೆ, ಬಾಳೆ ಗಿಡ ಹಾಗೂ ಇನ್ನಿತರ ಬೆಳೆಗಳನ್ನು ತಿಂದು ನಾಶ ಮಾಡುತ್ತಿದ್ದು ರೈತರ ಸಂಕಷ್ಟವನ್ನು ದ್ವಿಗುಣಗೊಳಿಸಿವೆ.

‘ಚಿರತೆ ಕೊಟ್ಟಿಗೆಗೆ ನುಗ್ಗಿ ದನಗಳನ್ನು ತಿನ್ನುತ್ತಿದೆ. ರಸ್ತೆಯಲ್ಲಿ ಒಬ್ಬಂಟಿಯಾಗಿ ಓಡಾಡಲೂ ಭಯವಾಗುತ್ತಿದೆ’ ಎಂದು ವಂದೂರಿನ ಪರಮ ಹೆಗಡೆ ಆತಂಕ ವ್ಯಕ್ತಪಡಿಸಿದರು.

‘ಹಂದಿ, ಕಡವೆ ಮತ್ತಿತರ ಪ್ರಾಣಿಗಳು ಫಸಲಿಗೆ ಬರುವ ಹಂತದಲ್ಲಿರುವ ಅಡಿಕೆ, ಬಾಳೆ ಗಿಡಗಳನ್ನು ತಿಂದು ಹಾಳುಮಾಡುತ್ತಿವೆ’ ಎಂದು ಗುಂಡಿಬೈಲ್‍ನ ರಾಮ ಗೌಡ ಅಳಲು ತೋಡಿಕೊಂಡರು.

75,480 ಹೆಕ್ಟೆರ್ ಭೌಗೋಳಿಕ ವಿಸ್ತೀರ್ಣ ಹೊಂದಿರುವ ತಾಲ್ಲೂಕಿನಲ್ಲಿ 57,632 ಹೆಕ್ಟೆರ್ ಅಂದರೆ ಶೇ 76.35 ರಷ್ಟು ಭೂಮಿಯಲ್ಲಿ ಅರಣ್ಯ ಇದೆ ಎಂದು ಇಲಾಖೆಯ ಅಧಿಕೃತ ದಾಖಲೆ ಹೇಳುತ್ತದೆ.

ಅಂದಾಜು ಶೇ 16ರಷ್ಟು ಭೂಮಿಯನ್ನು ಸಾಗುವಳಿ ಜಾಗವೆಂದು ಗುರಿತಿಸಲಾಗಿದೆಯಾದರೂ ಕಟ್ಟಡ, ಗಣಿಗಾರಿಕೆ ಹಾಗೂ ಕೃಷಿ ಉದ್ದೇಶಗಳಿಗಾಗಿ ಜಾಗದ ಅತಿಕ್ರಮಣ ವ್ಯಾಪಕವಾಗಿ ನಡೆದಿರುವುದರಿಂದ ವಾಸ್ತವದಲ್ಲಿ ಅರಣ್ಯ ಭೂಮಿಯ ಪ್ರಮಾಣ ಅಧಿಕೃತ ಅಂಕಿ ಸಂಖ್ಯೆಗಿಂತ ತೀರ ಕಡಿಮೆ ಇದೆ ಎನ್ನುವುದನ್ನು ಸಂಬಂಧಿಸಿದಂತ ಇಲಾಖೆಗಳ ಅಧಿಕಾರಿಗಳೇ ತಿಳಿಸುತ್ತಾರೆ.

‘ಹಿಂದೆ ಕೃಷಿ ಜಮೀನಿಗೆ ಹೊಂದಿಕೊಂಡಂತೆ ಕಿರು ಅರಣ್ಯ ಹಾಗೂ ಅದರಾಚೆ ದಟ್ಟ ಅರಣ್ಯ ಇರುತ್ತಿದ್ದವು. ಜಾಗ ಅತಿಕ್ರಮಿಸಿ ಜೆಸಿಬಿ ಸಹಾಯದಿಂದ ಗುಡ್ಡ ಕೂಡ ನೆಲಸಮ ಮಾಡಿ ಕೃಷಿ ಜಮೀನಿನ ವಿಸ್ತರಣೆ ವ್ಯಾಪಕವಾಗಿ ನಡೆದಿದೆ. ಗಿಡ-ಮರಗಳು ಇರಬೇಕಾದ ಜಾಗದಲ್ಲಿ ಕಲ್ಲು ಹಾಗೂ ಮಣ್ಣು ಗಣಿಗಾರಿಕೆ ಅವ್ಯಾಹತವಾಗಿ ನಡೆದಿದೆ. ಆಹಾರದ ಮೂಲವನ್ನು ಕಳೆದುಕೊಂಡ ಕಾಡುಪ್ರಾಣಿಗಳು ನಾಡಿನತ್ತ ವಲಸೆ ಬರುತ್ತಿವೆ’ ಎನ್ನುವುದು ಹಿರಿಯರ ಅಭಿಪ್ರಾಯ.

‘ಅರಣ್ಯ ಜಾಗದಲ್ಲಿ ಮಾನವ ಚಟುವಟಿಕೆಗಳು ಹೆಚ್ಚಿದ ಕಾರಣದಿಂದ ಮನುಷ್ಯ ಹಾಗೂ ಕಾಡುಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಿದ್ದು, ಸುಲಭವಾಗಿ ಆಹಾರ ಸಿಗುವ ಜಾಗದತ್ತ ಅವು ಬರುತ್ತಿವೆ’ ಎನ್ನುತ್ತಾರೆ ಹೊನ್ನಾವರ ಡಿಸಿಎಫ್ ಯೋಗೇಶ ಸಿ.ಕೆ.

ಕಾಡು ಪ್ರಾಣಿಗಳಿಂದ ಹಾನಿಯಾದರೆ ನಿಯಮದಂತೆ ಪರಿಹಾರ ನೀಡುವ ಜತೆಗೆ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು
–ಯೋಗೇಶ ಸಿ.ಕೆ, ಹೊನ್ನಾವರ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT