ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಅರಣ್ಯಗಳ್ಳರ ಪತ್ತೆಗೆ ತಂತ್ರಜ್ಞಾನದ ನೆರವು

ಮೂರು ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ ಕಿರವತ್ತಿ ವಲಯದ ನೌಕರರು
Last Updated 20 ಮೇ 2020, 19:30 IST
ಅಕ್ಷರ ಗಾತ್ರ

ಶಿರಸಿ: ಆಧುನಿಕ ತಂತ್ರಜ್ಞಾನ ಬಳಸಿ ನಾಗರಿಕ ಅಪರಾಧ ಪ್ರಕರಣಗಳನ್ಹು ಪತ್ತೆ ಹಚ್ಚುವ ಮಾದರಿಯಲ್ಲೇ ಅರಣ್ಯ ಇಲಾಖೆ ಅರಣ್ಯಗಳ್ಳರನ್ನು ಪತ್ತೆ ಮಾಡುವ ಮೂಲಕ ಕಳ್ಳನಾಟಾ ಸಾಗಣೆದಾರರಲ್ಲಿ ನಡುಕ ಹುಟ್ಟಿಸಿದೆ.

ಕೆನರಾ ವೃತ್ತದಲ್ಲಿ ಯಲ್ಲಾಪುರ ವಿಭಾಗದ ಕಿರವತ್ತಿ ವಲಯದ ಕೋಳಿಕೇರಿ ಮತ್ತು ಹುಣಶೆಟ್ಟಿಕೊಪ್ಪ, ಹೊಸಳ್ಳಿ ಈ ಮೂರು ಕಡೆಗಳಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ನಡೆದಿದ್ದ ಸಾಗವಾನಿ ನಾಟಾ ಕಳ್ಳಸಾಗಣೆ ಪ್ರಕರಣಗಳು ಇಲಾಖೆಗೆ ಸವಾಲಾಗಿದ್ದವು. ಇದರ ಬೆನ್ನುಬಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ತಂತ್ರಜ್ಞಾನ ಬಳಸಿಕೊಂಡು ಕ್ಲಿಷ್ಟ ಪ್ರಕರಣಗಳನ್ನು ಭೇದಿಸಿದ್ದಾರೆ.

ಕಳ್ಳರನ್ನು ಪತ್ತೆ ಹಚ್ಚಿದ್ದು ಹೇಗೆ?:‘ಕೋಳಿಕೇರಿ ಅರಣ್ಯದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಮೂರು ಸಾಗವಾನಿ ಮರಗಳು ಮಾಯವಾಗಿದ್ದವು. ಗಸ್ತಿನಲ್ಲಿದ್ದ ಅರಣ್ಯ ರಕ್ಷಕರು ಇದನ್ನು ಗಮನಿಸಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಅಲ್ಲಿ ಮದ್ಯದ ಪ್ಯಾಕೆಟ್, ಗುಟ್ಕಾ ಪ್ಯಾಕೆಟ್, ಪ್ಲಾಸ್ಟಿಕ್ ಕವರ್‌ಗಳು ಬಿದ್ದಿದ್ದವು. ಇವನ್ನೆಲ್ಲ ಸಂಗ್ರಹಿಸಿದ ಸಿಬ್ಬಂದಿ, ಅಲ್ಲಿಂದಲೇ ವಾಹನವೊಂದು ಹೋಗಿರುವ ಗುರುತನ್ನು ಕಂಡಿದ್ದರು. ಗಾಲಿಯ ಅಚ್ಚಿನ ಮಾದರಿಯ ಮೇಲೆ, ನಾಟಾ ಸಾಗಿಸಲು ಬಳಸಿದ್ದು ಮಹೀಂದ್ರಾ ಬೊಲೆರೊ ಅಥವಾ ಟಾಟಾ 407 ವಾಹನ ಇರಬಹುದೆಂದು ನಿರ್ಧಾರಕ್ಕೆ ಬಂದರು. ಜತೆಗೆ, ವಾಹನ ಹೋಗಿರುವ ಮಾರ್ಗವನ್ನು ಪತ್ತೆ ಹಚ್ಚಿದರು. ಮುಂದಿನ ತನಿಖೆಗೆ ತಂತ್ರಜ್ಞಾನದ ಮೂಲಕ ಕಳ್ಳರ ಪತ್ತೆಯಲ್ಲಿ ಪರಿಣಿತಿ ಹೊಂದಿರುವ ಅರಣ್ಯಾಧಿಕಾರಿ ಯಲ್ಲಾ ನಾಯಕ ಸಹಕಾರ ಪಡೆದರು’ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

‘ವಿಶೇಷ ತಂಡ ರಚಿಸಿ, ಪ್ರತಿ ನೆಟ್‌ವರ್ಕ್‌ ಕಂಪನಿಯ ತಲಾ ಎರಡು ಮೊಬೈಲ್ ಬಳಸಿ, ಆ್ಯಪ್ ಮೂಲಕ ಅಪರಾಧ ನಡೆದ ಸ್ಥಳದ ಸೆಲ್‌ ಐಡಿ ಸಂಗ್ರಹಿಸಲಾಯಿತು. ಉಪಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಹಾಯ ಪಡೆದು ಸೆಲ್ ಐಡಿಗಳ ಟಿಡಿಆರ್ ಕೂಡ ಕಲೆಹಾಕಲಾಯಿತು. ಅನುಮಾನಾಸ್ಪದ ವಾಹನಗಳು, ಮೊಬೈಲ್ ಕಾಲ್‌ಗಳ ಪಟ್ಟಿ ಸಿದ್ಧಪಡಿಸಿ, ಅಲ್ಲಿ ಮತ್ತೆ ತಂತ್ರಗಾರಿಕೆ ಬಳಸಿಕೊಂಡು, ಶಂಕಿತ ನಂಬರ್‌ಗಳ ಮಾಲೀಕರನ್ನು, ಸಿಬ್ಬಂದಿ ಪತ್ತೆ ಹಚ್ಚಿದರು. ಇದೇ ಹೊತ್ತಿಗೆ ಹೊಸಳ್ಳಿ ಸಮೀಪ ಮತ್ತೆ ಮೂರು ಸಾಗವಾನಿ ಹಸಿ ಮರ ಕಡಿತವಾಗಿತ್ತು. ಆಗ ಮತ್ತೆ ಆಧುನಿಕ ತಂತ್ರಜ್ಞಾನ ಬಳಸಿ, ಆರೋಪಿಗಳ ವಿವರ ದೃಢಪಡಿಸಿಕೊಂಡ ಇಲಾಖೆ ಸಿಬ್ಬಂದಿ, ಮೂರು ದಿನ ಆರೋಪಿಗಳ ಊರಿನ ಸಮೀಪ ಮಾರುವೇಷದಲ್ಲಿ ತಿರುಗಿದರು. ಆರೋಪಿ ಉಮೇಶ ವಾಲಿಕಾರ್ ತನ್ನ ಬೊಲೆರೊ ವಾಹನದಲ್ಲಿ ಬರುತ್ತಿರುವಾಗ ಆತನನ್ನು ತಡೆದು, ವಿಚಾರಣೆಗೆ ಕರೆತಂದರು’ ಎಂದು ಅವರು ವಿವರಿಸಿದರು.

‘ಇನ್ನಿಬ್ಬರು ಆರೋಪಿಗಳ ವಿಚಾರಣೆ ಮಾಡಿದಾಗ, ಕಲಘಟಗಿಯ ಬಸವೇಶ್ವರ ಸಾಮಿಲ್‌ಗೆ ಸಾಗವಾನಿ ತುಂಡು ಸಾಗಿಸಿದ ಮಾಹಿತಿ ಹೊರಬಿತ್ತು. ನಮ್ಮ ಸಿಬ್ಬಂದಿ ಊಹಿಸಿದಂತೆ, ಕಳ್ಳನಾಟಾ ಸಾಗಣೆಗೆ ಬೊಲೆರೊ ವಾಹನವನ್ನೇ ಬಳಸಿದ್ದು ನಿಜವಾಗಿತ್ತು. ಈ ಪ್ರಕರಣ ಮತ್ತು ಕೋಳಿಕೇರಿ, ಹುಣಶೆಟ್ಟಿಕೊಪ್ಪ ಪ್ರಕರಣಗಳು ಭಿನ್ನವಾಗಿದ್ದವು. ಸಿಡಿಆರ್, ಟಿಡಿಆರ್ ನೆರವಿನೊಂದಿಗೆ ಇವೆರಡು ಪ್ರಕರಣಗಳ ಆರೋಪಿಗಳನ್ನು ಪತ್ತೆಮಾಡಿ, ವಶಕ್ಕೆ ಪಡೆದ ಇಲಾಖೆ, ಕಡಿದ ಮರದ ತುಂಡುಗಳನ್ನು ಜಪ್ತಿ ಮಾಡಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

*
ಯಾವುದೇ ಕುರುಹು ಇಲ್ಲದಿದ್ದರೂ ತಂತ್ರಜ್ಞಾನ ಬಳಸಿ ಇಲಾಖೆ ಸಿಬ್ಬಂದಿ ಆರೋಪಿಗಳ ಪತ್ತೆ ಮಾಡಿದ್ದಾರೆ. ನಮ್ಮ ಈ ಕಾರ್ಯವಿಧಾನ ಮರಗಳ್ಳರಿಗೆ ಎಚ್ಚರಿಕೆಯ ಗಂಟೆಯಾಗಿದೆ.
– ಡಿ.ಯತೀಶಕುಮಾರ್, ‌ಸಿಸಿಎಫ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT