ಗೋಕರ್ಣ: ಅಥರ್ವಣವೇದ ಪಂಡಿತರಾದ ಗೋಕರ್ಣದ ಆಚಾರ್ಯ ಶ್ರೀಧರ ಅಡಿ (74) ಬುಧವಾರ ಮಹಾರಾಷ್ಟ್ರದ ನಾಸಿಕ್'ನಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ.
ನೇಪಾಳದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದ ಶ್ರೀಧರ ಅಡಿ ವಾರಣಾಸಿಯಲ್ಲಿ ಋಗ್ವೇದ ಮತ್ತು ಯಜುರ್ವೇದ ಅಧ್ಯಯನ ಮುಗಿಸಿದ್ದರು. ನಂತರ ಅಥರ್ವಣ ವೇದವನ್ನೂ ಕಲಿತು ದೇಶದಾದ್ಯಂತ ಅಥರ್ವಣವೇದವನ್ನು ಉಳಿಸಿ ಬೆಳೆಸುವಲ್ಲಿ ಇವರು ಕಾರಣೀಕರ್ತರಾಗಿದ್ದರು.
ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಉಳ್ಳವರಾದ ಇವರು ಆಶು ಕವಿಗಳೂ ಆಗಿದ್ದರು. ನಿಂತಲ್ಲಿಯೇ ಎದುರಿದ್ದ ವ್ಯಕ್ತಿಗಳ ಬಗ್ಗೆ ಕವಿತೆ ರಚಿಸುವ ಸಾಮರ್ಥ್ಯ ಉಳ್ಳವರಾಗಿದ್ದರು. ಕವಿಭಾವತರಂಗಿಣಿ ಸೇರಿದಂತೆ ಸಂಸ್ಕೃತದಲ್ಲಿ ಅನೇಕ ನಾಟಕವನ್ನೂ ರಚಿಸಿದ್ದರು.
ಮದ್ಯಪ್ರದೇಶ ಸರ್ಕಾರ ಇವರಿಗೆ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ. ಉತ್ತರ ಪ್ರದೇಶ ಸರ್ಕಾರ ರಾಜ್ಯದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.
ಕೆಲವು ದಿನಗಳ ಹಿಂದೆ ಗುಜರಾತಿನ ಬರೋಡಾದಲ್ಲಿ ನಡೆದ ಯಜ್ನದಲ್ಲಿ ಭಾಗವಹಿಸಿದ್ದ ಇವರು ಅಲ್ಲಿಯೇ ಅನಾರೋಗ್ಯಕ್ಕೆ ತುತ್ತಾದರು. ನಂತರ ಅವರ ಶಿಷ್ಯವೃಂದ ಅಲ್ಲಿಂದ ಅವರನ್ನು ಮಹಾರಾಷ್ಟ್ರದ ನಾಸಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದರು. ಮೃತರ ಪಾರ್ಥೀವ ಶರೀರವನ್ನು ಗುರುವಾರ ಗೋಕರ್ಣಕ್ಕೆ ತಂದು ಅಂತಿಮ ವಿಧಿ, ವಿಧಾನಗಳನ್ನು ಪೂರೈಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.