ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ: ಗೌಳಿಗರ ರಜಮಲ್ ನೃತ್ಯದ ಸೊಬಗು

ಸಂತೋಷಕುಮಾರ ಹಬ್ಬು
Published 28 ಮಾರ್ಚ್ 2024, 6:10 IST
Last Updated 28 ಮಾರ್ಚ್ 2024, 6:10 IST
ಅಕ್ಷರ ಗಾತ್ರ

ಹಳಿಯಾಳ: ಗೌಳಿಗರ ಸಾಂಪ್ರದಾಯಿಕ ರಜಮಲ್ (ರದ್ಮಾಲ್) ನೃತ್ಯದ ಸೊಬಗು ಪಟ್ಟಣದಲ್ಲೆಡೆ ಕಂಡು ಬರುತ್ತಿದೆ. ಮನೆ ಮನೆ ಅಂಗಡಿಗಳ ಎದುರು ನೃತ್ಯ ಪ್ರದರ್ಶಿಸಿ ಮುದ ನೀಡುತ್ತಿದ್ದಾರೆ ರಾಯಪಟ್ಟಣ ಗೌಳಿವಾಡದ ಗೌಳಿಗರು.

ತಮ್ಮ ಗ್ರಾಮದಲ್ಲಿ ಹೋಳಿ ಹಬ್ಬದ ಕಾಮ ದಹನದ ರಂಗ ಪಂಚಮಿಯ ಮರುದಿನ ಗೌಳಿಗರು ಗ್ರಾಮದಿಂದ ಹೊರಗಡೆ ಬಂದು ಪಟ್ಟಣ ಹಾಗೂ ತಾಲ್ಲೂಕಿಗೆ ಹೊಂದಿಕೊಂಡಿರುವ ವಿವಿಧ ಗ್ರಾಮಗಳಿಗೆ ತೆರಳಿ ಐದು ದಿನಗಳ ಕಾಲ ನೃತ್ಯ ಪ್ರದರ್ಶನ ಮಾಡುತ್ತಾರೆ. ಬಡಾವಣೆಗಳಲ್ಲಿ, ಅಂಗಡಿಗಳ ಎದುರು ನೃತ್ಯ ಪ್ರದರ್ಶಿಸುವ 22 ಜನರ ತಂಡ ನೋಡುಗರು ಕೊಟ್ಟಷ್ಟು ಗೌರವ ಧನ ಪಡೆದು ಮುಂದೆ ಸಾಗುತ್ತಾರೆ. ನೃತ್ಯಕ್ಕೆ ಬರುವ ಮುಂಚೆ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಕಾಮದಹನ ಮಾಡುವ ಕಾಯ್ದಿಟ್ಟ ಸ್ಥಳದಲ್ಲಿ ತರಬೇತಿ ಪಡೆಯುತ್ತಾರೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಗ್ರಾಮದ ಕೆಲ ಹಿರಿಯರು ರಜಮಲ್ (ರದ್ಮಾಲ್) ಹಾಗೂ ರಜಮಾಲ್ ಭೌರಿ ನೃತ್ಯವನ್ನು ಗ್ರಾಮದ ಹಿರಿಯರಿಂದ ತರಬೇತಿಯನ್ನು ಪಡೆಯುತ್ತಾರೆ. ನಂತರ ಸುಡು ಬಿಸಿಲನ್ನು ಲೆಕ್ಕಿಸದೇ, ಪಾದರಕ್ಷೆ ಹಾಕಿಕೊಳ್ಳದೇ ಬರಿಗಾಲಿನಲ್ಲಿ ಅವರು ಹೆಜ್ಜೆ ಹಾಕುವುದನ್ನು ನೋಡುವಾಗ ಪ್ರೇಕ್ಷಕರಿಗೂ ಬಿಸಿಲು ನೆತ್ತಿ ಸುಡುತ್ತಿರುವುದು ಮರೆತು ಹೋಗುತ್ತದೆ. ಕಂಸಾಳೆ ವಾದ್ಯ ಹಾಗೂ ನವಿಲು ಗರಿಯೊಂದಿಗೆ ನೃತ್ಯ ಮಾಡುತ್ತಾರೆ.

ಪಟ್ಟಣವನ್ನು ಹೊರತುಪಡಿಸಿ ಗ್ರಾಮೀಣ ಭಾಗದಲ್ಲಿ ತೆರಳಿದಾಗ ಅಲ್ಲಲ್ಲಿ ಗೌಳಿ ಸಮುದಾಯದವರು ನೃತ್ಯ ತಂಡದವರಿಗೆ ಆಹಾರ ಉಟೋಪಚಾರ ನೀಡುತ್ತಾರೆ. ನೃತ್ಯದಲ್ಲಿ ಗೌರವ ಧನವಾಗಿ ಬಂದಂತಹ ಹಣವನ್ನು ಕೂಡಿಸಿ ಗ್ರಾಮದಲ್ಲಿ ಗ್ರಾಮ ದೇವಿಗೆ ಪೂಜೆ ಸಲ್ಲಿಸಿ ಇಡೀ ಗ್ರಾಮದವರು ಸೇರಿ ಸಹ ಭೋಜನ ಮಾಡಿ ಸಂಭ್ರಮಿಸುತ್ತಾರೆ. ಸಂಜೆ ಬಲಿ ಪೂಜೆ ಮಾಡಿದ ನಂತರ ಆರಂಭವಾಗುವ ಸಹಭೋಜನ ಸೂರ್ಯೋದಯಕ್ಕೂ ಮುನ್ನ ಸ್ಥಗಿತಗೊಳ್ಳುತ್ತದೆ. ಈ ಸಹ ಭೋಜನಕ್ಕೆ ಆಸುಪಾಸಿನ ಗ್ರಾಮದ ಪಂಚರಿಗೂ ಸಹ ಆಹ್ವಾನ ನೀಡುತ್ತಾರೆ.

ರಜಮಲ್ ನೃತ್ಯದ ಉಡುಗೆ ದುಬಾರಿಯಾಗಿರುತ್ತದೆ. ಪ್ರದರ್ಶನದ ವೇಳೆ ಎಲ್ಲೆಲ್ಲಿ ಊಟ ಉಪಹಾರ ಲಭ್ಯವಾಗುವುದಿಲ್ಲ ಅಲ್ಲೆಲ್ಲ ತಂಡದವರಿಗೆ ಊಟೋಪಚಾರಕ್ಕೆ ವ್ಯಯ ಮಾಡಲಾಗುತ್ತದೆ. ಸ್ವಂತ ಖರ್ಚಿನಿಂದ ಉಡುಗೆ, ಡೋಲು, ಕಂಸಾಳೆ, ಕೊಳಲು ಖರೀದಿಸುತ್ತಾರೆ.

‘ಸರ್ಕಾರ ಜನಪದ ಕಲೆಗೆ ಪ್ರೋತ್ಸಾಹ ನೀಡಲು ಸಮುದಾಯಕ್ಕೆ ಆರ್ಥಿಕ ಸೌಲಭ್ಯ ನೀಡಿದರೆ ಇನ್ನೂ ಈ ಕಲೆಯನ್ನು ಶ್ರೀಮಂತ ಗೊಳಿಸಬಹುದು. ಗೌಳಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಈ ಹಿಂದಿನಿಂದಲೂ ಹೋರಾಟ ಮಾಡುತ್ತ  ಬಂದಿದ್ದರೂ ಸರ್ಕಾರ ಕೇವಲ ಆಶ್ವಾಸನೆ ಮಾತ್ರ ನೀಡುತ್ತ ಬಂದಿದೆ’ ಎಂದು ತಂಡದವರಾದ ಮಳು ಕೋಯಾ ಗಾವಡೆ ಅಳಲು ತೋಡಿಕೊಂಡರು.

‘ಗ್ರಾಮಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದ್ದು ರಸ್ತೆ ಮತ್ತಿತರ ಮೂಲ ಸೌಕರ್ಯ ಒದಗಿಸಬೇಕಿದೆ. ಗೌಳಿಗರು ಈ ಹಿಂದಿನಿಂದಲೂ ಅರಣ್ಯ ಭೂಮಿ ಒತ್ತುವರಿ ಮಾಡಿದ್ದನ್ನು ಸಕ್ರಮಗೊಳಿಸಬೇಕು. ಹೈನುಗಾರಿಕೆ ಅವಲಂಬಿತ ಜನಾಂಗ ಹೈನುಗಾರಿಕೆಗೆ ಇನ್ನಷ್ಟು ಪ್ರೋತ್ಸಾಹ ನೀಡಿ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುವ ಹಾಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಜಾನು ಸೋನು ಗಾವಡೆ ಹೇಳಿದರು.

ಹಳಿಯಾಳ ತಾಲೂಕಿನ ರಾಯ ಪಟ್ಟಣ ಗೌಳಿವಾಡ ಗ್ರಾಮದ ರಜಮಲ್ ತಂಡದಿಂದ ರಜಮಲ್ ನೃತ್ಯದ  ದೃಶ್ಯ.
ಹಳಿಯಾಳ ತಾಲೂಕಿನ ರಾಯ ಪಟ್ಟಣ ಗೌಳಿವಾಡ ಗ್ರಾಮದ ರಜಮಲ್ ತಂಡದಿಂದ ರಜಮಲ್ ನೃತ್ಯದ  ದೃಶ್ಯ.
ಹಳಿಯಾಳ ತಾಲೂಕಿನ ರಾಯ ಪಟ್ಟಣ ಗೌಳಿವಾಡ ಗ್ರಾಮದ ರಜಮಲ್ ತಂಡದಿಂದ ರಜಮಲ್ ನೃತ್ಯದ  ದೃಶ್ಯ.
ಹಳಿಯಾಳ ತಾಲೂಕಿನ ರಾಯ ಪಟ್ಟಣ ಗೌಳಿವಾಡ ಗ್ರಾಮದ ರಜಮಲ್ ತಂಡದಿಂದ ರಜಮಲ್ ನೃತ್ಯದ  ದೃಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT