ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಟ್ಯಾಂಕರ್ ನೀರು ಪೂರೈಕೆಗೆ ‘ಜಿಪಿಎಸ್’ ತೊಡಕು

ಬೇಡಿಕೆ ಬಂದು 15 ದಿನ ಕಳೆದರೂ ನೀರು ಪೂರೈಸದ ಆರೋಪ
Published 4 ಏಪ್ರಿಲ್ 2024, 6:00 IST
Last Updated 4 ಏಪ್ರಿಲ್ 2024, 6:00 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಟ್ಯಾಂಕರ್ ನೀರು ಪೂರೈಸಲು ‘ಜಿಪಿಎಸ್ ಅಳವಡಿಕೆ’ ಮಾನದಂಡ ಅಡ್ಡಿಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ.

ತಾಲ್ಲೂಕಿನ ವಿವಿಧ ಪಂಚಾಯಿತಿಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಹನಿ ನೀರಿಗೂ ಮೈಲಿಗಟ್ಟಲೆ ನಡೆಯುವ ಸ್ಥಿತಿ ಎದುರಾಗಿದೆ. ಕೆಲವು ಕಡೆ ಖಾಸಗಿಯವರಿಗೆ ಹಣ ನೀಡಿ ಟ್ಯಾಂಕರ್ ಮೂಲಕ ನೀರು ಖರೀದಿಸುತ್ತಿದ್ದಾರೆ. ಆದರೂ ಬೇಡಿಕೆ ಹೆಚ್ಚುತ್ತಿರುವ ಕಾರಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

ಹೀಗಾಗಿ ಟ್ಯಾಂಕರ್ ನೀರು ಪೂರೈಸುವಂತೆ ಕೆಲವು ಗ್ರಾಮಸ್ಥರು ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದ್ದಾರೆ. ಆದರೆ ನೀರು ಪೂರೈಕೆಗೆ ಟ್ಯಾಂಕರ್ ಮಾಲೀಕರು ಮುಂದೆ ಬರುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಿರುವುದಾಗಿದೆ. 

‘ತಾಲ್ಲೂಕು ಆಡಳಿತದಿಂದ ಕುಡಿಯುವ ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್‌ಗಳಿಗೆ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಟ್ಯಾಂಕರ್‌ಗಳಿಗೆ ಜಿಪಿಎಸ್ ಕಡ್ಡಾಯ ಮಾನದಂಡ ಇರಲಿಲ್ಲ. ಹೀಗಾಗಿ ಹಲವು ಜನರು ಭಾಗವಹಿಸಿದ್ದರು. ಆದರೆ ಟೆಂಡರ್‌ನಲ್ಲಿ ಕೇವಲ ನೀರು ಪೂರೈಕೆಗಷ್ಟೇ ಹಣ ಮೀಸಲಿಡಲಾಗಿತ್ತು. ಜತೆಗೆ, ಟ್ಯಾಂಕರ್‌ಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯವಾಗಿದ್ದು,  ಟ್ಯಾಂಕರ್ ಮಾಲೀಕರೇ ಸ್ವತಃ ಜಿಪಿಎಸ್ ಯಂತ್ರ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಇದರಿಂದ ಯಾರು ಕೂಡ ನೀರು ಪೂರೈಕೆಗೆ ಒಪ್ಪಿಲ್ಲ. ಕುಡಿಯುವ ನೀರಿಗೆ ಬೇಡಿಕೆ ಬಂದು 15 ದಿನ ಕಳೆದರೂ ನೀರು ಪೂರೈಸಲು ಸಾಧ್ಯವಾಗಿಲ್ಲ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಟ್ಯಾಂಕರ್‌ಗೆ ಜಿಪಿಎಸ್ ಅಳವಡಿಸುವ ಸಂಬಂಧ ಟೆಂಡರ್‌ನಲ್ಲಿ ಪ್ರತ್ಯೇಕ ಹಣ ಇಟ್ಟಿಲ್ಲ. ಒಂದೊಮ್ಮೆ ಜಿಪಿಎಸ್ ಅಳವಡಿಸಿದರೆ ಅದರ ಲೆಕ್ಕಾಚಾರಕ್ಕೆ ಒಬ್ಬ ಕಾರ್ಮಿಕನನ್ನು ನೇಮಿಸಬೇಕು. ಟ್ಯಾಂಕರ್ ಬಳಸಲಿ, ಬಿಡಲಿ ಅವನಿಗೆ ಸಂಬಳ ನೀಡಬೇಕು. ಇದರಿಂದ ಹೊಟ್ಟೆಪಾಡಿಗೆ ಟ್ಯಾಂಕರ್ ಓಡಿಸುವವರಿಗೆ ಸಮಸ್ಯೆ ಆಗುತ್ತದೆ’ ಎಂದು ಟ್ಯಾಂಕರ್ ಮಾಲೀಕರೊಬ್ಬರು ಸಮಸ್ಯೆ ಹೇಳಿಕೊಂಡರು.

‘ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ ಎಂದು ಗ್ರಾಮ ಪಂಚಾಯಿತಿ ವತಿಯಿಂದ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಗಿದೆ. ಆದರೆ ಈವರೆಗೆ ಟ್ಯಾಂಕರ್ ನೀರು ಪೂರೈಸಿಲ್ಲ’ ಎಂದು ಕುಳವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ ಶೆಟ್ಟಿ ದೂರಿದರು.

ಕುಡಿಯುವ ನೀರಿಗೆ ಸಮಸ್ಯೆ ಮಾಡದಂತೆ ಸೂಚಿಸಲಾಗಿದೆ. ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಬಳಿ ಮಾತನಾಡಲಾಗಿದ್ದು ಬಗೆಹರಿಯುವ ವಿಶ್ವಾಸವಿದೆ.
ಭೀಮಣ್ಣ ನಾಯ್ಕ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT