ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಗೃಹಲಕ್ಷ್ಮೀ ಯೋಜನೆ ಸಮಸ್ಯೆ ಆಗರ: ಅಧಿಕಾರಿಗಳ ಅಸಹಾಯಕತೆ

Published : 9 ನವೆಂಬರ್ 2023, 14:08 IST
Last Updated : 9 ನವೆಂಬರ್ 2023, 14:08 IST
ಫಾಲೋ ಮಾಡಿ
Comments

ಶಿರಸಿ: ‘ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣ ಪಡೆದ ಹಲವರ ಖಾತೆಗಳಿಗೆ ಎರಡು ಹಾಗೂ ಮೂರನೇ ಕಂತಿನ ಹಣ ಜಮಾವಣೆ ವೇಳೆ ಹಲವು ಸಮಸ್ಯೆ ಕಾಣಿಸಿಕೊಂಡಿವೆ. ಆದರೆ ಸಮಸ್ಯೆ ಮೂಲ ಇಲಾಖೆ ಅಧಿಕಾರಿಗಳಿಗೂ ತಿಳಿಯುತ್ತಿಲ್ಲ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ತಮ್ಮ ಅಸಹಾಯಕತೆ ಹೊರಹಾಕಿದರು.

ಇಲ್ಲಿನ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಕೆಡಿಪಿಯಲ್ಲಿ ಇಲಾಖೆ ಅಧಿಕಾರಿ ವೀಣಾ ಶಿರ್ಸಿಕರ್ ಮಾತನಾಡಿ, ‘ಈವರೆಗೆ ಯೋಜನೆಯಡಿ 33 ಸಾವಿರ ಯಜಮಾನಿಯರು ನೋಂದಣಿ ಮಾಡಿಸಿಕೊಂಡಿದ್ದಾರೆ. ಆದರೆ ಕೆಲವರ ಖಾತೆಗೆ ಮೊದಲ ಕಂತಿನ ಹಣ ಜಮಾ ಆಗಿಲ್ಲ. ಕೆಲವರಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗಿಲ್ಲ ಎಂದು ಎರಡನೇ ಕಂತಿನ ಹಣ ಜಮಾ ವೇಳೆ ಮಾಹಿತಿ ಬಂದಿದೆ. ನಿತ್ಯ ಅಂದಾಜು 200 ಜನರು ಕಚೇರಿಗೆ ಬಂದು ವಿಚಾರಿಸುತ್ತಿದ್ದಾರೆ. ಈವರೆಗೆ 7 ಸಾವಿರ ಜನರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಯಾವ ಕಾರಣಕ್ಕೆ ಹಣ ಜಮಾ ಆಗುತ್ತಿಲ್ಲ ಎಂಬ ಮಾಹಿತಿ ಇಲಾಖೆ ಅಧಿಕಾರಿಗಳಿಗೂ ಇಲ್ಲ’ ಎಂದರು.  

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ನಾಯ್ಕ ಮಾತನಾಡಿ, ‘ತಾಲ್ಲೂಕಿನಲ್ಲಿ ಶೇ.19ರಷ್ಟು ಮಳೆ ಕೊರತೆಯಿದೆ. ಭತ್ತ, ಮೆಕ್ಕೆಜೋಳದ ಇಳುವರಿ ಸಾಕಷ್ಟು ಕುಂಠಿತವಾಗಿದೆ. ಶೇ 50ರಷ್ಟು ಬೆಳೆ ಹಾಳಾಗಿದೆ ಎಂದು ಸರ್ಕಾರಕ್ಕೆ ಈಗಾಗಲೇ ವರದಿ ನೀಡಲಾಗಿದೆ’ ಎಂದರು‌.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ.ಪಿ.ಸತೀಶ್, ‘ಬರ, ಬೆಳೆ ಸಮೀಕ್ಷೆಯಲ್ಲಿ ತಾರತಮ್ಯ ಆಗದಂತೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು. 

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ಮಾತನಾಡಿ, ‘ಸರ್ಕಾರಿ  ಪ್ರಾಥಮಿಕ ಶಾಲೆಯಲ್ಲಿ 147, ಪ್ರೌಢಶಾಲೆಯಲ್ಲಿ 20, ಅನುದಾನಿತ ಶಾಲೆಗಳಲ್ಲಿ 68 ಶಿಕ್ಷಕರ ಹುದ್ದೆ ಖಾಲಿಯಿದೆ. ಈಗಾಗಲೇ ಹೊಸದಾಗಿ ನೇಮಕವಾದ ಶಿಕ್ಷಕರು ಶೀಘ್ರದಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ’ ಎಂದರು. 

ಕಳೆದ ಕೆಡಿಪಿ ಸಭೆಗೆ ಹಾಜರಾಗದ ಇಲಾಖೆ ಅಧಿಕಾರಿಗಳಿಗೆ ನೊಟೀಸ್ ನೀಡಿದರೂ ಉತ್ತರ ಬಂದಿಲ್ಲ. ಅಂಥ ಇಲಾಖೆಗಳ ಅಧಿಕಾರಿಗಳಿಗೆ ಕಾರಣ ಕೇಳಿ ಎರಡನೇ ನೊಟೀಸ್ ಜಾರಿ ಮಾಡಲು ಆಡಳಿತಾಧಿಕಾರಿ ಬಿ.ಪಿ.ಸತೀಶ್ ಅವರು ಪ್ರಭಾರಿ ಇಒ ಸತೀಶ ಹೆಗಡೆ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT