ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಚಾರಣಿಗರ ಪಾಲಿನ ಸ್ವರ್ಗ ‘ಗುಡ್ಡಳ್ಳಿ’

ಪರ್ವತ, ಸಾಗರದ ಸಂಗಮದ ದೃಶ್ಯ ವೈಭವ ಪ್ರದರ್ಶಿಸುವ ತಾಣ
Published 3 ಮಾರ್ಚ್ 2024, 4:47 IST
Last Updated 3 ಮಾರ್ಚ್ 2024, 4:47 IST
ಅಕ್ಷರ ಗಾತ್ರ

ಕಾರವಾರ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನದಲ್ಲಿ ಸಾಗುತ್ತಿದ್ದವರು ಕಾರವಾರ ಸಮೀಪಿಸುತ್ತಿದ್ದಂತೆ ಒಂದೆಡೆ ದೃಷ್ಟಿ ಹಾಯಿಸಿದರೆ ಪರ್ವತದ ಸಾಲು, ಇನ್ನೊಂದೆಡೆ ಕಣ್ಣರಳಿಸಿದರೆ ಅರಬ್ಬಿ ಸಮುದ್ರ ಕಾಣಸಿಗುತ್ತದೆ. ಇಷ್ಟಕ್ಕೆ ‘ಅಬ್ಬಾ’ ಎಂದು ಉದ್ಘರಿಸುವ ಪ್ರವಾಸಿಗರು ಒಂದು ವೇಳೆ ನಗರದ ಅಂಚಿನಲ್ಲಿರುವ ಪರ್ವತ ಏರಿ ‘ಗುಡ್ಡಳ್ಳಿ’ ಎಂಬ ಊರು ತಲುಪಿದರೆ ಅವರ ಸಂತಸಕ್ಕೆ ಪಾರವೇ ಇರದು!

ಪಶ್ಚಿಮ ಘಟ್ಟದ ಸಾಲು ಅರಬ್ಬಿ ಸಮುದ್ರದೊಂದಿಗೆ ಸಂಗಮಗೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುವ ಅಪರೂಪದ ತಾಣ ಗುಡ್ಡಳ್ಳಿ ಗ್ರಾಮದ ಶಿಖರ. ಅಂದಹಾಗೆ ಗುಡ್ಡಳ್ಳಿ ಹಳ್ಳಿಯಾದರೂ ಅದು ಇರುವುದು ಕಾರವಾರ ನಗರಸಭೆ ವ್ಯಾಪ್ತಿಯಲ್ಲಿಯೇ.

ಇಲ್ಲಿನ ಹೈಚರ್ಚ್ ರಸ್ತೆ ಕೊನೆಗೊಳ್ಳುತ್ತಿದ್ದಂತೆ ಗುಡ್ಡವೊಂದು ಎದುರಾಗುತ್ತದೆ. ಅಲ್ಲಿ ಕಚ್ಚಾ ರಸ್ತೆಯ ಮೂಲಕ ಸುಮಾರು ನಾಲ್ಕು ಕಿ.ಮೀ ಚಾರಣ ಮಾಡುತ್ತ ಸಾಗಿದರೆ ಗುಡ್ಡಳ್ಳಿ ಗ್ರಾಮ ಎದುರಾಗುತ್ತದೆ. ಹಾಲಕ್ಕಿ ಸಮುದಾಯದ 150ಕ್ಕೂ ಹೆಚ್ಚು ಜನರು, ಸುಮಾರು 30 ಮನೆಗಳಿರುವ ಗ್ರಾಮ ಅತಿಥಿ ಸತ್ಕಾರಕ್ಕೆ ಹೆಸರುವಾಸಿಯಾಗಿದೆ. ಇದೇ ಕಾರಣಕ್ಕೆ ಇಲ್ಲಿಗೆ ಒಮ್ಮೆ ಭೇಟಿ ನೀಡಿದವರು ಪದೇ ಪದೇ ಬರುತ್ತಿರಬೇಕು ಎಂಬ ಭಾವನೆ ಹೊಂದುತ್ತಾರೆ.

ಗುಡ್ಡಳ್ಳಿ ಗ್ರಾಮದಲ್ಲಿ ಅತಿಥಿಗೃಹಗಳಿಲ್ಲ. ಆದರೆ ಇಲ್ಲಿನ ಕೆಲ ಮನೆಗಳಲ್ಲಿನ ಜನರು ಅತಿಥಿ ಸತ್ಕಾರಕ್ಕೆ ಹಿಂಜರಿಯುವುದಿಲ್ಲ. ಪ್ರವಾಸಿಗರು ಮುಂಚಿತವಾಗಿ ಮಾಹಿತಿ ನೀಡಿದರೆ ಊಟ, ಉಪಹಾರದ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಪ್ರತಿ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗ್ರಾಮಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಾರೆ.

ಗುಡ್ಡಳ್ಳಿಯಲ್ಲಿರುವ ಹವ್ಯಾಸಿ ಕಲಾವಿದ ವಿಶ್ರಾಮ ಗೌಡ ಅವರು ತಾವು ತಯಾರಿಸಿದ ಮರದ ಕಲಾಕೃತಿಗಳೊಂದಿಗೆ.
ಗುಡ್ಡಳ್ಳಿಯಲ್ಲಿರುವ ಹವ್ಯಾಸಿ ಕಲಾವಿದ ವಿಶ್ರಾಮ ಗೌಡ ಅವರು ತಾವು ತಯಾರಿಸಿದ ಮರದ ಕಲಾಕೃತಿಗಳೊಂದಿಗೆ.

‘ಬ್ರಿಟೀಷ್ ಆಳ್ವಿಕೆ ಕಾಲದಲ್ಲಿ ಅಂದಿನ ಜಿಲ್ಲಾ ಕಲೆಕ್ಟರ್ ಬೇಸಿಗೆ ಅವಧಿಯಲ್ಲಿ ಉಳಿಯಲು ನಿರ್ಮಿಸಿಕೊಂಡಿದ್ದ ಬಂಗ್ಲೆಯ ಕುರುಹುಗಳು ಇನ್ನೂ ಇವೆ. ಕಟ್ಟಡದ ತಳಪಾಯ, ಗೋಡೆಯ ಅವಶೇಷಗಳು ಇಲ್ಲಿ ಕಾಣಸಿಗುತ್ತವೆ. ಅಲ್ಲದೆ ಕುದುರೆ ಕಟ್ಟುತ್ತಿದ್ದ ಲಾಯದ ಅವಶೇಷವೂ ಇದೆ. ಪೊಲೀಸ್ ಇಲಾಖೆಯ ವೈರಲೆಸ್ ಕೇಂದ್ರ ಗುಡ್ಡದ ತುದಿಯಲ್ಲಿದೆ. ಅಲ್ಲಿಯೇ ಪಕ್ಕದಲ್ಲಿರುವ ಕಲ್ಲುಬಂಡೆಗಳ ಸಾಲಿನ ಮೇಲೆ ನಿಂತರೆ ಕಾರವಾರದ ಮುಕ್ಕಾಲು ಭಾಗ ದರ್ಶನವಾಗುತ್ತದೆ’ ಎನ್ನುತ್ತಾರೆ ಗ್ರಾಮಸ್ಥ ಮಯೂರ ಗೌಡ.

‘ಗುಡ್ಡಳ್ಳಿಯ ಶಿಖರದ ಮೇಲೆ ನಿಂತು ನೋಡಿದರೆ ಪರ್ವತದ ಸಾಲು ಸಮುದ್ರಕ್ಕೆ ಇಳಿದು ನಿಂತಂತೆ ಭಾಸವಾಗುತ್ತದೆ. ವರ್ಷದ ಎಲ್ಲ ಕಾಲದಲ್ಲಿಯೂ ಈ ತಾಣ ವೀಕ್ಷಣೆಯೇ ಸೊಗಸು. ಇದೇ ಕಾರಣಕ್ಕೆ ಇಲ್ಲಿಗೆ ಪದೇ ಪದೇ ಚಾರಣಕ್ಕೆ ಬರುವ ಪ್ರವಾಸಿಗರಿದ್ದಾರೆ’ ಎನ್ನುತ್ತಾರೆ ಗುಡ್ಡಳ್ಳಿಗೆ ಆಗಾಗ ಭೇಟಿ ನೀಡುವ ಚಾರಣಿಗ ರವಿ ಗೌಡ.

ಕಾರವಾರ ತಾಲ್ಲೂಕಿನ ಗುಡ್ಡಳ್ಳಿಯ ಶಿಖರದ ತುದಿಯಿಂದ ಕಾಣಸಿಗುವ ಸುಂದರ ದೃಶ್ಯ.
ಚಿತ್ರ: ಪ್ರಮೋದ ಗೌಡ ಬೆಳಸೆ
ಕಾರವಾರ ತಾಲ್ಲೂಕಿನ ಗುಡ್ಡಳ್ಳಿಯ ಶಿಖರದ ತುದಿಯಿಂದ ಕಾಣಸಿಗುವ ಸುಂದರ ದೃಶ್ಯ. ಚಿತ್ರ: ಪ್ರಮೋದ ಗೌಡ ಬೆಳಸೆ
ಕಲಾಕೃತಿಯ ಸೊಬಗು
ಚಾರಣಕ್ಕೆ ಬರುವ ಪ್ರವಾಸಿಗರು ಗುಡ್ಡಳ್ಳಿಯ ವಿಶ್ರಾಮ ಗೌಡ ಎಂಬ ಹವ್ಯಾಸಿ ಕಲಾವಿದರ ಮನೆಗೆ ಭೇಟಿ ನೀಡದೆ ವಾಪಸ್ಸಾಗುವುದಿಲ್ಲ. ಬಿದ್ದ ಮರದ ಬೇರು ಅರಣ್ಯ ಇಲಾಖೆಯಿಂದ ಪರವಾನಿಗೆ ಪಡೆದು ಖರೀದಿಸಿದ ಮರದ ತುಂಡಿನಲ್ಲಿ ವಿವಿಧ ಬಗೆಯ ಕಲಾಕೃತಿ ಸಿದ್ಧಪಡಿಸುವ ವಿಶ್ರಾಮ ಅವರು ಪೊಲೀಸ್ ಅಧಿಕಾರಿ ಜಿಂಕೆ ವಿದೇಶಿ ವ್ಯಕ್ತಿ ವಿವಿಧ ಬಗೆಯ ಮುಖವಾಡ ಸೇರಿದಂತೆ ವಿಭಿನ್ನ ಕಲಾಕೃತಿ ಸಿದ್ಧಪಡಿಸಿಟ್ಟಿದ್ದಾರೆ. ಅವುಗಳನ್ನು ನೋಡಿ ಪ್ರವಾಸಿಗರು ಖುಷಿಪಡುತ್ತಾರೆ. ‘ಪದ್ಮಶ್ರೀ ತುಳಸಿ ಗೌಡ ಅವರ ಪ್ರತಿಕೃತಿಯನ್ನೂ ಕೆತ್ತನೆ ಮಾಡಲಾಗುತ್ತಿದೆ. ಪ್ರತಿ ವರ್ಷ ಹೊಸ ಹೊಸ ಮಾದರಿಯನ್ನು ಸಿದ್ಧಪಡಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿಡುತ್ತೇನೆ’ ಎನ್ನುತ್ತಾರೆ ಕಲಾವಿದ ವಿಶ್ರಾಮ ಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT