ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರ್ಮಾಣಗೊಳ್ಳದ ಗುಳ್ಳಾಪುರ ಸೇತುವೆ: ಸಂಚಾರಕ್ಕೆ ಕೃಷಿಕರಿಂದ ತೆಪ್ಪದ ವ್ಯವಸ್ಥೆ

ವಿಶ್ವೇಶ್ವರ ಗಾಂವ್ಕರ
Published : 22 ಸೆಪ್ಟೆಂಬರ್ 2024, 0:14 IST
Last Updated : 22 ಸೆಪ್ಟೆಂಬರ್ 2024, 0:14 IST
ಫಾಲೋ ಮಾಡಿ
Comments

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ): ಗಂಗಾವಳಿ ನದಿಗೆ ತಾಲ್ಲೂಕಿನ ಗುಳ್ಳಾಪುರದಲ್ಲಿ ನಿರ್ಮಿಸಿದ್ದ ಸೇತುವೆ ಕುಸಿದು ಬಿದ್ದು ಮೂರು ವರ್ಷ ಕಳೆದರೂ ಸೇತುವೆ ಮರುನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ನದಿ ದಾಟಲು ಸ್ಥಳೀಯರು ಸ್ವಂತ ವೆಚ್ಚ ಭರಿಸಿ ತೆಪ್ಪ ನಿರ್ಮಿಸಿಕೊಂಡಿದ್ದಾರೆ.

ನದಿತಟದ ಹೆಗ್ಗಾರ, ಶೇವ್ಕಾರ, ಕೈಗಡಿ ಗ್ರಾಮದ ಕೃಷಿಕರು ತಮ್ಮ ಕೃಷಿ ಕೆಲಸಗಳಿಗೆ ಗುಳ್ಳಾಪುರ ಭಾಗದ ಕೂಲಿ ಕಾರ್ಮಿಕರನ್ನು ಅವಲಂಬಿಸಿದ್ದಾರೆ. ಸೇತುವೆ ಇಲ್ಲದ ಕಾರಣ ನದಿ ದಾಟಿ ಗ್ರಾಮಕ್ಕೆ ಬರಲು 15 ಕಿ.ಮೀಗಿಂತಲೂ ಹೆಚ್ಚು ಸುತ್ತಬಳಸಿ ಬರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ತೆಪ್ಪ ನಿರ್ಮಿಸಿಕೊಳ್ಳಲಾಗಿದೆ ಎಂಬುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಗುಳ್ಳಾಪುರದ ಮೂಲಕ ಅಂಕೋಲಾ ಹಾಗೂ ಶಿರಸಿ ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತೆ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ 2021ರಲ್ಲಿ ಕುಸಿದಿತ್ತು. ಜನರಿಗೆ ಗುಳ್ಳಾಪುರದಿಂದ ಹೆಗ್ಗಾರಿಗೆ ಮತ್ತು ಹೆಗ್ಗಾರಿನಿಂದ ಗುಳ್ಳಾಪುರಕ್ಕೆ ಹೋಗಲು ರಾಮನಗುಳಿ ಸೇತುವೆ ಏಕಮಾತ್ರ ಸಂಪರ್ಕ ಸಾಧನವಾಗಿದೆ.

‘ಗುಳ್ಳಾಪುರದಿಂದ ಹೆಗ್ಗಾರಿಗೆ ಬಂದು ಕೂಲಿ ಕೆಲಸ ಮಾಡುವುದು ದ್ವಿಚಕ್ರವಾಹನ ಹೊಂದಿದ ಕಾರ್ಮಿಕರಿಗೆ ಮಾತ್ರ ಸಾಧ್ಯ. ಅಲ್ಲದೆ ಅದರಿಂದ ಹಣ, ಸಮಯ ವ್ಯರ್ಥವಾಗುತ್ತದೆ. ಇದಕ್ಕಿಂತಲೂ ಮುಖ್ಯವಾಗಿ ಸಣ್ಣ ಪುಟ್ಟ ಕೆಲಸಗಳಿಗೆ ಒಬ್ಬೊಬ್ಬರೇ ಸಾಗುವ ಮಹಿಳಾ ಕಾರ್ಮಿಕರಿಗೆ ಇದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತೆಪ್ಪದ ವ್ಯವಸ್ಥೆ ಕಲ್ಪಿಸಿಕೊಳ್ಳಲಾಗಿದೆ’ ಎಂದು ಹೆಗ್ಗಾರ ಗ್ರಾಮದ ಕೃಷಿಕ ಶಿವರಾಮ ಭಟ್ಟ ಗುಡ್ಡೆ ಹೇಳಿದರು.

‘ಕೃಷಿಕರು, ಕೂಲಿ ಕಾರ್ಮಿಕರು ಜತೆಗೂಡಿ ನದಿಗೆ ಅಡ್ಡಲಾಗಿ ಹಗ್ಗ ಕಟ್ಟಿ ತೆಪ್ಪದ ಮೂಲಕ ಸಾಗುವ ಅನುಕೂಲ ಕಲ್ಪಿಸಿಕೊಂಡಿದ್ದೇವೆ. ತೆಪ್ಪದಲ್ಲಿ ಏಕಕಾಲಕ್ಕೆ ಎಂಟು ಜನ ಪ್ರಯಾಣಿಸಬಹುದಾಗಿದೆ. ಕಬ್ಬಿಣದ ಚೌಕಟ್ಟು ನಿರ್ಮಿಸಿ, ಅದಕ್ಕೆ 8 ಪ್ಲಾಸ್ಟಿಕ್ ಡ್ರಮ್‌ಗಳನ್ನು ಎರಡು ಸಾಲಿನಲ್ಲಿ ಅಳವಡಿಸಲಾಗಿದೆ. ಮೇಲ್ಭಾಗವನ್ನು ಫ್ಲೈವುಡ್‌ನಿಂದ ಮುಚ್ಚಲಾಗಿದೆ. ತೆಪ್ಪ ಏರಲು ಅನುಕೂಲವಾಗುವಂತೆ ಅಡಿಕೆ ಮರದ ತುಂಡುಗಳನ್ನು ಕೂರಿಸಲಾಗಿದೆ. ಅಂದಾಜು ₹35 ಸಾವಿರ ವೆಚ್ಚ ತಗುಲಿದೆ’ ಎಂದು ಅವರು ವಿವರಿಸಿದರು.

ತೆಪ್ಪವನ್ನು ನದಿಗೆ ಇಳಿಸುತ್ತಿರುವ ಗ್ರಾಮಸ್ಥರು
ತೆಪ್ಪವನ್ನು ನದಿಗೆ ಇಳಿಸುತ್ತಿರುವ ಗ್ರಾಮಸ್ಥರು
ಸೇತುವೆ ಮರುನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರಿಗೆ ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನಿಸಲಾಗುತ್ತಿದೆ
ಶಿವರಾಮ ಹೆಬ್ಬಾರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT