ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿನ ‘ಹಗರಣ’ಕ್ಕೆ ಐತಿಹಾಸಿಕ ಹಿನ್ನೆಲೆ!

ಸಮಾಜದ ಅಂಕುಡೊಂಕು ಟೀಕಿಸುವ, ಜಾಗೃತಿ ಮೂಡಿಸುವ ವಿಶಿಷ್ಟ ಆಚರಣೆ
Last Updated 3 ಡಿಸೆಂಬರ್ 2022, 15:29 IST
ಅಕ್ಷರ ಗಾತ್ರ

ಕಾರವಾರ: ನವೆಂಬರ್, ಡಿಸೆಂಬರ್ ತಿಂಗಳು ಬಂತೆಂದರೆ ಕಾರವಾರ ಮತ್ತು ಅಂಕೋಲಾ ತಾಲ್ಲೂಕುಗಳಲ್ಲಿ ‘ಹಗರಣ’ ಸದ್ದು ಮಾಡುತ್ತದೆ. ಅದನ್ನು ನೋಡಲೆಂದೇ ಸಾವಿರಾರು ಮಂದಿ ಊರೂರುಗಳಿಂದ ಬರುತ್ತಾರೆ. ಅದು ಆಯೋಜನೆಯಾಗುವ ಊರಿನಲ್ಲಿ ಸಂಜೆಯ ಕಾರ್ಯಕ್ರಮವು ರಂಗೇರುತ್ತದೆ.

ಎರಡೇ ತಾಲ್ಲೂಕುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ‘ಹಗರಣ’ವು, ನಮ್ಮ ಸಮಾಜದ ವ್ಯವಸ್ಥೆಗಳಲ್ಲಿರುವ ಅಂಕುಡೊಂಕುಗಳನ್ನು ಅಣಕಿಸುವ ಒಂದು ಮಾಧ್ಯಮವಾಗಿದೆ. ಶತಮಾನಗಳಿಂದ ನಡೆದು ಬಂದಿರುವ ಈ ಅಣಕು, ನಂತರ ಸಂಪ್ರದಾಯದ ಸ್ವರೂಪ ಪಡೆದುಕೊಂಡಿದೆ. ಹಾಲಕ್ಕಿ ಸಮುದಾಯದವರು ಹೆಚ್ಚಾಗಿ ಆಚರಿಸುತ್ತಿದ್ದ ಕಾರ್ಯಕ್ರಮವು ಈಗ ಇತರ ಸಮುದಾಯಗಳ ಯುವಕರನ್ನೂ ಆಕರ್ಷಿಸಿದೆ.

‘ಹಗರಣವು ಒಂದು ರೀತಿಯಲ್ಲಿ ಸಂವಹನದ ಮಾಧ್ಯಮವಾಗಿದೆ. ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಸ್ಥಳೀಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆಯ ವಿರುದ್ಧದ ಹೋರಾಟದ ಭಾಗವಾಗಿ ಇಂಥ ಆಚರಣೆ ಆರಂಭವಾಯಿತು’ ಎಂದು ಮಾತಿಗಿಳಿದವರು ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಅಮದಳ್ಳಿಯ ಹಾಲಕ್ಕಿ ಸಮುದಾಯದ ಮುಖಂಡ ಪುರುಷೋತ್ತಮ ಗೌಡ.

‘ಅಂದಿನ ದಿನಗಳಲ್ಲಿ ಬ್ರಿಟಿಷರ ಜೊತೆ ಸಂವಾದ ಮಾಡಲು ಭಾಷಾ ಸಮಸ್ಯೆ ಇರುತ್ತಿತ್ತು. ಆದರೆ, ಅವರ ದೌರ್ಜನ್ಯವನ್ನು ಖಂಡಿಸುವ ಸಂದೇಶವನ್ನು ಸಾರುವ ಉದ್ದೇಶದಿಂದ ಅಣಕು ಪ್ರದರ್ಶನಗಳನ್ನು ಹಮ್ಮಿಕೊಳ್ಳಲು ಆರಂಭಿಸಿದರು. ಸುಗ್ಗಿ ಹಬ್ಬದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಕಾರಣ ಅಂದಿನ ಸಂದರ್ಭವನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು’ ಎಂದು ವಿವರಿಸಿದರು.

‘ನಂತರ ಬ್ರಿಟಿಷರು ಭಾರತ ಬಿಟ್ಟು ತೊಲಗಿದರು. ಆದರೆ, ಸ್ವತಂತ್ರ ದೇಶದಲ್ಲಿ ಹಲವು ಸಮಸ್ಯೆಗಳು ಉಳಿದವು. ಅವುಗಳ ಬಗ್ಗೆ ಸಮಾಜಕ್ಕೆ ಒಂದು ಸಂದೇಶ ಕೊಡುವ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ಹಗರಣಗಳು ಮುಂದುವರಿದಿವೆ. ಈಗ ಪ್ರತಿ ವರ್ಷ ಸ್ಥಳೀಯ ಜಾತ್ರೆಗಳ ಸಂದರ್ಭ, ಸುಗ್ಗಿ, ದೀಪಾವಳಿಯ ಸಂದರ್ಭದಲ್ಲಿ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.

ಈ ವರ್ಷ ಅಮದಳ್ಳಿಯಲ್ಲಿ ನಡೆದ ‘ಹಗರಣ’ದಲ್ಲಿ ಕಾಂತಾರ ಚಲನಚಿತ್ರದ ವರಾಹ ಮತ್ತು ಪಂಜುರ್ಲಿ ದೈವದ ಪ್ರತಿಕೃತಿಗಳು ಗಮನ ಸೆಳೆದಿದ್ದವು. ಅಂತೆಯೇ ಬೇಳೂರಿನಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ವನ್ಯಜೀವಿಗಳು, ಕಾಡಿನ ಸ್ತಬ್ಧಚಿತ್ರಗಳು ಆಕರ್ಷಕವಾಗಿದ್ದವು. ಅಂಕೋಲಾದಲ್ಲಿ ಸುಗ್ಗಿ ಹಬ್ಬಕ್ಕೆ ಮತ್ತು ಬಡಗೇರಿಯಲ್ಲಿ ಯುಗಾದಿಗೆ ನಡೆಯುವ ಹಗರಣಗಳೂ ಸಾಕಷ್ಟು ಪ್ರಸಿದ್ಧವಾಗಿವೆ.

‘ಸ್ವಂತ ಹಣ ಖರ್ಚು’:

‘ಕೆಲವು ವರ್ಷಗಳ ಹಿಂದಿನವರೆಗೆ ಆಯೋಜನೆಯಾಗುವ ಹಗರಣಗಳ ಸಂಖ್ಯೆ ಹೆಚ್ಚು ಇತ್ತು. ಆದರೆ, ಕಾಲಕ್ರಮೇಣ ಯುವಕರು ನಾನಾ ಕಾರಣಗಳಿಂದ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ’ ಎಂದು ಮುಖಂಡ ಪುರುಷೋತ್ತಮ ಗೌಡ ಬೇಸರಿಸುತ್ತಾರೆ.

‘ಸ್ತಬ್ಧ ಚಿತ್ರಗಳು, ಪ್ರತಿಕೃತಿಗಳನ್ನು ಸಿದ್ಧಪಡಿಸಲು ಸುಮಾರು 15 ದಿನಗಳು ಬೇಕಾಗುತ್ತವೆ. ಸುಮಾರು ₹ 50 ಸಾವಿರದವರೆಗೆ ಹಣ ಬೇಕಾಗುತ್ತದೆ. ಅದಕ್ಕೆ ಸ್ಥಳೀಯ ಯುವಕರೇ ಸ್ವಂತ ಖರ್ಚು ಮಾಡುತ್ತಾರೆಯೇ ವಿನಾ ಯಾರಿಂದಲೂ ಕೇಳುವುದಿಲ್ಲ. ಕಾರ್ಯಕ್ರಮ ಸಂಪನ್ನಗೊಂಡ ಬಳಿಕ ಪ್ರತಿಕೃತಿಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT