ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊನ್ನಾವರ: ಬಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಜಗದೀಪ ತೆಂಗೇರಿ ರಾಜೀನಾಮೆ

Published 21 ಮೇ 2024, 13:34 IST
Last Updated 21 ಮೇ 2024, 13:34 IST
ಅಕ್ಷರ ಗಾತ್ರ

ಹೊನ್ನಾವರ: ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಹಲವು ವರ್ಷಗಳಿಂದ ಮುಂಚೂಣಿಯಲ್ಲಿ ತೊಡಗಿಕೊಂಡಿದ್ದ ಪಕ್ಷದ ಹಿರಿಯ ಮುಖಂಡ ಜಗದೀಪ ತೆಂಗೇರಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರ ಪುಣ್ಯತಿಥಿ ಅಂಗವಾಗಿ ಪಕ್ಷದ ವತಿಯಿಂದ ಮಂಗಳವಾರ ರಕ್ತದಾನ ಶಿಬಿರ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜೀನಾಮೆ ನೀಡುವ ತಮ್ಮ ನಿರ್ಧಾರವನ್ನು ಪ್ರಕಟಿಸಿದರು.

ಪಕ್ಷಾತೀತವಾಗಿ ಎಲ್ಲ ಜಾತಿಯ ಜನರೂ ನನ್ನನ್ನು ಪ್ರೀತಿಸುತ್ತಿದ್ದು ಅವರೆಲ್ಲರ ವಿಶ್ವಾಸದೊಂದಿಗೆ ಪಕ್ಷವನ್ನು ಸಂಘಟಿಸಿದ್ದೇನೆ. ಆದರೆ ಸಂಖ್ಯೆಯಲ್ಲಿ ಸಣ್ಣ ಜಾತಿಗೆ ಸೇರಿದವನೆಂಬ ಕಾರಣಕ್ಕೆ ನನಗೆ ಪಕ್ಷದಿಂದ ಸಿಗಬೇಕಾಗಿದ್ದ ಸ್ಥಾನ-ಮಾನ ಸಿಗದಂತೆ ಮಾಡಲಾಗುತ್ತಿದೆ. 40 ವರ್ಷ ಪಕ್ಷಕ್ಕಾಗಿ ದುಡಿದ ನನಗೆ ಇತ್ತೀಚೆಗೆ ಕೆಡಿಪಿ ಸದಸ್ಯ ಸ್ಥಾನ ನಿರಾಕರಿಸಿ ಅದನ್ನು ಪಕ್ಷದ ಪ್ರಾಥಮಿಕ ಸದಸ್ಯನಲ್ಲದ ಬೇರೊಬ್ಬರಿಗೆ ನೀಡಲಾಗಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜೀವ ಗಾಂಧಿಯವರಿಂದ ಪ್ರೇರಣೆ ಪಡೆದು ಅಂದು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾದೆ. ಪಕ್ಷ ಸಂಘಟನೆಗಾಗಿ ಹಲವು ಸತ್ಯಾಗ್ರಹ, ಹೋರಾಟ ನಡೆಸಿದ್ದೇನೆ. ಪರೇಶ ಮೇಸ್ತ ಸಾವಿನ ಘಟನೆಯ ನಂತರ ಪಕ್ಷಕ್ಕೆ ಹಿನ್ನಡೆಯಾಗಿದ್ದ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲೂ ನನ್ನ ಕಾರ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಪಕ್ಷಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಮತಗಳು ಸಿಗುವಂತೆ ನೋಡಿಕೊಂಡಿದ್ದೇನೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಕೇವಲ 15 ಮತಗಟ್ಟೆಗಳಿಗೆ ಸೀಮಿತವಾಗಿಸಿದರು. ಕಳೆದ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ನಡೆಯುತ್ತಿರುವ ಘಟನೆಗಳು ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿವೆ' ಎಂದು ಹೇಳಿದರು.

‘ನನಗೆ ಸರ್ಕಾರದ ಯಾವುದೇ ಲಾಭದಾಯಕ ಹುದ್ದೆ ಬೇಡ. ಕಾಂಗ್ರೆಸ್ ಪಕ್ಷದ ಸಂಘಟನಾತ್ಮಕ ಕೆಲಸದಲ್ಲಿ ಜೀವನದ ಕೊನೆಯವರೆಗೂ ತೊಡಗಿಕೊಳ್ಳುತ್ತೇನೆ' ಎಂದು ಅವರು ತಿಳಿಸಿದರು.

ಮುಖಂಡರಾದ ದಾಮೋದರ ನಾಯ್ಕ, ಬಾಲಚಂದ್ರ ನಾಯ್ಕ, ಚಂದ್ರಶೇಖರ ಚಾರೋಡಿ, ಕೇಶವ ಮೇಸ್ತ, ಜಕ್ರಿಯಾ ಶೇಖ್, ಕೃಷ್ಣ ಹರಿಜನ, ಜ್ಯೋತಿ ಮಹಾಲೆ, ಸುಧಾ ನಾಯ್ಕ, ಲಾರ್ಸನ್ ರೊಡ್ರಗೀಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT