ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ಕಷ್ಟದ ಬದುಕು ಕಳೆಯುವ ‘ಕಮ್ಮರಗಾಂವ್’

Published 21 ಫೆಬ್ರುವರಿ 2024, 5:19 IST
Last Updated 21 ಫೆಬ್ರುವರಿ 2024, 5:19 IST
ಅಕ್ಷರ ಗಾತ್ರ

ಕಾರವಾರ: ಸರ್ಕಾರ ಉಚಿತವಾಗಿ ನೀಡುವ ಪಡಿತರ ಪಡೆಯಲು ಗ್ರಾಮಸ್ಥರು ಐದಾರು ಸಾವಿರ ಖರ್ಚು ಮಾಡಬೇಕು. ಗ್ರಾಮ ಪಂಚಾಯಿತಿ ಕಚೇರಿಗೆ ಬರಲು 14 ಕಿ.ಮೀ ನಡೆದು ಬರಬೇಕು. ರಾಜ್ಯದ ಗಡಿಭಾಗದಲ್ಲಿದ್ದರೂ ಶಾಲೆ, ಮಾರುಕಟ್ಟೆ, ಆಸ್ಪತ್ರೆ ಸೌಲಭ್ಯಕ್ಕೆ ರಾಜ್ಯದ ಸಂಪರ್ಕವನ್ನೇ ಕಡಿದುಕೊಂಡ ಗ್ರಾಮದ ಹೆಸರು ‘ಕಮ್ಮರಗಾಂವ್’.

ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮದಲ್ಲಿ 40 ಮನೆಗಳು, 130 ರಷ್ಟು ಜನಸಂಖ್ಯೆ ಇದೆ. 109 ಮಂದಿ ಮತದಾರರೂ ಇದ್ದಾರೆ. ಪ್ರತಿ ಚುನಾವಣೆ ವೇಳೆ ಗ್ರಾಮಕ್ಕೆ ರಸ್ತೆ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ಗ್ರಾಮಸ್ಥರಿಗೆ ಸಿಗುತ್ತದೆ. ರಸ್ತೆ ಸಂಪರ್ಕ ಕಾಣದೆ ಅವರು ಏಳೂವರೆ ದಶಕ ಜೀವನ ಸವೆಸಿದ್ದಾರೆ.

ಗ್ರಾಮಸ್ಥರು ಪಡಿತರ ಒಯ್ಯಲು, ಸರ್ಕಾರಿ ಕೆಲಸಕ್ಕೆ ಗೋಟೆಗಾಳಿಗೆ ಬರಬೇಕು. ಹೀಗೆ ಬರಲು 14 ಕಿ.ಮೀ ಕಾಲ್ನಡಿಗೆಯಲ್ಲಿ ಬರುವುದು ಅನಿವಾರ್ಯ. ಅಕ್ಕಿಯ ಮೂಟೆ ಸಾಗಿಸಲು ಮಾಜಾಳಿ–ಗೋವಾ–ಬಾಡಪೋಲಿ ಕ್ರಾಸ್ ಮಾರ್ಗವಾಗಿ 70 ಕಿ.ಮೀ ದೂರ ವಾಹನದಲ್ಲಿ ಸಾಗಬೇಕಾಗಿದೆ.

ಅನಾರೋಗ್ಯಕ್ಕೆ ತುತ್ತಾದರೆ, ದಿನಸಿ, ಇನ್ನಿತರ ಸಾಮಗ್ರಿ ಖರೀದಿಗೆ ನೆರೆಯ ಗೋವಾ ರಾಜ್ಯದ ನೇತ್ರಾವಳಿ, ಸಾವಟೆ ಪಟ್ಟಣ ಅವಲಂಬಿಸಿದ್ದಾರೆ. ರಸ್ತೆ ಇಲ್ಲದ ಕಾರಣ ಬಸ್ ಸೌಲಭ್ಯವೂ ಇಲ್ಲ. ಗೋವಾ ಕಡೆಗೆ ಮೂರು ಕಿ.ಮೀ ನಡೆದು ಅಲ್ಲಿಂದ ನೇತುಲ್ಲೆ ಹಳ್ಳಿಗೆ ಬರುವ ಬಸ್ ಏರಿ ಪಟ್ಟಣಕ್ಕೆ ಸಾಗಬೇಕಾದ ಅನಿವಾರ್ಯತೆ ಇದೆ.

‘ಕಮ್ಮರಗಾಂವ ಗ್ರಾಮಕ್ಕೆ ನೇರವಾದ ರಸ್ತೆ ಸಂಪರ್ಕ ಇಲ್ಲ. ಗೋಯರ್ ಗ್ರಾಮದವರೆಗೆ ಕಚ್ಚಾ ರಸ್ತೆ ಇದೆ. ಅಲ್ಲಿಂದ ಮುಂದೆ 14 ಕಿ.ಮೀ ದಟ್ಟ ಅರಣ್ಯದ ನಡುವೆ ಹಾದುಹೋದ ಕಾಲುದಾರಿಯಲ್ಲಿ ಸಾಗಬೇಕಾಗುತ್ತದೆ. ಗ್ರಾಮದಲ್ಲಿ ಕೃಷಿ ಜಮೀನು ಇಲ್ಲ. ಕೆಲವರು ಗೋಯರ್ ಗ್ರಾಮದಲ್ಲಿ ಗದ್ದೆ ಗೇಣಿಗೆ ಪಡೆದು ಕೃಷಿ ಮಾಡುತ್ತೇವೆ. ಬಹುಪಾಲು ಜನರ ಗೋವಾದ ಹಳ್ಳಿ, ಪಟ್ಟಣಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಾರೆ’ ಎನ್ನುತ್ತಾರೆ ಗ್ರಾಮದ ತಾಬ್ಡೊ ವೇಳಿಪ.

‘ಗ್ರಾಮದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತು ವರ್ಷಗಳ ಹಿಂದೆಯೇ ಬಾಗಿಲು ಮುಚ್ಚಿದೆ. ಗ್ರಾಮದ ಹಲವು ಮಕ್ಕಳು ಗೋವಾದ ಶಾಲೆ, ಕಾಲೇಜಿಗೆ ತೆರಳುತ್ತಾರೆ. ಕೆಲವರನ್ನು ಬಾಳ್ನಿ, ಕದ್ರಾ ಭಾಗದಲ್ಲಿ ಬಂಧುಗಳ ಮನೆಯಲ್ಲಿ ಉಳಿಸಿ ವ್ಯಾಸಂಗ ಮಾಡಿಸುತ್ತಿದ್ದೇವೆ’ ಎಂದರು. 

ಕಮ್ಮರಗಾಂವ ಗ್ರಾಮದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆಯು ದ್ವಿಚಕ್ರ ವಾಹನ ನಿಲ್ಲಿಸುವ ಶೆಡ್ ಆಗಿ ಪರಿವರ್ತನೆಗೊಂಡಿದೆ.
ಕಮ್ಮರಗಾಂವ ಗ್ರಾಮದಲ್ಲಿ ವಿದ್ಯಾರ್ಥಿಗಳಿಲ್ಲದೆ ಮುಚ್ಚಿದ ಸರ್ಕಾರಿ ಶಾಲೆಯು ದ್ವಿಚಕ್ರ ವಾಹನ ನಿಲ್ಲಿಸುವ ಶೆಡ್ ಆಗಿ ಪರಿವರ್ತನೆಗೊಂಡಿದೆ.
ಕಮ್ಮರಗಾಂವ್ ಗ್ರಾಮಕ್ಕೆ ರಸ್ತೆ ನಿರ್ಮಿಸಲು ಹಲವು ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಅರಣ್ಯ ಇಲಾಖೆ ಅನುಮತಿ ಸಿಗದೆ ಸಮಸ್ಯೆಯಾಗಿದೆ
- ಅನಿಲ ಗಾಂವಕರ ಗೋಟೆಗಾಳಿ ಗ್ರಾ.ಪಂ.ಸದಸ್ಯ

ಅಡುಗೆಗೆ ಸೌಧೆ ಒಲೆಯೇ ಗತಿ

‘ಗ್ರಾಮಕ್ಕೆ ವಾಹನವೇ ಬರದ ಕಾರಣ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಆಗುತ್ತಿಲ್ಲ. ಕರ್ನಾಟಕ ನಿವಾಸಿಗಳಾಗಿದ್ದರಿಂದ ಗೋವಾ ರಾಜ್ಯದಿಂದ ಸಿಲಿಂಡರ್ ಪಡೆಯುವುದು ಕಷ್ಟವಾಗಿದೆ. ಆರೋಗ್ಯ ವಿಚಾರದಲ್ಲೂ ಇದೇ ಸಮಸ್ಯೆ ಇದೆ. ಹತ್ತಿರವೇ ಆಸ್ಪತ್ರೆ ಇಲ್ಲದ ಕಾರಣ ಗೋವಾದ ಸಾವಟೆ ನೇತ್ರಾವಳಿಯ ದವಾಖಾನೆಗೆ ತೆರಳಬೇಕಾಗುತ್ತದೆ. ಅಲ್ಲಿ ಕರ್ನಾಟಕ ಆಯುಷ್ಮಾನ್ ಭಾರತ ಕಾರ್ಡ್ ಚಲಾವಣೆಯಲ್ಲಿಲ್ಲ. ಮಕ್ಕಳ ಶಿಕ್ಷಣಕ್ಕೂ ರಿಯಾಯಿತಿ ಸೌಲಭ್ಯ ಸಿಗುತ್ತಿಲ್ಲ’ ಎಂದು ಗ್ರಾಮಸ್ಥೆ ಸುಶೀಲಾ ಗಾಂವಕರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT