ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಕರಾವಳಿ ಉತ್ಸವ ಆಚರಣೆ ಅನುಮಾನ?

ಬರಗಾಲದ ಸ್ಥಿತಿ: ಸಿ.ಎಂ ಆಗಮನದ ನಿರೀಕ್ಷೆಯಲ್ಲಿ ಜಿಲ್ಲಾಡಳಿತ
Published 20 ಜನವರಿ 2024, 4:38 IST
Last Updated 20 ಜನವರಿ 2024, 4:38 IST
ಅಕ್ಷರ ಗಾತ್ರ

ಕಾರವಾರ: ಕಳೆದ ಐದು ವರ್ಷಗಳಿಂದ ಆಯೋಜನೆಗೊಳ್ಳದ, ಜಿಲ್ಲೆಯ ಅದ್ದೂರಿ ಆಚರಣೆಯಲ್ಲಿ ಒಂದೆನಿಸಿದ ‘ಕರಾವಳಿ ಉತ್ಸವ’ ಈ ಬಾರಿಯಾದರೂ ನಡೆಯಬಹುದು ಎಂಬ ಜನರ ನಿರೀಕ್ಷೆ ಕೈಗೂಡುವ ಲಕ್ಷಣ ಗೋಚರಿಸುತ್ತಿಲ್ಲ. ಜಿಲ್ಲೆಯ 11 ತಾಲ್ಲೂಕುಗಳಲ್ಲಿ ಎದುರಾಗಿರುವ ಬರಗಾಲದ ಸ್ಥಿತಿ, ಮುಖ್ಯಮಂತ್ರಿ ಆಗಮನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪಟ್ಟು ಹಿಡಿರುವುದರಿಂದ ಉತ್ಸವ ಆಚರಣೆಗೆ ಅಡ್ಡಿಯಾಗಬಹುದಾದ ಸಾಧ್ಯತೆ ಇದೆ.

ಬಹುತೇಕ ಬಾರಿ ಕರಾವಳಿ ಉತ್ಸವ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿ ನಡೆದಿದೆ. ಈ ಬಾರಿಯೂ ಅದ್ಧೂರಿ ಉತ್ಸವ ಆಚರಿಸಲು ಸಚಿವ ಮಂಕಾಳ ವೈದ್ಯ ಆಸಕ್ತಿ ತೋರಿದ್ದಾರೆ. ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಉತ್ಸವಕ್ಕೆ ಸಿ.ಎಂ ಸಿದ್ದರಾಮಯ್ಯ ಅವರನ್ನು ಕರೆಯಿಸಲು ಅವರು ಪ್ರಯತ್ನ ನಡೆಸುತ್ತಿದ್ದಾರೆ.

‘ಕರಾವಳಿ ಉತ್ಸವ ಆಚರಣೆಗೆ ಹಲವು ದಿನಗಳಿಂದಲೂ ಸಿದ್ಧತೆ ಮಾಡಿಟ್ಟುಕೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಲೇ ಉತ್ಸವ ಉದ್ಘಾಟಿಸಲು ಸಚಿವರು ಆಸಕ್ತಿ ತೋರಿದ್ದಾರೆ. ಮುಖ್ಯಮಂತ್ರಿ ಒಪ್ಪಿಗೆ ಸಿಕ್ಕ ಬಳಿಕ ಕಾರ್ಯಕ್ರಮದ ದಿನ ನಿಗದಿಪಡಿಸಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕರಾವಳಿ ಉತ್ಸವ ಆಚರಣೆ ಸಿದ್ಧತೆಗೆ ಕನಿಷ್ಠ ಹದಿನೈದು ದಿನದಿಂದ ಒಂದು ತಿಂಗಳ ಕಾಲಾವಕಾಶ ತಗುಲಲಿದೆ. ಈ ಹಿಂದಿನ ಉತ್ಸವಗಳೆಲ್ಲವೂ ಡಿಸೆಂಬರ್ ಅಥವಾ ಜನವರಿ ತಿಂಗಳಿನಲ್ಲಿಯೇ ನಡೆದಿದೆ. ಫೆಬ್ರವರಿಯಲ್ಲಿ ಕದಂಬೋತ್ಸವ ಆಚರಣೆಯೂ ಇರುವುದರಿಂದ ಕರಾವಳಿ ಉತ್ಸವ ಆಚರಣೆಗೆ ಸಮಯ ನಿಗದಿಗೆ ಅಡ್ಡಿಯಾಗಬಹುದು. ಹೀಗಾಗಿ ಈ ಬಾರಿ ಉತ್ಸವ ನಡೆಸುವುದು ಅನುಮಾನ’ ಎಂದು ಎಂಟಕ್ಕೂ ಹೆಚ್ಚು ಕರಾವಳಿ ಉತ್ಸವ ಆಯೋಜನೆಗೆ ಕೆಲಸ ಮಾಡಿದ್ದ ನಿವೃತ್ತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.   

2018ರ ಡಿಸೆಂಬರ್ ತಿಂಗಳಿನಲ್ಲಿ ಅಂದಿನ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇಲ್ಲಿನ ಟ್ಯಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಕರಾವಳಿ ಉತ್ಸವ ಆಯೋಜನೆಗೊಂಡಿತ್ತು. ತದನಂತರ ನೆರೆ ಹಾವಳಿ, ಕೋವಿಡ್ ಕಾರಣಕ್ಕೆ ಉತ್ಸವ ಆಚರಣೆ ಕೈಗೂಡಿರಲಿಲ್ಲ.

ಪ್ರವಾಸೋದ್ಯಮ ಇಲಾಖೆಯ ಅನುದಾನ, ದಾನಿಗಳ ನೆರವಿನಿಂದ 1990ರ ದಶಕದಿಂದಲೂ ಕರಾವಳಿ ಉತ್ಸವ ಸಾಂಪ್ರದಾಯಿಕ ಉತ್ಸವವಾಗಿ ಆಚರಣೆಯಲ್ಲಿದೆ. ಈವರೆಗೆ ಸುಮಾರು 14ಕ್ಕೂ ಹೆಚ್ಚು ಬಾರಿ ಉತ್ಸವ ಆಯೋಜನೆಗೊಂಡಿದೆ. ಬಾಲಿವುಡ್, ಸ್ಯಾಂಡಲ್‍ವುಡ್ ಗಾಯಕರು ಪ್ರದರ್ಶನ ನೀಡುವ ಕಾರಣಕ್ಕೆ ಉತ್ಸವ ಹೆಚ್ಚು ಮೆರಗು ಪಡೆದುಕೊಂಡಿದೆ. 

ಕರಾವಳಿ ಉತ್ಸವಕ್ಕೆ ಬೇಕಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಸೂಕ್ತ ದಿನವನ್ನು ಉಸ್ತುವಾರಿ ಸಚಿವರ ಜತೆ ಚರ್ಚಿಸಿ ನಿಗದಿಪಡಿಸಲಿದ್ದೇವೆ

-ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ

ಉತ್ಸವಕ್ಕೆ ಅಡ್ಡಿಯಾಗಬಹುದಾದ ಅಂಶಗಳೇನು? * ಮುಖ್ಯಮಂತ್ರಿ ಪಾಲ್ಗೊಳ್ಳುವ ಒಪ್ಪಿಗೆ ದೊರೆಯುವವರೆಗೆ ದಿನ ನಿಗದಿ ಕಷ್ಟ * ಫೆ.24 25 ರಂದು ಕದಂಬೋತ್ಸವ ಆಚರಣೆಯೂ ಆಗಬೇಕಿದ್ದು ಜಿಲ್ಲಾಡಳಿತಕ್ಕೆ ಸಿದ್ಧತೆಗೆ ಒತ್ತಡ ಬೀಳಬಹುದು * ಜಿಲ್ಲೆಯ 12 ತಾಲ್ಲೂಕುಗಳ ಪೈಕಿ 11 ಬರಪೀಡಿತ ಎಂದು ಘೋಷಿಸಿರುವುದು ಅದ್ದೂರಿ ಆಚರಣೆಗೆ ಅಡ್ಡಿಯಾಗಬಹುದು * ಅಲ್ಪ ಅವಧಿಯಲ್ಲಿ ಉತ್ಸವಕ್ಕೆ ಸಿದ್ಧತೆಗೆ ಸಮಸ್ಯೆ ಆಗುವ ಸಾಧ್ಯತೆ * ಎಸ್ಸೆಸ್ಸೆಲ್ಸಿ ಪಿಯುಸಿ ಪೂರ್ವಸಿದ್ಧತೆ ಪರೀಕ್ಷೆಗಳು ಆರಂಭಗೊಳ್ಳುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT