ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದಲ್ಲಿ ಡಿಸೆಂಬರ್‌ನಲ್ಲಿ ಅದ್ಧೂರಿ ಕರಾವಳಿ ಉತ್ಸವ

ಕರ್ನಾಟಕ ರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
Last Updated 1 ನವೆಂಬರ್ 2022, 14:26 IST
ಅಕ್ಷರ ಗಾತ್ರ

ಕಾರವಾರ: ‘ಡಿಸೆಂಬರ್‌ನಲ್ಲಿ ಅದ್ಧೂರಿಯಾಗಿ ಕರಾವಳಿ ಉತ್ಸವ ಆಯೋಜಿಸಲು ಸರ್ಕಾರ ಆಶಯ ಹೊಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ, ಗೌರವ ವಂದನೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ‘ಉತ್ಸವ ಆಯೋಜಿಸುವಂತೆ ಜಿಲ್ಲೆಯ ಜನರಿಂದ ಬೇಡಿಕೆ, ಒತ್ತಡವಿದೆ. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಸಭೆ ಹಮ್ಮಿಕೊಂಡು ದಿನಾಂಕ ನಿಗದಿ ಸೇರಿದಂತೆ ಇತರ ವಿಷಯಗಳ ಬಗ್ಗೆ ನಿರ್ಧರಿಸಲಾಗುವುದು’ ಎಂದು ಹೇಳಿದರು.

ಹಳಿಯಾಳದಲ್ಲಿ ಕಬ್ಬು ಬೆಳೆಗಾರರ ಉಪವಾಸ ಸತ್ಯಾಗ್ರಹದ ಬಗ್ಗೆ ಮಾತನಾಡಿ, ‘ಬೆಳೆಗಾರರು ಮತ್ತು ಕಾರ್ಖಾನೆಯವರ ಜೊತೆ ಸಕ್ಕರೆ ಆಯುಕ್ತರು ಚರ್ಚಿಸಿದ್ದಾರೆ. ಬೆಳೆಗಾರರ ಬೇಡಿಕೆಯನ್ನು ಹೇಗೆ ಈಡೇರಿಸಬಹುದು ಎಂದು ಎರಡು, ಮೂರು ಆಯಾಮಗಳಿಂದ ಯೋಚಿಸಲಾಗುತ್ತಿದೆ’ ಎಂದರು.

ಗುತ್ತಿಗೆ ಆಧಾರದಲ್ಲಿ ನೇಮಕ:

‘ಜಿಲ್ಲೆಯಲ್ಲೂ ಜಾನುವಾರಿಗೆ ಲಂಪಿಸ್ಕಿನ್ (ಚರ್ಮ ಗಂಟುರೋಗ) ಕಾಣಿಸಿಕೊಂಡಿದೆ. ವಿವಿಧೆಡೆ ಒಟ್ಟು 14 ಆಕಳು ಮೃತಪಟ್ಟಿವೆ. ಮುನ್ನೆಚ್ಚರಿಕೆಯಾಗಿ ಜಿಲ್ಲೆಗೆ 50 ಸಾವಿರ ಡೋಸ್ ಲಸಿಕೆ ತರಿಸಲಾಗಿದ್ದು, ಜಾನುವಾರಿಗೆ ನೀಡಲಾಗುತ್ತಿದೆ. ರಾಜ್ಯದಾದ್ಯಂತ ಈ ಕಾಯಿಲೆಯನ್ನು ವ್ಯವಸ್ಥಿತವಾಗಿ ನಿಯಂತ್ರಿಸಲಾಗುತ್ತಿದೆ. ಪಶು ವೈದ್ಯರ ಕೊರತೆ ಇರುವಲ್ಲಿಗೆ ಹೊರ ಗುತ್ತಿದೆ ಆಧಾರದಲ್ಲಿ ನೇಮಿಸಲಾಗುತ್ತದೆ’ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಬೇಕು ಎಂಬುದು ಆ ಸಮುದಾಯಗಳ ಹಲವು ವರ್ಷಗಳ ಬೇಡಿಕೆಯಾಗಿತ್ತು. ಅದನ್ನು ಅರಿತ ರಾಜ್ಯ ಸರ್ಕಾರವು, ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ 15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ 3ರಿಂದ ಶೇ 7ಕ್ಕೆ ಹೆಚ್ಚಿಸಿದೆ’ ಎಂದರು.

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಮಂದಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಗಮನ ಸೆಳೆದವು. ಪೊಲೀಸ್, ಎನ್.ಸಿ.ಸಿ ತುಕಡಿಗಳ ಪಥಸಂಚಲನ ಆಕರ್ಷಕವಾಗಿತ್ತು.

21ರಂದು ಉದ್ಘಾಟನೆ:

‘ಹೆಂಜಾ ನಾಯ್ಕ ಸೇನಾ ತರಬೇತಿ ಶಾಲೆಯನ್ನು ಮಾಜಾಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಖಾಲಿ ಜಾಗದಲ್ಲಿ ಸದ್ಯಕ್ಕೆ ಆರಂಭಿಸಲಾಗುತ್ತದೆ. ಶಾಲೆಯನ್ನು ನ.21ರಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಅದಕ್ಕೆ ಬೇಕಾದ ವಿಶೇಷ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ನಾಲ್ಕು ತಿಂಗಳಿಗೆ ಒಂದರಂತೆ ವರ್ಷಕ್ಕೆ ಮೂರು ಸಲ ಶಿಬಿರಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

‘ಮುಂದಿನ ವಾರ ಸಭೆ’:

ಜಿಲ್ಲೆಯ ರೋಗಿಗಳಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಯೋಜನೆಯಡಿ ದೊಡ್ಡ ಖಾಸಗಿ ಆಸ್ಪತ್ರೆಗಳು 100 ಹಾಸಿಗೆಗಳನ್ನು ನಿಗದಿ ಮಾಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಉಡುಪಿಯ ಆಸ್ಪತ್ರೆಯಲ್ಲಿ ನಿಗದಿ ಮಾಡಿದ್ದು ಕಡಿಮೆಯಾಗಿದೆ. ಆರೋಗ್ಯ ಸಚಿವ ಸುಧಾಕರ್ ಕಾರವಾರಕ್ಕೆ ಬಂದಿದ್ದಾಗಲೂ ಈ ಬಗ್ಗೆ ಚರ್ಚಿಸಲಾಗಿತ್ತು. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಅಧಿಕಾರಿಗಳು, ಶಾಸಕರೊಂದಿಗೆ ಮುಂದಿನ ವಾರ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಸಕಿ ರೂಪಾಲಿ ನಾಯ್ಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT