ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ | ಇಂದು ಪ್ರಾರಂಭೋತ್ಸವ: ಶಾಲೆ ಬಿಟ್ಟವರಿಗೆ ಹುಡುಕಾಟ

ಬೇಡಿಕೆಯ ಅರ್ಧದಷ್ಟೂ ಪೂರೈಕೆ ಆಗದ ಪಠ್ಯಪುಸ್ತಕ
Published 31 ಮೇ 2024, 0:03 IST
Last Updated 31 ಮೇ 2024, 0:03 IST
ಅಕ್ಷರ ಗಾತ್ರ

ಕಾರವಾರ: ಎರಡು ತಿಂಗಳುಗಳ ಬಳಿಕ ಶಾಲೆ, ಪ್ರೌಢಶಾಲೆಗಳು ಬಾಗಿಲು ತೆರೆದಿದ್ದು, ಶುಕ್ರವಾರ ಪ್ರಾರಂಭೋತ್ಸವಕ್ಕೆ ಸಜ್ಜುಗೊಂಡಿವೆ. ವಿದ್ಯಾರ್ಥಿಗಳನ್ನು ಸಡಗರದೊಂದಿಗೆ ಸ್ವಾಗತಿಸಲು ಸಿದ್ಧಗೊಂಡಿರುವ ಶಿಕ್ಷಕರು ಶಾಲೆ ಬಿಟ್ಟು ಹೊರಗಿರುವ ವಿದ್ಯಾರ್ಥಿಗಳನ್ನು ಕರೆತರಲೂ ತಯಾರಿ ಮಾಡಿಕೊಂಡಿದ್ದಾರೆ.

ಕಾರವಾರ ಮತ್ತು ಶಿರಸಿ ಶೈಕ್ಷಣಿಕ ಜಿಲ್ಲೆ ಒಳಗೊಂಡಿರುವ ಉತ್ತರ ಕನ್ನಡದಲ್ಲಿ ಸುಮಾರು 2,570 ರಷ್ಟು ಶಾಲೆಗಳಿವೆ. ಈ ಪೈಕಿ ಶೇ 70 ರಷ್ಟು ಸರ್ಕಾರಿ ಶಾಲೆಗಳಾಗಿವೆ. 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 2.10 ಲಕ್ಷದಷ್ಟು ವಿದ್ಯಾರ್ಥಿಗಳಿದ್ದಾರೆ.

ಮೇ 29 ರಂದು ಶಾಲೆಗಳ ಬಾಗಿಲು ತೆಗೆದು ಪ್ರಾರಂಭೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗಿತ್ತು. ಕೊಠಡಿಗಳನ್ನು ಶುಚಿಗೊಳಿಸಿ ಡೆಸ್ಕ್, ಬೆಂಚ್‍ಗಳನ್ನು ಅಳವಡಿಸಲಾಗಿದೆ.

ತರಗತಿ ಆರಂಭಿಸಲು ಅಗತ್ಯ ವ್ಯವಸ್ಥೆಯನ್ನೇನೋ ಮಾಡಿಕೊಳ್ಳಲಾಗಿದೆ. ಆದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪಠ್ಯ ಪುಸ್ತಕಗಳ ಲಭ್ಯತೆ ಇಲ್ಲ ಎಂಬುದು ಶಿಕ್ಷಕರ ಗೋಳು. ಎರಡೂ ಜಿಲ್ಲೆಗಳಿಂದ ಸೇರಿ ಸುಮಾರು 12 ಲಕ್ಷದಷ್ಟು ಪುಸ್ತಕಗಳ ಬೇಡಿಕೆ ಇಡಲಾಗಿತ್ತು. ಈ ಪೈಕಿ ಶೇ 60 ರಷ್ಟು ಪುಸ್ತಕಗಳ ಪೂರೈಕೆ ಇನ್ನೂ ಆಗಿಲ್ಲ ಎನ್ನುತ್ತಿವೆ ಶಿಕ್ಷಣ ಇಲಾಖೆ ಮೂಲಗಳು.

‘ವಿದ್ಯಾರ್ಥಿಗಳನ್ನು ಸ್ವಾಗತಿಸುವ ಜತೆಗೆ ಕಳೆದ ವರ್ಷ ಶಾಲೆ ಬಿಟ್ಟಿದ್ದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರಲು ಪ್ರಯತ್ನ ನಡೆಯಬೇಕಿದೆ. ಮೇ 31 ರಿಂದ ಜೂನ್ 30ರವರೆಗೆ ದಾಖಲಾತಿ ಆಂದೋಲನದ ಮೂಲಕ ಶಿಕ್ಷಕರು ಮನೆ ಬಾಗಿಲಿಗೆ ತೆರಳಿ ವಿದ್ಯಾರ್ಥಿ ಮತ್ತು ಪಾಲಕರ ಮನವೊಲಿಸಿ ಕರೆತರುವ ಕೆಲಸ ಮಾಡಲಿದ್ದಾರೆ’ ಎಂದು ಶಿರಸಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಪಿ.ಬಸವರಾಜ್ ತಿಳಿಸಿದರು.

‘ಶಾಲೆ ಬಿಟ್ಟ ವಿದ್ಯಾರ್ಥಿಗಳ ಜತೆಗೆ ಅಂಗನವಾಡಿಗಳಿಗೆ ಭೇಟಿ ನೀಡಿ ಆರು ವರ್ಷ ಪೂರ್ಣಗೊಂಡ ವಿದ್ಯಾರ್ಥಿಗಳ ಮಾಹಿತಿ ಕಲೆಹಾಕಿ ಅವರನ್ನು ಶಾಲೆಗೆ ದಾಖಲು ಮಾಡಿಕೊಳ್ಳುವ ಜವಾಬ್ದಾರಿಯೂ ಶಿಕ್ಷಕರ ಮೇಲಿದೆ. ದಾಖಲಾತಿ ಆಂದೋಲನದ ಭಾಗವಾಗಿ ಈ ಪ್ರಕ್ರಿಯೆಯೂ ನಡೆಯಲಿದೆ’ ಎಂದು ತಿಳಿಸಿದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿರಸಿ ಜಿಲ್ಲೆಯಲ್ಲಿ 161, ಕಾರವಾರ ಜಿಲ್ಲೆಯಲ್ಲಿ ಸುಮಾರು 19 ವಿದ್ಯಾರ್ಥಿಗಳು ಶಾಲೆಯಿಂದ ದೂರ ಇದ್ದರು.

ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಪೂರೈಕೆ ಆಗದಿದ್ದರೂ ಸಮವಸ್ತ್ರ ಪೂರೈಕೆಯಾಗಿದೆ. ಶಾಲೆ ಪ್ರಾರಂಭೋತ್ಸವದ ವೇಳೆ ವಿತರಣೆ ಮಾಡುತ್ತೇವೆಪಿ
– ಬಸವರಾಜ್, ಶಿರಸಿ ಡಿಡಿಪಿಐ
ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಸಲು ಸೂಚಿಸಲಾಗಿದೆ. ಮೊದಲ ದಿನದಿಂದಲೇ ತರಗತಿ ಆರಂಭಿಸುವ ಜತೆಗೆ ಶಿಕ್ಷಕರು ದಾಖಲಾತಿ ಆಂದೋಲನ ಸೇರಿದಂತೆ ಇಲಾಖೆ ಸೂಚಿಸಿದ ಪ್ರಕ್ರಿಯೆ ಆರಂಭಿಸಲಿದ್ದಾರೆ
-ಲತಾ ನಾಯಕ ಕಾರವಾರ ಡಿಡಿಪಿಐ
ತಳಿರು ತೋರಣಗಳಿಂದ ಸಿಂಗಾರ
ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಪ್ರಾರಂಭೋತ್ಸವಕ್ಕಾಗಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಕೆಲವೆಡೆ ಸ್ಥಳೀಯ ಕಲಾ ಸಂಸ್ಕೃತಿ ಬಿಂಬಿಸುವ ಮಾದರಿಗಳನ್ನು ಬಳಸಿ ಪ್ರವೇಶದ್ವಾರ ರಚಿಸಲಾಗಿದೆ. ‘ಮೊದಲ ದಿನ ವಿದ್ಯಾರ್ಥಿಗಳೊಂದಿಗೆ ಪಾಲಕರು ಶಾಲೆಗೆ ಬರಲು ಸೂಚಿಸಲಾಗಿದೆ. ಪಾಲಕರೊಂದಿಗೆ ಸಭೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಿಹಿ ತಿನಿಸು ಒಳಗೊಂಡ ಬಿಸಿಯೂಟ ವಿತರಿಸಲಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT