ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಮುಂಗಾರು ಮಳೆಯ ಕೊರತೆ: ಸೂಪಾ ಜಲಾಶಯದಲ್ಲಿ ನೀರು ಸಂಗ್ರಹ ಇಳಿಕೆ

Published : 11 ಸೆಪ್ಟೆಂಬರ್ 2023, 8:53 IST
Last Updated : 11 ಸೆಪ್ಟೆಂಬರ್ 2023, 8:53 IST
ಫಾಲೋ ಮಾಡಿ
Comments

ಕಾರವಾರ: ರಾಜ್ಯದ ಅತಿ ಎತ್ತರದ ಜಲಾಶಯ ಎಂಬ ಖ್ಯಾತಿಯ ಸೂಪಾ ಜಲಾಶಯದಲ್ಲಿ ಮುಂಗಾರು ಮಳೆಯ ಕೊರತೆಯಿಂದ ಈಚಿನ ವರ್ಷದಲ್ಲೇ ಅತಿ ಕಡಿಮೆ ಪ್ರಮಾಣದ ನೀರು ಸಂಗ್ರಹಣೆಯಾಗಿದೆ. ಇದರಿಂದ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಗರಿಷ್ಠ 564 ಮೀ. ನೀರು ಸಂಗ್ರಹಣಾ ಸಾಮರ್ಥ್ಯದ ಸೂಪಾ ಜಲಾಶಯ 1987ರಲ್ಲಿ ನಿರ್ಮಾಣಗೊಂಡಿದ್ದು, ಈವರೆಗೆ ಮೂರು ಬಾರಿ ಮಾತ್ರ ಭರ್ತಿಯಾಗಿತ್ತು. 2018, 2019ರಲ್ಲಿ ಸತತ ಎರಡು ವರ್ಷ ಗರಿಷ್ಠ ಮಟ್ಟದವರೆಗೆ ತಲುಪಿತ್ತು. ಅದಕ್ಕಿಂತ 12 ವರ್ಷ ಮೊದಲು ಗರಿಷ್ಠ ಸಂಗ್ರಹಣೆಯ ದಾಖಲೆ ಮಾಡಿತ್ತು. ಆಗ ಕ್ರಸ್ಟ್ ಗೇಟ್‍ಗಳ ಮೂಲಕ ನೀರು ಹೊರಕ್ಕೆ ಹರಿಸಲಾಗಿತ್ತು.

ಆದರೆ, ಈಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ನೀರು ಸಂಗ್ರಹಿಸಿಕೊಂಡಿದೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಯಲ್ಲಿ ನೀರು ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗಲು ಸಾಧ್ಯವಾಗಿಲ್ಲ.

‘ಜೂನ್ ತಿಂಗಳಿನಲ್ಲಿ ಮಳೆ ಬಿದ್ದಿರಲಿಲ್ಲ. ಜುಲೈ‍ನಲ್ಲಿ ರಭಸದಿಂದ ಮಳೆ ಸುರಿದು ಜಲಾಶಯದ ವ್ಯಾಪ್ತಿಯ ಪ್ರದೇಶದಲ್ಲಿ ನೆರೆಗೆ ಕಾರಣವಾಗಿತ್ತು. ಆಗ ಗರಿಷ್ಠ ಮಟ್ಟ ತಲುಪಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಜುಲೈ ಕೊನೆಯ ವಾರದ ಬಳಿಕ ವಾಡಿಕೆ ಪ್ರಮಾಣದ ಮಳೆಯೂ ಸುರಿದಿಲ್ಲ. ಹೀಗಾಗಿ ಜಲಾಶಯದಲ್ಲಿ ನೀರು ಸಂಗ್ರಹಣೆ ಇಳಿಕೆಯಾಗಿದೆ’ ಎಂದು ಕೆ.ಪಿ.ಸಿ ಅಧಿಕಾರಿಯೊಬ್ಬರು ಹೇಳಿದರು.

‘ಕಾಳಿನದಿ, ಉಪನದಿಗಳಿಂದ ನೀರಿನ ಹರಿವು ವಿಪರೀತ ಕಡಿಮೆಯಾಗಿದೆ. ಬಿಸಿಲಿನ ಝಳವೂ ಹೆಚ್ಚಿದ್ದರಿಂದ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಿದೆ. ಜಲಾಶಯದಲ್ಲಿ ನೀರು ಸಂಗ್ರಹಣೆ ಪ್ರಮಾಣ ಇಳಿಕೆಯಾಗಲು ಇದೂ ಒಂದು ಕಾರಣ. ನೀರಿನ ಸಂಗ್ರಹಣೆ ಹೆಚ್ಚದಿದ್ದರೆ ವಿದ್ಯುತ್ ಉತ್ಪದನೆಗೆ ತೊಡಕಾಗುವ ಸಾಧ್ಯತೆ ಇದೆ’ ಎಂದೂ ತಿಳಿಸಿದರು.

ಭಾನುವಾರ ಜಲಾಶಯದಲ್ಲಿ 545.58 ಮೀ. ನೀರು ಸಂಗ್ರಹವಿದ್ದು, ಒಳಹರಿವಿನ ಪ್ರಮಾಣ 3,351 ಕ್ಯೂಸೆಕ್‍ನಷ್ಟಿತ್ತು. ಹೊರಹರಿವಿನ ಪ್ರಮಾಣ 1,283 ಕ್ಯೂಸೆಕ್‍ ಇದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT