ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮದ ಭಕ್ತರ ಪೊರೆವ ‘ಖಾಪ್ರಿ’

ಕಾಳಿನದಿ ತಟದಲ್ಲಿರುವ ದೇವರಿಗೆ ಮದ್ಯ, ಸಿಗರೇಟಿನ ನೈವೇದ್ಯ
Published 17 ಮಾರ್ಚ್ 2024, 4:49 IST
Last Updated 17 ಮಾರ್ಚ್ 2024, 4:49 IST
ಅಕ್ಷರ ಗಾತ್ರ

ಕಾರವಾರ: ದೇವರಲ್ಲಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಭಕ್ತರು ಹಣ್ಣು, ಕಾಯಿ, ತಾಂಬೂಲ, ಇತ್ಯಾದಿ ಅರ್ಪಿಸುವುದು ವಾಡಿಕೆ. ಆದರೆ, ಇಲ್ಲಿನ ಕಾಳಿನದಿಯ ಅಂಚಿನಲ್ಲೇ ಇರುವ ಖಾಪ್ರಿದೇವರಿಗೆ ಹರಕೆ ಹೊತ್ತು ಭಕ್ತರು ಮದ್ಯ, ಸಿಗರೇಟು ನೀಡುತ್ತಾರೆ.

ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಪ್ರತಿ ವರ್ಷ ಜಾತ್ರೆಯ ವೇಳೆ ಖಾಪ್ರಿ ದೇವಸ್ಥಾನಕ್ಕೆ ವಿವಿಧ ಬ್ರ್ಯಾಂಡ್‍ನ ಮದ್ಯ ಹೊತ್ತು ತಂದು ಅರ್ಪಿಸುವ ಭಕ್ತರು ಕಾಣಸಿಗುತ್ತಾರೆ. ಕಡಿಮೆ ದರದ ಬ್ರ್ಯಾಂಡ್‍ನಿಂದ ಹಿಡಿದು ದುಬಾರಿ ಮೊತ್ತದ ಮದ್ಯದವರೆಗೆ ಭಕ್ತರು ದೇವರಿಗೆ ಅರ್ಪಿಸಿ ಪೂಜಿಸುತ್ತಾರೆ. ಜತೆಗೆ ಸಿಗರೇಟ್ ಕೂಡ ನೀಡುವ ವಾಡಿಕೆ ಇದೆ.

ಹಿಂದೂ ಧರ್ಮೀಯರು ಇಂತಹ ವಸ್ತುಗಳನ್ನು ನೀಡಿದರೆ ಇಲ್ಲಿಗೆ ಬರುವ ಮುಸ್ಲಿಂ ಭಕ್ತರು ಬೆಲ್ಲ, ಸಕ್ಕರೆ, ಕಲ್ಲುಸಕ್ಕರೆ ಅರ್ಪಿಸುತ್ತಾರೆ. ಕ್ರೈಸ್ತ್ ಧರ್ಮೀಯರು ಮೊಂಬತ್ತಿ ನೀಡುತ್ತಾರೆ, ಇಲ್ಲವೇ ದೇವಾಲಯದ ಎದುರಿನಲ್ಲಿ ಮೊಂಬತ್ತಿ ಬೆಳಗಿ ಪ್ರಾರ್ಥಿಸುತ್ತಾರೆ.

ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲದ ಖಾಪ್ರಿ ದೇವರು ಎಲ್ಲ ಧರ್ಮದ ಭಕ್ತರನ್ನು ಪೊರೆಯುವ ದೇವರು ಎಂದೇ ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಭಾನುವಾರ (ಮಾರ್ಚ್ 17) ವಾರ್ಷಿಕ ಜಾತ್ರೆ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ. ಅಂದು ಸಂಜೆ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆಯನ್ನೂ ಮಾಡಲಾಗುತ್ತದೆ.

‘ಆಫ್ರಿಕಾ ಖಂಡದಿಂದ ವಲಸೆ ಬಂದಿದ್ದ ಖಾಪ್ರಿ ಎಂಬ ಸಂತರೊಬ್ಬರು ಕೋಡಿಬಾಗದಲ್ಲಿ ನೆಲೆಸಿದ್ದರು. ಸಮೀಪದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿದ್ದ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ದಿವ್ಯ ಶಕ್ತಿಯಿಂದ ಹಲವು ತೊಂದರೆಗಳು ನಿವಾರಣೆಯಾದವಂತೆ. ಇದು ಸ್ಥಳೀಯರಲ್ಲಿ ಅವರ ಬಗ್ಗೆ ದೈವಿಕ ಭಾವನೆ ಮೂಡಿಸಿತು. ಅವರ ನಿಧನಾನಂತರ ಸುಂದರವಾದ ಗುಡಿಯನ್ನು ಅವರ ಅನುಯಾಯಿಗಳು ನಿರ್ಮಿಸಿದರು. ಅಲ್ಲಿ ಅವರ ನೆನಪಿನಲ್ಲಿ ಪೂಜೆ ಸಲ್ಲಿಸುತ್ತ, ಜಾತ್ರೆ ಮಹೋತ್ಸವಗಳನ್ನು ಆಚರಿಸುತ್ತ ಬರಲಾಗುತ್ತಿದೆ’ ಎಂದು ದೇವಾಲಯದ ಅರ್ಚಕ ಮನೆತನದ ವಿನಾಯಕ ನಾಯ್ಕ ಹೇಳುತ್ತಾರೆ.

‘ದೇವರಿಗೆ ನಿತ್ಯ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ಜಾತ್ರೆ ವೇಳೆ ಹರಕೆ ಅರ್ಪಿಸುವ ಭಕ್ತರು ಮದ್ಯ, ಸಿಗರೇಟ್ ತಂದು ನೀಡುತ್ತಾರೆ. ಮದ್ಯವನ್ನು ದೇವಸ್ಥಾನದ ಪಕ್ಕದಲ್ಲಿರುವ ನಿರ್ದಿಷ್ಟ ಜಾಗದಲ್ಲಿ ಸುರಿಯಲಾಗುತ್ತದೆ. ವಿಶೇಷವೆಂದರೆ ಜಾತ್ರೆಯ ದಿನ ನೂರಾರು ಲೀಟರ್ ಮದ್ಯ ಸುರಿದರೂ ವಾಸನೆ ಬರುವುದಿಲ್ಲ. ಉಳಿದ ಸಂದರ್ಭಗಳಲ್ಲಿ ಭಾನುವಾರ ಮತ್ತು ಬುಧವಾರ ಮಾತ್ರ ಹರಕೆ ವಸ್ತುಗಳ ಅರ್ಪಿಸಲು ಅವಕಾಶವಿರುತ್ತದೆ’ ಎನ್ನುತ್ತಾರೆ ಅವರು.

ಖಾಪ್ರಿ ದೇವರು
ಖಾಪ್ರಿ ದೇವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT