ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಸಗೋಡ: ಕಟ್ಟಡ ತೆರವಿಗೆ ವಿರೋಧ

ಶಿಕ್ಷಣ ಇಲಾಖೆಗೆ ನೊಟೀಸ್ ನೀಡಿದ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್
Published 27 ಜೂನ್ 2024, 14:30 IST
Last Updated 27 ಜೂನ್ 2024, 14:30 IST
ಅಕ್ಷರ ಗಾತ್ರ

ಯಲ್ಲಾಪುರ: ತಾಲ್ಲೂಕಿನ ಬಿಸಗೋಡದಲ್ಲಿರುವ ತನ್ನ ಅಧೀನದ ಎಲ್ಲಾ ಕಟ್ಟಡಗಳನ್ನು ಜುಲೈ 15ರ ಒಳಗೆ ತೆರವು ಮಾಡುವಂತೆ ‘ಕರ್ನಾಟಕ ಸ್ಟೇಟ್‌ ಮಿನರಲ್ಸ್‌ ಕಾರ್ಪೊರೇಶನ್‌’ ಜೂನ್ 26ರಂದು ಶಿಕ್ಷಣ ಇಲಾಖೆಗೆ ನೋಟಿಸ್ ನೀಡಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಕೆಲ ದಶಕಗಳ ಹಿಂದೆ ಬಿಸಗೋಡಿನಲ್ಲಿ ಮ್ಯಾಂಗನೀಸ್ ಗಣಿಗಾರಿಕೆ ನಡೆಯುತ್ತಿತ್ತು. ಆ ಸಮಯದಲ್ಲಿ ಅದು ತನ್ನ ಅನುಕೂಲಕ್ಕಾಗಿ ಅನೇಕ ಕಟ್ಟಡ ಕಟ್ಟಿಕೊಂಡಿತ್ತು. ನಂತರ 1996 ರಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತು. ಆ ವೇಳೆ ಅಲ್ಲಿದ್ದ ಎಲ್ಲಾ ಕಟ್ಟಡಗಳನ್ನು ಶೈಕ್ಷಣಿಕ ಉದ್ದೇಶಗಳಿಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಶನ್‌ನವರು ಶಿಕ್ಷಣ ಇಲಾಖೆಗೆ ವಹಿಸಿದ್ದರು.

ನಂತರ ಅಲ್ಲಿದ್ದ ಕಟ್ಟಡಗಳನ್ನು ನವೀಕರಿಸಿ ಶಿಕ್ಷಕರ ವಸತಿ ನಿಲಯ, ಪ್ರೌಢಶಾಲೆ, ಸಂಸ್ಕೃತ ಪಾಠಶಾಲೆ, ಅಂಚೆ ಕಚೇರಿ, ಕೆಎಂಎಫ್ ಹಾಲಿನ ಡೈರಿ, ಪಡಿತರ ವಿತರಣಾ ಕೇಂದ್ರದ ಉಪಯೋಗಕ್ಕೆ ಬಳಸಲಾಗುತ್ತಿತ್ತು. ಗ್ರಾಮಸ್ಥರ ಬೇಡಿಕೆಯಂತೆ ವೀರಾಂಜನೇಯ ದೇವಸ್ಥಾನವನ್ನೂ ಅವರು ನಿರ್ಮಿಸಿದ್ದರು. ಸದ್ಯ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಮುಂದಾಗಿದೆ.

‘ಬಿಸಗೋಡು ಪ್ರೌಢಶಾಲೆಯಲ್ಲಿ ಪ್ರಸ್ತುತ 110 ವಿದ್ಯಾರ್ಥಿಗಳಿದ್ದಾರೆ. ಅಧ್ಯಾಪಕರ ಕೊರತೆಯಿಂದ ಸಂಸ್ಕೃತ ಪಾಠಶಾಲೆ ಈಗ ಇಲ್ಲದಿದ್ದರೂ ಪ್ರತಿ ವರ್ಷ ಅಲ್ಲಿ ವೇದ ಶಿಬಿರಗಳನ್ನು ನಡೆಸಲಾಗುತ್ತದೆ. 65-70ರಷ್ಟು ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಊರಿನ ಎಲ್ಲಾ ಸಭೆ-ಸಮಾರಂಭಗಳು ಸಂಸ್ಕೃತ ಪಾಠಶಾಲೆ ಭವನದಲ್ಲಿಯೇ ನಡೆಯುತ್ತದೆ. ಇಲ್ಲಿನ ಎಲ್ಲಾ ಕಟ್ಟಡ ತೆರವು ಮಾಡಿದಲ್ಲಿ 110 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಉಳಿದ ಎಲ್ಲಾ ಚಟುವಟಿಕೆಗಳ ಮೇಲೆಯೂ ದುಷ್ಪರಿಣಾಮ ಬೀಳಲಿದೆ’ ಎನ್ನುತ್ತಾರೆ ಗ್ರಾಮದ ಪ್ರಮುಖರಾದ ಆರ್.‌ಜಿ.ಭಟ್‌.

‘ಒತ್ತಾಯಪೂರ್ವಕವಾಗಿ ಕಟ್ಟಡ ತೆರವುಗೊಳಿಸಲು ಮುಂದಾದರೆ ಹೋರಾಟ ಕೈಗೊಳ್ಳುವುದು ಅನಿವಾರ್ಯ’ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT