ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಅಗ್ನಿಶಾಮಕಕ್ಕೆ ಬೇಕಿದೆ ‘ಜಲ ವಾಹನ’ದ ಬಲ

ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡ ಸಂಭವಿಸಿದರೆ ಸಿಬ್ಬಂದಿ ಹರಸಾಹಸ
Published 9 ಮೇ 2024, 6:34 IST
Last Updated 9 ಮೇ 2024, 6:34 IST
ಅಕ್ಷರ ಗಾತ್ರ

ಶಿರಸಿ: ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಕಡೆ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಿಭಾಯಿಸಲು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ನೀರು ಹಾಗೂ ವಾಹನಗಳ ಕೊರತೆ ಇದಕ್ಕೆ ಪ್ರಮುಖ ಕಾರಣವಾಗಿದೆ. 

ಇಲ್ಲಿನ ಅಗ್ನಿ ಶಾಮಕ ಠಾಣೆಯು ಪ್ರತಿ ಬಾರಿಯಂತೆ ಈ ಬೇಸಿಗೆಯಲ್ಲೂ ಕಾಡುತ್ತಿರುವ ಜಲ ಸಂಕಷ್ಟದ ಮಧ್ಯೆ ಜಲವಾಹನದ ಕೊರತೆ ಎದುರಿಸುತ್ತಿದೆ. ಒಂದೇ ವಾಹನದಲ್ಲಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗೆ ಎದುರಾಗಿದೆ. ಶಿರಸಿ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿ ಶಮನಕ್ಕೆ ಬಳಸುವ 9 ಸಾವಿರ ಲೀಟರ್ ಸಾಮರ್ಥ್ಯದ ಒಂದು ಜಲ ಲಾರಿ ಮತ್ತು ತುರ್ತು ಸ್ಪಂದನೆಗಾಗಿ 500 ಲೀ. ಜಲ ಸಾಮರ್ಥ್ಯದ ಬುಲೆಟ್ ಆ್ಯಸ್ಟಿಂಗ್ವಿಶರ್ ಇದೆ. ಇಲ್ಲಿ ಪ್ರಸ್ತುತ 10ಕ್ಕೂ ಹೆಚ್ಚಿನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವೊಮ್ಮೆ ನೀರು ಕೊರತೆಯಾದ ವೇಳೆ ಸಿಬ್ಬಂದಿ ಮರಗಳ ಹಸಿ ಸೊಪ್ಪಿನ ತುಂಡು ಬಳಸಿ ಬೆಂಕಿ ಆರಿಸುವ ಪ್ರಸಂಗವು ನಡೆಯುತ್ತಿದೆ. 

50ಕಿ.ಮೀ.ಗೆ ಒಂದೇ ವಾಹನ:

ಜಡ್ಡಿಗದ್ದೆ, ರಾಗಿಹೊಸಳ್ಳಿ, ಬನವಾಸಿ, ದಾಸನಕೊಪ್ಪ, ಸೋಂದಾ ಸೇರಿ ಸುಮಾರು 50-60 ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಬೇಕಾದ ಶಿರಸಿ ಠಾಣೆ, ಈಗ ಕೇವಲ ಒಂದೇ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಪ್ರತಿದಿನ 5-6 ಕರೆಗಳನ್ನು ಸ್ವೀಕರಿಸುವ ಸಿಬ್ಬಂದಿ ಒಂದು ವಾಹನವನ್ನು ಹಿಡಿದುಕೊಂಡು ಎಲ್ಲಿಗೆ ಹೋಗಬೇಕೆಂಬ ಗೊಂದಲ ಹಾಗೂ ಸಂಕಷ್ಟದಲ್ಲಿದ್ದಾರೆ. ಇರುವ ಒಂದು ಜಲ ವಾಹನ 20-25 ಕಿ.ಮೀ. ದೂರದ ಬನವಾಸಿಯಲ್ಲಿ ಗದ್ದೆಗೆ ಬಿದ್ದ ಬೆಂಕಿಯನ್ನು ಶಮನ ಮಾಡಲು ಹೋದರೆ, ಇತ್ತ ವಾನಳ್ಳಿಯಲ್ಲಿ ಗಂಭೀರ ದುರ್ಘಟನೆೆ ಸಂಭವಿಸಿದರೂ ಬೆಂಕಿ ನಂದಿಸಲು ವಾಹನ ಇಲ್ಲದ ಪರಿಸ್ಥಿತಿ ಠಾಣೆಯ ಸಿಬ್ಬಂದಿಯದ್ದಾಗಿದೆ.

‘ಜನವರಿ ತಿಂಗಳಿನಿಂದ ಈವರೆಗೆ ಬೆಂಕಿ ಅವಘಡಕ್ಕೆ ಸಂಬಂಧಿಸಿ ಠಾಣೆಗೆ 50ಕ್ಕೂ ಹೆಚ್ಚು ಕರೆಗಳು ಬಂದಿವೆ. ಬೇಸಿಗೆಯಲ್ಲಿ ಬರುವ ಬಹುತೇಕ ಕರೆಗಳು ಗದ್ದೆ, ಅರಣ್ಯ ಹಾಗೂ ಗುಡ್ಡಗಳಿಗೆ ಬೆಂಕಿ ಬಿದ್ದಿರುವ ಬಗ್ಗೆ ಇರುತ್ತವೆ. ಅಲ್ಲದೆ, ದೂರದ ಊರುಗಳ ಸಾರ್ವಜನಿಕರಿಂದ ಬರುವ ಕೆಲವೊಂದು ಹುಸಿ ಕರೆಗಳು ಕೂಡ ಕಿರಿಕಿರಿ ಉಂಟು ಮಾಡುತ್ತವೆ’ ಎನ್ನುತ್ತಾರೆ ಠಾಣೆಯ ಸಿಬ್ಬಂದಿ.

ಅಗ್ನಿ ಶಮನಕ್ಕೆ ನೀರೆ ಸಿಗಲ್ಲ:

ಬೇಸಿಗೆ ಬಂತೆಂದರೆ ಅಗ್ನಿ ಶಾಮಕ ಠಾಣೆಯವರು ಪ್ರತಿ ವರ್ಷವೂ ಜಲ ಸಂಕಷ್ಟ ಎದುರಿಸುತ್ತಿರುತ್ತಾರೆ. ಈ ಬಾರಿ ನೀರಿಗೆ ಬರ ಬಂದಿರುವುದರಿಂದ ಠಾಣೆಯವರು ತಮ್ಮ ಜಲ ವಾಹನಗಳಿಗೆ ನೀರು ತುಂಬಿಸಲು ಪ್ರತಿ ಬಾರಿಯೂ  ದೂರ ತೆರಳಬೇಕಾಗಿದೆ.

‘ಠಾಣೆಯ ಆವರಣದಲ್ಲಿ ಸುಮಾರು ಆರು ವರ್ಷಗಳ ಹಿಂದೆ ಶಾಸಕರ ನಿಧಿಯಿಂದ ಕೊಳವೆ ಬಾವಿಯನ್ನು ಕೊರೆಯಲಾಗಿತ್ತು. ಆದರೆ, ಈ ಕೊಳವೆ ಬಾವಿಯಲ್ಲಿ ಬೇಸಿಗೆಯಲ್ಲಿ ನೀರು ಸಿಗುವುದಿಲ್ಲ. ಇರುವ ಅಲ್ಪ ಪ್ರಮಾಣದ ನೀರು ಇಲ್ಲಿನ ಸಾವಿರಾರು ಲೀ. ಸಾಮರ್ಥ್ಯದ ವಾಹನಗಳಿಗೆ ಸಾಕಾಗುತ್ತಿಲ್ಲ. ಇದರ ಪರಿಣಾಮ ಪ್ರತಿ ಬಾರಿಯೂ ಠಾಣೆಯ ನಾಲ್ಕು ವಾಹನಗಳಿಗೆ ಸಾವಿರಾರು ಲೀ. ನೀರನ್ನು ದೂರದಲ್ಲಿ ಗುರುತಿಸಿದ ಜಲಮೂಲದಿಂದ ತುಂಬಿಸಿಕೊಂಡು ಬರಬೇಕಾಗಿದೆ. ಕೆಲವು ಸಂದರ್ಭ ಘಟನಾ ಸ್ಥಳದಲ್ಲಿ ನೀರಿನ ಮೂಲಗಳಿದ್ದರೆ ಅಲ್ಲಿಂದಲೇ ತುಂಬಿಸಲಾಗುತ್ತದೆ. ಈಗ ಎಲ್ಲ ಕಡೆ ನೀರಿಗೆ ಸಮಸ್ಯೆ ಇರುವುದರಿಂದ ನಮಗೆ ನೀರು ಸಿಗುವುದು ಕಷ್ಟ’ ಎಂದು ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ವಾಹನ ಕೊರತೆ ಇರುವ ಕುರಿತು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ವಾಹನ ನೀಡಿದರೆ ಅನುಕೂಲ ಆಗುತ್ತದೆ
ಕಾರ್ತಿಕ್ ಆರ್ ಠಾಣಾಧಿಕಾರಿ
ಅಗ್ನಿಶಾಮಕ ವಾಹನಕ್ಕೆ ನಗರಸಭೆಯಿಂದ ನೀರು ಪೂರೈಸಲು ಸೂಚಿಸಲಾಗಿದೆ. ಹೆಚ್ಚುವರಿ ವಾಹನ ನೀಡುವಂತೆ ಇಲಾಖೆ ಸಚಿವರ ಬಳಿ ಮನವಿ ಮಾಡಲಾಗಿದೆ
-ಭೀಮಣ್ಣ ನಾಯ್ಕ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT