ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಸಹಕರಿಸಲಿ: ವಿಶ್ವೇಶ್ವರ ಹೆಗಡೆ ಕಾಗೇರಿ

Published 8 ಜುಲೈ 2024, 14:24 IST
Last Updated 8 ಜುಲೈ 2024, 14:24 IST
ಅಕ್ಷರ ಗಾತ್ರ

ಕುಮಟಾ: ‘ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಎಂದಿಗೂ ಹಿಂದುಳಿಯದಂತೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಪಕ್ಷದ ಕಾರ್ಯಕರ್ತರು ಸೋಮವಾರ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿಲ್ಲಾಡಳಿತ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ತ್ವರಿತಗತಿಯಲ್ಲಿ ಕೆಲಸ ಮಾಡಬೇಕು. ಕುಮಟಾ-ಶಿರಸಿ ಹೆದ್ದಾರಿ ನಿರ್ಮಾಣ ನನೆಗುದಿಗೆ ಬೀಳಲು ಕಾರಣವಾದ ಭೂ ಸ್ವಾಧೀನ ಪ್ರಕ್ರಿಯೆ ದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಸ್ಥಳೀಯ ಉಪವಿಭಾಗಾಧಿಕಾರಿಗೆ ಸೂಚಿಸಿದ್ದೇನೆ’ ಎಂದರು.

‘ರಾಜ್ಯ ಸರ್ಕಾರದ ಮುಡಾ, ವಾಲ್ಮೀಕಿ ನಿಮಗದ ಆರ್ಥಿಕ ಹಗರಣಗಳಿಂದ ಜನತೆ ಬೇಸತ್ತು ಹೋಗಿದ್ದಾರೆ. ಬಿಜೆಪಿ ಅಂಥ ಎಲ್ಲ ಹಗರಣಗಳ ವಿರುದ್ಧ ಹೋರಾಟ ಮಾಡಲಿದೆ. ಜೆಡಿ(ಎಸ್)-ಬಿಜೆಪಿ ಮೈತ್ರಿಗೆ 1985 ರಷ್ಟು ಹಿಂದಿನ ಇತಿಹಾಸವಿದೆ. ಇದೇ ಮೈತ್ರಿ ಮುಂದುವರಿದರೆ ಮುಂದಿನ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನ ಸಭೆ ಚುನಾವಣೆಗಳನ್ನು ಗೆಲ್ಲಬಹುದಾಗಿದೆ’ ಎಂದರು.

‘ಕುಮಟಾ ಕ್ಷೇತ್ರದ 151 ಬೂತ್ ಗಳಲ್ಲಿ 141ರಲ್ಲಿ ಬಿ.ಜೆ.ಪಿಗೆ ಹೆಚ್ಚು ಮತ ಬಂದಿರುವುದು ಎರಡೂ ಪಕ್ಷಗಳ ಕಾರ್ಯಕರ್ತರ ಅಸಾಮಾನ್ಯ ಸಾಧನೆ. ಜಿಲ್ಲೆಯಲ್ಲಿ ಎಲ್ಲೇ ಮಳೆ ಮುಂತಾದವುಗಳಿಂದ ಉಂಟಾಗುವ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬಿ.ಜೆ.ಪಿ ಕಾರ್ಯಕರ್ತರು ಜನರ ನೆರವಿಗೆ ಮುನ್ನುಗ್ಗಬೇಕು’ ಎಂದರು.

ಶಾಸಕ ದಿನಕರ ಶೆಟ್ಟಿ, ‘ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿಯಾಗಿ ಜಿಲ್ಲೆಗೆ ಅಗತ್ಯವಿರುವ ಅಭಿವೃದ್ಧಿ ಯೋಜನೆಗಳ ಕೊಡುಗೆ ನೀಡಬೇಕು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಚಿವ ನಿತೀನ್ ಗಡ್ಕರಿಯವರು ರಾಜ್ಯಕ್ಕೆ ಎಣೆಯಿಲ್ಲದಷ್ಟು ಅಭಿವೃದ್ಧಿ ನಿಧಿ ನೀಡುವ ಭರವಸೆ ನೀಡಿದ್ದಾರೆ. ಸಂಸದರು ಅದಕ್ಕೆ ಸೇತುವೆಯಾಗಿ ಅವಕಾಶ ಬಳಸಿಕೊಳ್ಳಬೇಕು. ಕುಮಟಾ ರೈಲು ನಿಲ್ದಾಣದಲ್ಲಿ ಎರಡನೇ ಪ್ಲಾಟ್ ಫಾರಂ ನಿರ್ಮಾಣ, ಡೆಮೋ ರೈಲನ್ನು ಗೋವಾದಿಂದ ಜಿಲ್ಲೆಯ ಪೂರ್ತಿ ಭಾಗಕ್ಕೆ ವಿಸ್ತರಿಸುವ ಬಗ್ಗೆ ಕ್ರಮ ವಹಿಸಬೇಕು’ ಎಂದರು.

ಜೆಡಿ(ಎಸ್) ಮುಖಂಡ ಸೂರಜ್ ನಾಯ್, ಬಿ.ಜೆ.ಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮುಖಂಡರಾದ ಗೋವಿಂದ ನಾಯ್ಕ, ಆರತಿ ಗೌಡ, ಆರ್.ಎಸ್.ಎಸ್. ಹಿರಿಯ ಪ್ರಚಾರಕ ಸು. ರಾಮಣ್ಣ ಮಾತನಾಡಿದರು. ತಾಲ್ಲೂಕು ಘಟಕ ಅಧ್ಯಕ್ಷ ಜಿ.ಐ. ಹೆಗಡೆ ಸ್ವಾಗತಿಸಿದರು. ಚಿದಾನಂದ ಭಂಡಾರಿ ನಿರೂಪಿಸಿದರು.

ಪಕ್ಷದ ಡಾ.ಜಿ.ಜಿ ಹೆಗಡೆ, ಹೇಮಂತ್ ಗಾಂವ್ಕರ್, ಗಜಾನನ ಗುನಗಾ, ಅನುರಾಧಾ ಭಟ್ಟ, ಮಂಜುಳಾ ಮುಕ್ರಿ, ಭಾರತಿ ದೇವತೆ, ಗಜಾನನ ಪೈ, ಸುಧೀರ ಪಂಡಿತ್, ಡಾ. ಸುರೇಶ ಹೆಗಡೆ, ಗಣೇಶ ಪಂಡಿತ, ಗುರುಪ್ರಸಾದ ಹೆಗಡೆ, ವಿಶ್ವನಾಥ ನಾಯ್ಕ, ಜೆಡಿ(ಎಸ್) ಅಧ್ಯಕ್ಷ ಸಿ.ಜಿ. ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT