ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ:ಅನ್ನದಾತನಿಗೆ ಗೋಳು

ಕೃಷಿ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲು ಸಮಸ್ಯೆ
Last Updated 13 ಮಾರ್ಚ್ 2023, 15:50 IST
ಅಕ್ಷರ ಗಾತ್ರ

ಮುಂಡಗೋಡ: ದಿನೇ ದಿನೇ ಬಿಸಿಲ ಝಳ ಹೆಚ್ಚಾಗುತ್ತಿದೆ. ಜತೆಗೆ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆರಂಭವಾಗಿದೆ. ಬೇಸಿಗೆ ಬೆಳೆಗೆ ವಿದ್ಯುತ್ ಕೈ ಕೊಡುತ್ತಿರುವುದರಿಂದ ರೈತರ ಆತಂಕ ಹೆಚ್ಚಾಗುತ್ತಿದೆ.

ಬೇಸಿಗೆ ಬೆಳೆ ಉಳಿಸಿಕೊಳ್ಳಲು ರೈತರು ಕೆರೆ, ಕಟ್ಟೆಗಳ ನೀರಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ ಎಂದು ಕೆರೆಕಟ್ಟೆಯ ನೀರನ್ನೂ ಹರಿಸಲು ಸಂಬಂಧಿಸಿದ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ರೈತರು ದೂರುತ್ತಿದ್ದಾರೆ.

‘ಕಳೆದ ವರ್ಷದ ಕೊನೆಯ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ, ಬಹುತೇಕ ಕೊಳವೆ ಬಾವಿಗಳಿಂದ ನೀರು ಬರುತ್ತಿಲ್ಲ. ತಕ್ಕ ಮಟ್ಟಿಗೆ ಬರುವ ನೀರನ್ನಾದರೂ ಹೊಲಕ್ಕೆ ಹರಿಸೋಣ ಎಂದರೆ ಹಗಲಿನಲ್ಲಿ ವಿದ್ಯುತ್ ಕೈ ಕೊಡುತ್ತಿದೆ. ಕಾಳು ಗಟ್ಟಿಯಾಗುವ ಹಂತದಲ್ಲಿರುವಾಗಲೇ ವಿದ್ಯುತ್ ಹಾಗೂ ಕೊಳವೆ ಬಾವಿ ಒಟ್ಟಿಗೆ ಕೈ ಕೊಟ್ಟಿವೆ. ಕೆರೆಯ ನೀರನ್ನು ಒಂದೆರೆಡು ದಿನ ಹರಿಸಲೂ ಗ್ರಾಮ ಪಂಚಾಯಿತಿಯವರು ಒಪ್ಪುತ್ತಿಲ್ಲ’ ಎನ್ನುತ್ತಾರೆ ರೈತ ಶಂಕರ ಕಲಕೇರಿ.

‘ರಾತ್ರಿ ಸಮಯದಲ್ಲಿ ವಿದ್ಯುತ್ ಥ್ರಿ ಫೇಸ್ ಇರುತ್ತದೆ. ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿ ನೀರು ಹರಿಸಿಯಾದರೂ ಬೆಳೆ ಉಳಿಸಿಕೊಳ್ಳಬೇಕಾಗಿದೆ’ ಎಂದು ರೈತ ಭಾಗು ಹೇಳಿದರು.

‘ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕುಡಿಯುವ ನೀರಿಗೂ ತೊಂದರೆ ಆಗುತ್ತಿದೆ. ಕೃಷಿ ವಟುವಟಿಕೆಗೂ ಹಿನ್ನಡೆಯಾಗಿದೆ. ಕಳೆದ ಹದಿನೈದು ದಿನಗಳಿಂದ ವಿದ್ಯುತ್ ಸಮಸ್ಯೆ ತಲೆದೋರಿದೆ’ ಎಂದು ಬೆಡಸಗಾಂವ್ ಗ್ರಾಮಸ್ಥ ದೇವೇಂದ್ರ ನಾಯ್ಕ ದೂರಿದರು.

‘ಕೊಳವೆ ಬಾವಿ, ಪಂಪ್ ಸೆಟ್ ಗಳಿಗೆ ಅನಧಿಕೃತವಾಗಿ ವಿದ್ಯುತ್ ಬಳಸುತ್ತಿರುವುದರಿಂದ 2-3 ಮೆಗಾ ವ್ಯಾಟ್ ಸೋರಿಕೆಯಾಗುತ್ತಿದೆ. ಅನಧಿಕೃತ ವಿದ್ಯುತ್ ಬಳಸುವ ರೈತರಿಗೆ ಎಚ್ಚರಿಕೆಯನ್ನೂ ಕೊಡಲಾಗಿದೆ. ಕೆಲವು ರೈತರ ವೈರ್ ಗಳನ್ನು ಜಫ್ತಿ ಮಾಡಲಾಗಿದೆ. ಈ ವರ್ಷ ಕೊಳವೆ ಬಾವಿಗಳ ಸಂಖ್ಯೆಯೂ ಹೆಚ್ಚಿದೆ. ಅದರ ಜೊತೆಗೆ ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯುವರ ಸಂಖ್ಯೆಯೂ ಹೆಚ್ಚಾಗಿದೆ’ ಎಂದು ಹೆಸ್ಕಾಂ ಎಇಇ ವಿನಾಯಕ ಪೇಟ್ಕರ್ ಹೇಳಿದರು.

ಅನಧಿಕೃತ ವಿದ್ಯುತ್ ಬಳಕೆಯಿಂದ ಸಮಸ್ಯೆ

‘ಅತಿಕ್ರಮಣ ಪ್ರದೇಶ ಸೇರಿದಂತೆ ಹಲವೆಡೆ ಕೊಳವೆ ಬಾವಿಗಳನ್ನು ಕೊರೆಯಿಸಿ, ಇಲಾಖೆಯ ಅನುಮತಿ ಪಡೆಯದೆ, ಸನಿಹದ ವಿದ್ಯುತ್ ಮಾರ್ಗದಿಂದ ಸಂಪರ್ಕ ಪಡೆಯುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯಾಗುತ್ತಿದೆ. ನಿಯಂತ್ರಣ ವ್ಯವಸ್ಥೆ ಮೇಲೂ ಅಧಿಕ ಒತ್ತಡ ಉಂಟಾಗುತ್ತಿದೆ. ವಿದ್ಯುತ್ ಸರಬರಾಜು ಪ್ರಮಾಣವನ್ನು ನಿಯಂತ್ರಿಸಲು ಗ್ರಾಮೀಣ ಫೀಡರ್ ಗಳಲ್ಲಿ ಮೂರು ಹಂತದಲ್ಲಿ ಸಿಂಗಲ್ ಹಾಗೂ ಥ್ರಿ ಫೇಸ್ ರೂಪದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ’ ಎಂದು ಹೆಸ್ಕಾಂ ಎಇಇ ವಿನಾಯಕ ಪೇಟ್ಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT