ಶನಿವಾರ, ಜನವರಿ 28, 2023
24 °C
ವೈಭವದೊಂದಿಗೆ ನಡೆದ ನರಸಿಂಹ ದೇವರ ಜಾತ್ರಾ ಉತ್ಸವ

ಕೂರ್ಮಗಡ ಜಾತ್ರೆಗೆ ಭಕ್ತ ಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಇಲ್ಲಿನ ಅರಬ್ಬಿ ಸಮುದ್ರದ ಕೂರ್ಮಗಡ ನಡುಗಡ್ಡೆಯಲ್ಲಿ ಶುಕ್ರವಾರ ನರಸಿಂಹ ದೇವರ ವಾರ್ಷಿಕ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ನೂರಾರು ಸಂಖ್ಯೆಯ ಭಕ್ತರು ದೋಣಿಗಳ ಮೂಲಕ ದ್ವೀಪಕ್ಕೆ ತೆರಳಿ ಉತ್ಸವದಲ್ಲಿ ಪಾಲ್ಗೊಂಡರು.

ಪ್ರತಿ ವರ್ಷ ಜನವರಿ ಮೊದಲ ಅಥವಾ ಎರಡನೇ ವಾರ ಕೂರ್ಮಗಡ ದ್ವೀಪದ ಜಾತ್ರೆ ನಡೆಯುತ್ತದೆ. ಕಡವಾಡ ಗ್ರಾಮದ ನರಸಿಂಹ ದೇವರನ್ನು ದ್ವೀಪದಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತದೆ. ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜಾತ್ರೆ ಸರಳವಾಗಿ ನೆರವೇರಿತ್ತು. ಈ ಬಾರಿ ದೂರದ ಊರುಗಳಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಮುಂಜಾನೆ ಕಡವಾಡದಿಂದ ಮೆರವಣಿಗೆ ಮೂಲಕ ದೇವರನ್ನು ಕೋಡಿಬಾಗಕ್ಕೆ ಕರೆತರಲಾಯಿತು. ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಅಲಂಕೃತ ದೋಣಿಯಲ್ಲಿ ದ್ವೀಪಕ್ಕೆ ಕರೆದೊಯ್ದು ಪ್ರತಿಷ್ಠಾಪಿಸಲಾಯಿತು. ಸಪ್ರೆ ಕುಟುಂಬಸ್ಥರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ಸಿಕ್ಕಿತು. ಭಕ್ತರು ಬಾಳೆಗೊನೆ, ತುಲಾಭಾರ, ಬಾವುಟ ಹರಕೆ ಸಲ್ಲಿಸಿದರು. ವಿಶೇಷ ಪೂಜೆ ನೀಡಿದರು.

ಜಾತ್ರಾ ಮಹೋತ್ಸವಕ್ಕೆ ತೆರಳುವ ಭಕ್ತರಿಗೆ ಬೈತಖೋಲದ ಮೀನುಗಾರಿಕಾ ಬಂದರಿನಿಂದ ದೋಣಿಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಜನಜಂಗುಳಿ ಹೆಚ್ಚಿದ್ದ ಕಾರಣ ನೂರಾರು ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದರು. ನಿಗದಿಗಿಂತ ಹೆಚ್ಚು ಜನರನ್ನು ಬೋಟುಗಳಲ್ಲಿ ಕರೆದೊಯ್ಯದಂತೆ ಎಚ್ಚರ ವಹಿಸಿದರು.

‘ದೋಣಿ ಮೂಲಕ ದ್ವೀಪಕ್ಕೆ ಬರಲು ವರ್ಷಕ್ಕೆ ಒಮ್ಮೆ ಕೂರ್ಮಗಡ ಜಾತ್ರೆ ಅವಕಾಶ ಒದಗಿಸುತ್ತದೆ. ದೇವರಿಗೆ ಪೂಜಿಸಿ ನಡುಗಡ್ಡೆಯಲ್ಲಿ ಕುಟುಂಬದವರ ಜತೆ ಉಪಹಾರ ಸೇವಿಸುವದು ರೋಮಾಂಚನಕಾರಿ ಅನುಭವ ನೀಡುತ್ತದೆ’ ಎಂದು ಕೋಡಿಬಾಗದ ಸರಿತಾ ಕಲ್ಗುಟ್ಕರ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.