ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗನಕಾಯಿಲೆ ತಡೆಗೆ ‘ತೈಲ’ವೇ ಗತಿ!

ಎರಡು ವರ್ಷಗಳಿಂದ ಪೂರೈಕೆ ಆಗದ ರೋಗಾಣು ತಡೆ ಲಸಿಕೆ
Published 23 ಡಿಸೆಂಬರ್ 2023, 4:45 IST
Last Updated 23 ಡಿಸೆಂಬರ್ 2023, 4:45 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಚಳಿಗಾಲ ಮುಗಿದ ಬಳಿಕವೇ ಹಾವಳಿ ಎಬ್ಬಿಸುತ್ತಿದ್ದ ಮಂಗನ ಕಾಯಿಲೆ ತಡೆಯಲು ಈ ಹಿಂದೆ ನೀಡುತ್ತಿದ್ದ ಲಸಿಕೆ ಪೂರೈಕೆ ಸ್ಥಗಿತಗೊಂಡಿದೆ. ಸದ್ಯ ರೋಗ ಬರದಂತೆ ತಡೆಯಲು ಜನರಿಗೆ ಡಿ.ಎಂ.ಪಿ ತೈಲವೇ ಅನಿವಾರ್ಯ ಆಗಿದೆ.

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮಂಗನ ಕಾಯಿಲೆಗೆ ತುತ್ತಾದವರ ಸಂಖ್ಯೆ 200ಕ್ಕೂ ಹೆಚ್ಚಿದೆ. ಈ ಪೈಕಿ 8 ಮಂದಿ ಸಾವನ್ನಪ್ಪಿದ್ದಾರೆ. ಸಿದ್ದಾಪುರ, ಹೊನ್ನಾವರ, ಶಿರಸಿ, ಭಟ್ಕಳ, ಅಂಕೋಲಾ, ಕುಮಟಾ ಮತ್ತು ಜೊಯಿಡಾ ತಾಲ್ಲೂಕಿನಲ್ಲಿ ಮಂಗನ ಕಾಯಿಲೆ ಪತ್ತೆಯಾಗಿತ್ತು. ಹೀಗಾಗಿ ಅಲ್ಲಿ ರೋಗ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ನೀಡುವ ಕೆಲಸ ನಡೆದಿತ್ತು.

ಆದರೆ, ಎರಡು ವರ್ಷದಿಂದ ಲಸಿಕೆ ಪೂರೈಕೆ ಮಾಡಿಲ್ಲ. ಆರೋಗ್ಯ ಇಲಾಖೆಯು ಮಂಗನ ಕಾಯಿಲೆ (ಕೆ.ಎಫ್.ಡಿ) ನಿಯಂತ್ರಕ ಲಸಿಕೆಯ ತಯಾರಿಕೆ ಸ್ಥಗಿತಗೊಳಿಸಿದ್ದರಿಂದ ಪೂರೈಕೆಯೂ ನಿಂತಿದೆ. ಹೀಗಾಗಿ ರೋಗ ನಿಯಂತ್ರಿಸಲು ಸದ್ಯ ಮುನ್ನೆಚ್ಚರಿಕೆಯೊಂದೇ ಜನರಿಗೆ ಅನಿವಾರ್ಯವಾಗಿದೆ.

‘ಮಂಗನ ಕಾಯಿಲೆ ನಿಯಂತ್ರಿಸುವ ಲಸಿಕೆ ಪರಿಣಾಮಕಾರಿ ಅಲ್ಲ. ಅಲ್ಲದೆ ಅದರ ಶಕ್ತಿ ಕುಂದಿದೆ ಎಂಬ ಕಾರಣಕ್ಕೆ ಲಸಿಕೆ ಬಳಕೆ ಸ್ಥಗಿತಗೊಂಡಿರುವ ಮಾಹಿತಿ ಇದೆ. ಇದೇ ಕಾರಣಕ್ಕೆ ಲಸಿಕೆ ತಯಾರಿಕೆಗೆ ನೀಡಿದ್ದ ಅನುಮತಿಯನ್ನು ಕೇಂದ್ರೀಯ ಔಷಧದ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿ.ಡಿ.ಎಸ್.ಸಿ.ಒ) ಹಿಂಪಡೆದಿದ್ದರಿಂದ ಲಸಿಕೆ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ಪೂರೈಕೆಯೂ ಇಲ್ಲ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮಂಗನ ಕಾಯಿಲೆ ನಿಯಂತ್ರಣ ಕಳೆದ ವರ್ಷದಿಂದ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿತ್ತು. 2021 ರಲ್ಲಿ 79 ಸಾವಿರಕ್ಕೂ ಹೆಚ್ಚು ಡೋಸ್ ಮಂಗನ ಕಾಯಿಲೆ ಲಸಿಕೆ ವಿತರಣೆ ಮಾಡಲಾಗಿತ್ತು. ಸದ್ಯ ಲಸಿಕೆ ಇಲ್ಲದಿರುವುದರಿಂದ ಮುನ್ನೆಚ್ಚರಿಕೆ ಕ್ರಮ ಅನುಸರಿಸಲು ಸೂಚನೆ ಕೊಡಲಾಗುತ್ತಿದೆ’ ಎಂದು ಹೊನ್ನಾವರದ ಕೆ.ಎಫ್.ಡಿ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿ ಡಾ.ಸತೀಶ ಶೇಟ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮಲೆನಾಡು ಭಾಗದಲ್ಲಿ ಬೆಟ್ಟ, ಕಾಡಿನ ಪ್ರದೇಶಕ್ಕೆ ತೆರಳುವ ಮುನ್ನ ಮೈಗೆ ಮಂಗನಕಾಯಿಲೆ ಹರಡಬಹುದಾದ ಉಣ್ಣೆ ತಗುಲದಂತೆ ದೇಹಕ್ಕೆ ಲೇಪಿಸಿಕೊಳ್ಳಲು ಡಿ.ಎಂ.ಪಿ ತೈಲ ನೀಡಲಾಗುತ್ತಿದೆ. ಈ ತೈಲದ ಅಂಶಗಳು ಉಣ್ಣೆ ನಿರೋಧಕವಾಗಿದ್ದು ಉಣ್ಣೆ ದೇಹಕ್ಕೆ ಅಂಟಿಕೊಳ್ಳುವುದು, ಕಚ್ಚುವುದನ್ನು ತಡೆಯುತ್ತದೆ. ಇಲಾಖೆಯ ಬಳಿ ಅಗತ್ಯದಷ್ಟು ತೈಲ ದಾಸ್ತಾನು ಇದೆ. ಅದನ್ನು ವಿತರಿಸುವ ಜತೆಗೆ ಮಂಗನ ಕಾಯಿಲೆ ಹರಡದಂತೆ ವಹಿಸಬೇಕಾದ ಸುರಕ್ಷತೆ ಕ್ರಮಗಳ ಬಗ್ಗೆ ಎಚ್ಚರಿಸಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT