ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಬೇಡಿಕೆ ಹೆಚ್ಚಿಸಿಕೊಂಡ ನಾಟಿಕೋಳಿ, ದೇವರಿಗೆ ಹರಕೆ ಅರ್ಪಣೆ

ಬಂಡಿ ಹಬ್ಬದಲ್ಲಿ ದೇವರಿಗೆ ಕೋಳಿಯ ಹರಕೆ ಅರ್ಪಣೆ
ಮೋಹನ ದುರ್ಗೇಕರ್
Published 24 ಮೇ 2024, 5:15 IST
Last Updated 24 ಮೇ 2024, 5:15 IST
ಅಕ್ಷರ ಗಾತ್ರ

ಅಂಕೋಲಾ: ಕರಾವಳಿ ತಾಲ್ಲೂಕುಗಳಲ್ಲಿ ಪ್ರಸಿದ್ಧಿ ಪಡೆದ ಬಂಡಿಹಬ್ಬ ಆಚರಣೆ ತಾಲ್ಲೂಕಿನಲ್ಲಿ ಆರಂಭವಾಗಿದ್ದು, ಹಬ್ಬದ ಮಾರನೇ ದಿನ ಶಾಂತಾದುರ್ಗ ದೇವರಿಗೆ ಅರ್ಪಿಸುವ ನಾಟಿಕೋಳಿಗಳ ಬೆಲೆ ಗಗನ ಮುಖಿಯಾಗಿದೆ. 

ಮೇ ತಿಂಗಳಿನಲ್ಲಿ ನಡೆಯುವ ಬಂಡಿಹಬ್ಬವನ್ನು ಇಲ್ಲಿನ ಜನರು ಅದ್ದೂರಿಯಾಗಿ ಆಚರಿಸುತ್ತಾರೆ. ಮನೆಗಳಿಗೆ ದೂರದ ಊರುಗಳ ನೆಂಟರಿಷ್ಟರನ್ನು ಆಹ್ವಾನಿಸುತ್ತಾರೆ. ಈ ವೇಳೆ ಹಬ್ಬದ ವಿಶೇಷ ಅಡುಗೆಗೆ ನಾಟಿಕೋಳಿ ಬಳಸುವುದರಿಂದ ನಾಟಿಕೋಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇದು ಸ್ಥಳೀಯವಾಗಿ ನಾಟಿ ಕೋಳಿ ಮಾರಾಟಗಾರರಿಗೆ ಹಬ್ಬದ ವಾತಾವರಣ ಸೃಷ್ಟಿಸಿದೆ. 

ಸಾಮಾನ್ಯವಾಗಿ ಬಂಡಿಹಬ್ಬದ ವೇಳೆಯಲ್ಲಿ ಈ ಭಾಗದ ವಿವಿಧ ಹಳ್ಳಿಗಳ ರೈತರು ಮನೆಯಲ್ಲಿ ಸಾಕಿರುವ ನಾಟಿ ಕೋಳಿಗಳು ಪಟ್ಟಣದಲ್ಲಿ ಮಾರಾಟವಾಗುತ್ತವೆ. ಈ ಬಾರಿ ತೀವ್ರ ಬಿಸಿಲ ತಾಪದ ಕಾರಣಕ್ಕೆ ಕೋಳಿಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ ದೂರದ ಗದಗ, ಹುಬ್ಬಳ್ಳಿ, ಹಳಿಯಾಳ, ಕಲಘಟಗಿ ಮುಂತಾದ ಕಡೆಗಳಿಂದಲೂ ನಾಟಿಕೋಳಿಗಳನ್ನು ತರಲಾಗಿದೆ.  ತಮಿಳುನಾಡಿನಿಂದ ಬಂದ ಕೋಳಿ ಮಾರಾಟ ತಂಡ ಬೀಡುಬಿಟ್ಟಿದೆ. ಸಾಮಾನ್ಯ ದಿನಗಳಲ್ಲಿ ಪ್ರತಿ ಜೋಡಿ ನಾಟಿಕೋಳಿಗೆ ಸರಾಸರಿ ₹700–900 ದರ ಇದ್ದರೆ, ಈಗ ಅದು ₹1,500 ರಿಂದ ₹1,600ಕ್ಕೆ ತಲುಪಿದೆ. ಸುತ್ತಮುತ್ತಲಿನ ಹಳ್ಳಿಗಳಿಂದ ತರಲಾದ ಕೋಳಿಗಳ ಬೆಲೆಯೂ ಇದಕ್ಕೆ ಭಿನ್ನವಾಗಿಲ್ಲ. 

‘ಬಂಡಿಹಬ್ಬಕ್ಕೆ ನಾಟಿಕೋಳಿಯ ಅಡುಗೆಯೇ ವಿಶೇಷ ಖಾದ್ಯವಾಗಿರುವ ಕಾರಣ ಅವುಗಳ ದರ ಹೆಚ್ಚಿಸಲಾಗುತ್ತಿದೆ. ಹೇಗಿದ್ದರೂ ಬೇಡಿಕೆ ಇದೆ ಎಂಬುದನ್ನು ಅರಿತಿರುವ ವ್ಯಾಪಾರಿಗಳು ಈ ಸಮಯದಲ್ಲಿ ಲಾಭ ಹೆಚ್ಚಿಸಿಕೊಳ್ಳಲು ದರ ಹೆಚ್ಚಿಸಿದ್ದಾರೆ. ಅನಿವಾರ್ಯವಾಗಿ ಕೊಂಡುಕೊಳ್ಳಬೇಕಾಗಿದ್ದು ನಾಟಿಕೋಳಿ ದರ ಬಡವರ ಜೇಬಿಗೆ ಭಾರವೆನಿಸಿದೆ’ ಎಂಬುದು ಗ್ರಾಹಕರ ಮಾತಾಗಿದೆ.

‘ಬಂಡಿ ಹಬ್ಬದ ವೇಳೆ ನಾಟಿಕೋಳಿಗೆ ಹೆಚ್ಚು ಬೇಡಿಕೆ ಇರುವ ಕಾರಣ ನೂರಾರು ಕೋಳಿಗಳನ್ನು ತಂದು ಮಾರಾಟ ಮಾಡುತ್ತೇವೆ. ದರದಲ್ಲಿ ಏರಿಕೆಯಾಗಿದ್ದರೂ ಜನ ಖರೀದಿಗೆ ಹಿಂದೇಟು ಹಾಕುತ್ತಿಲ್ಲ. ನಾಟಿಕೋಳಿ ನಿರ್ವಹಣೆಗೆ ವೆಚ್ಚವೂ ಹೆಚ್ಚು ಬೇಕಾಗಿದ್ದು ದರವನ್ನು ಹೆಚ್ಚಳ ಮಾಡುವುದು ನಮಗೂ ಅನಿವಾರ್ಯ’ ಎನ್ನುತ್ತಾರೆ ಹಳಿಯಾಳದಿಂದ ಕೋಳಿ ವ್ಯಾಪಾರಕ್ಕೆ ಬಂದಿದ್ದ ಸಂತೋಷ ಗಜಕೋಶ. 

ಬಯಲುಸೀಮೆ ಪ್ರದೇಶಗಳಿಂದ ಈಚಿನ ವರ್ಷಗಳಲ್ಲಿ ಗುಣಮಟ್ಟವಿಲ್ಲದ ನಾಟಿಕೋಳಿ ಹೆಚ್ಚು ಮಾರಾಟಕ್ಕೆ ತರಲಾಗುತ್ತಿದೆ. ಇವುಗಳನ್ನು ಕಡಿಮೆ ದರಕ್ಕೆ ಮಾರುವುದರಿಂದ ಸ್ಥಳೀಯ ನಾಟಿಕೋಳಿಗಳ ಮಾರಾಟ ಕುಸಿದಿದ್ದು ನಷ್ಟ ಅನುಭವಿಸುತ್ತಿದ್ದೇವೆ. ಆದರೂ ಈ ಬಾರಿ ಸಾಕಷ್ಟು ಬೇಡಿಕೆಯಿದೆ.
–ಸುಶೀಲಾ ಗೌಡ, ಕೋಳಿ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT