ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವ ಉಳಿವಿಗೆ ಬಿಜೆಪಿ ಸೋಲಿಸುವುದು ಅನಿವಾರ್ಯ: ಮುಖ್ಯಮಂತ್ರಿ ಚಂದ್ರು

ಆಪ್ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು
Published 17 ಮಾರ್ಚ್ 2024, 6:37 IST
Last Updated 17 ಮಾರ್ಚ್ 2024, 6:37 IST
ಅಕ್ಷರ ಗಾತ್ರ

ಕಾರವಾರ: ಪ್ರಜಾಪ್ರಭುತ್ವದ ಉಳಿವಿಗೆ ಈ ಬಾರಿ ಬಿಜೆಪಿ ಸೋಲಿಸುವುದು ಅನಿವಾರ್ಯ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿಯ ಬದಲು ಕೋಮುವಾದಕ್ಕೆ ಆದ್ಯತೆ ನೀಡುತ್ತಿರುವ ಬಿಜೆಪಿ ಸರ್ವಾಧಿಕಾರಿಯಾಗಿದೆ. ಆ ಪಕ್ಷದ ಒಕ್ಕೂಟ ಸೋಲಿಸಲು ಆಪ್ 'ಇಂಡಿಯಾ' ಒಕ್ಕೂಟಕ್ಕೆ ಬೆಂಬಲಿಸುತ್ತಿದೆ ಎಂದರು.

ಧರ್ಮದ ಹೆಸರಿನಲ್ಲಿ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಚುನಾವಣಾ ಆಯೋಗದಿಂದ ಮುಖ್ಯ ನ್ಯಾಯಮೂರ್ತಿ ಅವರನ್ನು ಹೊರಗಿಡಲು ಕಾಯ್ದೆ ತಂದ ಬಿಜೆಪಿ ವಾಮಮಾರ್ಗದ ಮೂಲಕ ಗೆಲ್ಲಲು ಪ್ರಯತ್ನಿಸುತ್ತಿದೆ ಎಂದರು.

ಉದ್ಯಮಿಗಳು, ಭ್ರಷ್ಟಾಚಾರಿಗಳನ್ನು ಜಾರಿ ನಿರ್ದೇಶನಾಲಯದ ಮೂಲಕ ಬೆದರಿಸಿ ಚುನಾವಣೆ ಬಾಂಡ್ ಖರೀದಿಸುವಂತೆ ಒತ್ತಡ ಹೇರಿದೆ. ಹಿಟ್ಲರ್ ಗಿಂತ ಕೆಟ್ಟ ಸರ್ವಾಧಿಕಾರಿ ಆಡಳಿತ ನೀಡಿದೆ ಎಂದರು.

ರೈತರ ಸಾಲಮನ್ನಾ ಮಾಡದೆ, ಬಡ್ಡಿ ರಿಯಾಯಿತಿಯೂ ಕೊಡದ ಸರ್ಕಾರ ಉದ್ಯಮಿಗಳ ಹತ್ತಾರು ಲಕ್ಷ ಕೋಟಿ ಸಾಲಮನ್ನಾ ಮಾಡಿದ್ದು ನಾಚಿಕೆಗೇಡು. ಬಿಜೆಪಿ ನಾಯಕರು ವಿಶ್ವಗುರುವಾಗುವ ಮುನ್ನ ವಿಶ್ವ ಮಾನವರಾಗಬೇಕಿದೆ ಎಂದರು.

ರಾಜ್ಯದಿಂದ ಎರಡು ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕೇಳಲಾಗಿತ್ತು. ಅವಕಾಶ ಸಿಕ್ಕಿಲ್ಲ. ಸ್ಪರ್ಧೆಯಲ್ಲಿ ಇಲ್ಲದಿದ್ದರೂ ಬಿಜೆಪಿ ವಿರುದ್ಧ ಪ್ರಚಾರ ಮಾಡಲಾಗುತ್ತದೆ ಎಂದರು.

ಸಂವಿಧಾನ ಬದಲಿಸುವ ಮಾತುಗಳನ್ನಾಡಿದ ಅನಂತಕುಮಾರ ಹೆಗಡೆ ಮೇಲೆ ಬಿಜೆಪಿ ಕ್ರಮ ಕೈಗೊಂಡಿಲ್ಲ. ಅಂಬೇಡ್ಕರ ಬರೆದ ಸಂವಿಧಾನದ ಬದಲು ಆರ್.ಎಸ್.ಎಸ್ ಸಂವಿಧಾನ ಜಾರಿಗೆ ತರುವುದು ಆ ಪಕ್ಷದ ಹುನ್ನಾರ ಎಂದು ಆರೋಪಿಸಿದರು.

ಕುಟುಂಬ ರಾಜಕಾರಣದ ಬಗ್ಗೆ ಟೀಕಿಸುವ ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಯಡಿಯೂರಪ್ಪ ಕುಟುಂಬಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಲ್ಲಿನ ಹಲವು ನಾಯಕರ ಮಕ್ಕಳು ಚುನಾವಣೆಗೆ ಸ್ಪರ್ಧಿಸಲು ಯತ್ನಿಸುತ್ತಿದ್ದಾರೆ. ಕುಟುಂಬಕ್ಕೆ ಸೀಮಿತವಾದ ಜೆಡಿಎಸ್ ಪಕ್ಷದೊಂದಿಗೆ ಕೈ ಜೋಡಿಸಿದ್ದಾರೆ. ಇವೆಲ್ಲ ಮೋದಿ ಗಮನದಲ್ಲಿ ಇಲ್ಲವೆ? ಎಂದು ಪ್ರಶ್ನಿಸಿದರು.

ಉತ್ತರ ಕನ್ನಡವೂ ಸೇರಿದಂತೆ ರಾಜ್ಯದಲ್ಲಿರುವ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಪರಿಹಾರವಾಗಬೇಕು. ಹೊನ್ನಾವರ ಕಾಸರಕೋಡದಲ್ಲಿ ಬಂದರು ನಿರ್ಮಾಣಕ್ಕೆ ಅವಕಾಶದ ನೆಪದಲ್ಲಿ ಬಡವರನ್ನು ಒಕ್ಕಲೆಬ್ಬಿಸಬಾರದು ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಾಲಕೃಷ್ಣ ನಾಯ್ಕ, ಪ್ರಧಾನ ಕಾರ್ಯದರ್ಶಿ ಲಿಯೋ ಲ್ಯೂಯಿಸ್, ಅನಂತಕುಮಾರ ಬುಗುಡಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT