ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ | ನಿರ್ಲಕ್ಷ್ಯಕ್ಕೆ ತುತ್ತಾದ ಕಾರ್ಟೂನ್ ಉದ್ಯಾನ

Published 27 ಸೆಪ್ಟೆಂಬರ್ 2023, 8:05 IST
Last Updated 27 ಸೆಪ್ಟೆಂಬರ್ 2023, 8:05 IST
ಅಕ್ಷರ ಗಾತ್ರ

ವರದಿ: ಪ್ರವೀಣಕುಮಾರ ಸುಲಾಖೆ

ದಾಂಡೇಲಿ: ಚಾರ್ಲಿ ಚಾಪ್ಲಿನ್, ಛೋಟಾ ಭೀಮ್, ಮೋಟು ಪತ್ಲೂ, ಟಾಮ್ ಆ‍್ಯಂಡ್ ಜೆರ್ರಿ, ಅವೆಂಜರಸ್, ದಿ ಜಂಗಲ್ ಬುಕ್‍ನ ಕಾರ್ಟೂನ್‍ಗಳು, ಇರುವೆಗಳ ಪ್ರತಿಕೃತಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಮಕ್ಕಳನ್ನು ರಂಜಿಸುವ ಪ್ರತಿಮೆಗಳನ್ನು ಹೊಂದಿರುವ ಇಲ್ಲಿನ ದಂಡಕಾರಣ್ಯ ಇಕೋ ಪಾರ್ಕ್ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ.

ಸುಮಾರು 25 ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ತಲೆಎತ್ತಿರುವ ಉದ್ಯಾನ ದೇಶದ ಅಪರೂಪದ ಕಾರ್ಟೂನ್ ಉದ್ಯಾನಗಳಲ್ಲಿ ಒಂದೆನಿಸಿದೆ. ಮಕ್ಕಳ ಮನೋರಂಜನೆಗೆ ಇರುವ ಸೌಲಭ್ಯಗಳು ಉಪಯೋಗಕ್ಕೆ ಬಾರದಂತೆ ಹಾಳಾಗಿವೆ. ಹೀಗಾಗಿ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಇಳಿಕೆಯಾಗುತ್ತಿದೆ.

ಅರಣ್ಯ ಇಲಾಖೆಯ ಹಳಿಯಾಳ ವಿಭಾಗ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ 2017 ರಲ್ಲಿ ಉದ್ಯಾನ ನಿರ್ಮಿಸಲಾಗಿತ್ತು. ಮಕ್ಕಳಿಗೆ ಆಟಕ್ಕಾಗಿ ಜೋಕಾಲಿ, ಜಾರು ಬಂಡಿ ಸೇರಿದಂತೆ ವಿವಿಧ ಪರಿಕರಗಳ ಅಳವಡಿಕೆ ಜತೆಗೆ 35ಕ್ಕೂ ಹೆಚ್ಚಿನ ವಿವಿಧ ಜಾತಿಯ ಮರಗಳು ಇಲ್ಲಿವೆ.

‘ಉದ್ಯಾನ ನೋಡಲು ಆಕರ್ಷಕವಾಗಿದೆ. ಕಾರ್ಟೂನ್‍ಗಳ ಪ್ರತಿಮೆಗಳು ಗಮನಸೆಳೆಯುತ್ತವೆ. ಆದರೆ ಇಲ್ಲಿ ಅಳವಡಿಸಲಾದ ಪರಿಕರಗಳು ನಿರ್ವಹಣೆ ಇಲ್ಲದೆ ಹಾಳಾಗಿದ್ದನ್ನು ಕಂಡು ಬೇಸರವಾಗುತ್ತಿದೆ. ಸ್ವಚ್ಛತೆಗೂ ಆದ್ಯತೆ ನೀಡದಿರುವುದು ಉದ್ಯಾನದಲ್ಲಿ ಅಲ್ಲಲ್ಲಿ ಬಿದ್ದ ಕಸದ ರಾಶಿಯಿಂದ ಸ್ಪಷ್ಟವಾಗುತ್ತದೆ’ ಎನ್ನುತ್ತಾರೆ ಉದ್ಯಾನಕ್ಕೆ ಭೇಟಿ ನೀಡಿದ್ದ ಫಾತೀಮಾ ನವಾಜ್.

ದಾಂಡೇಲಿ ದಂಡಕಾರಣ್ಯ ಇಕೋ ಪಾರ್ಕ್ ಅಭಿವೃದ್ಧಿ ನಿರ್ವಹಿಸಲು ಅಗತ್ಯ ಅನುದಾನ ಬೇಕಿದೆ. ಉದ್ಯಾನವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ಬಗ್ಗೆಯೂ ಚಿಂತನೆ ನಡೆದಿದೆ
ಬಾಲಚಂದ್ರ ಹೊಸಹಳ್ಳಿ, ಹಳಿಯಾಳ ಡಿಸಿಎಫ್

‘ಆಕರ್ಷಕ ಉದ್ಯಾನವಾಗಿದ್ದರೂ ವಾಯುವಿಹಾರಕ್ಕೆ ಪಥ ನಿರ್ಮಿಸಿಲ್ಲ. ಮಾಹಿತಿ ವಿವರಿಸಲು ಗೈಡ್‍ಗಳಿಲ್ಲ. ವಿಶಾಲವಾದ ಉದ್ಯಾನದಲ್ಲಿ ಪ್ರವಾಸಿಗರನ್ನು ಸೆಳೆಯಬಹುದಾದ ಹಲವು ಸೌಕರ್ಯ ಅಳವಡಿಸಲು ಅವಕಾಶವಿದ್ದರೂ ನಿರ್ವಹಣೆ ವಿಚಾರಕ್ಕೆ ಬಹುತೇಕ ಉದ್ಯಾನ ಜಾಗ ಖಾಲಿ ಬಿಡಲಾಗಿದೆ’ ಎಂದು ಪ್ರವಾಸಕ್ಕೆ ಬಂದಿದ್ದ ರಾಯಚೂರಿನ ಆನಂದ ಯಲವಟ್ಟಿ ಹೇಳುತ್ತಾರೆ.

‘ನಿರೀಕ್ಷಿತ ಪ್ರಮಾಣದಲ್ಲಿ ಉದ್ಯಾನ ನಿರ್ವಹಣೆ ಮಾಡಲು ಆದಾಯ ಸಾಲುತ್ತಿಲ್ಲ. ಜನರಿಂದ ಸಂಗ್ರಹಿಸುವ ಶುಲ್ಕ ಬಳಸಿ ಉದ್ಯಾನದ ನಿರ್ವಹಣೆ ಆಗಬೇಕಿದೆ. ಹತ್ತು ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮಾಸಿಕ ವೇತನ ನೀಡಲು ₹90 ಸಾವಿರ ಬೇಕಾಗುತ್ತದೆ. ಉಳಿದ ಪರಿಕರ ನಿರ್ವಹಣೆಗೆ ಲಕ್ಷಾಂತರ ಮೊತ್ತ ಬೇಕಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ಉದ್ಯಾನದಲ್ಲಿರುವ ಕಾರ್ಟೂನ್‍ಗಳು.
ಉದ್ಯಾನದಲ್ಲಿರುವ ಕಾರ್ಟೂನ್‍ಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT