ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ವಾರದ ಸಂತೆಯಲ್ಲಿ ಏರಿದ ಈರುಳ್ಳಿ ದರ

Published 30 ಅಕ್ಟೋಬರ್ 2023, 16:30 IST
Last Updated 30 ಅಕ್ಟೋಬರ್ 2023, 16:30 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ವಾರದ ಸಂತೆಯಲ್ಲಿ ಈರುಳ್ಳಿಯು ಪ್ರತಿ ಕೆಜಿಗೆ ₹60-80 ದರದಲ್ಲಿ ಮಾರಾಟವಾಯಿತು. ಸೋಮವಾರದ ಸಂತೆಯಲ್ಲಿ ಈರುಳ್ಳಿಯದ್ದೇ ಹೆಚ್ಚು ಚರ್ಚೆಯಾಗಿತ್ತು. ಒಣಗಿದ ಈರುಳ್ಳಿಯ ಜೊತೆಗೆ ಸಣ್ಣ ಗಾತ್ರದ ಹಸಿಯಾಗಿರುವ ಈರುಳ್ಳಿಯು ತನ್ನ ದರ ಹೆಚ್ಚಿಸಿಕೊಂಡಿತ್ತು. ಕಳೆದ ಎರಡು ತಿಂಗಳ ಹಿಂದೆ ಟೊಮೆಟೊ ಜನರ ಕೈ ಸುಡುತ್ತಿತ್ತು. ಈಗ ಈರುಳ್ಳಿಯದ್ದು ಸರದಿಯಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

ಈರುಳ್ಳಿ ಮಾರಾಟ ಮಾಡುವ ವ್ಯಾಪಾರಿಗಳು ದರದಲ್ಲಿ ಚೌಕಾಶಿಗೆ ಅವಕಾಶ ಇಲ್ಲದಂತೆ ಒಂದೇ ದರಕ್ಕೆ ಅಂಟಿಕೊಂಡಿದ್ದರು. ಗ್ರಾಹಕರು ಮಾತ್ರ ಈರುಳ್ಳಿ ದರ ವಿಚಾರಿಸುತ್ತ, ತುಸು ಕಡಿಮೆಯಾದಿತು ಎಂದು ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಹೋಗುತ್ತಿರುವ ದೃಶ್ಯ ಕಂಡುಬಂತು. ಕೆಲವು ವ್ಯಾಪಾರಿಗಳು ಮುಂದಿನ ವಾರ ಇನ್ನೂ ದರ ಹೆಚ್ಚಾಗುತ್ತೆ ಅಂತ ಗ್ರಾಹಕರಿಗೆ ತಿಳಿಸುತ್ತಿದ್ದರು. ಇದರಿಂದ ಗ್ರಾಹಕರು ಗೊಂದಲಕ್ಕೀಡಾದಂತೆ ಕಂಡುಬಂದರು. ಇನ್ನೂ ಕೆಲವರು ಯಾವ ತರಕಾರಿ ಆಗಲಿ, ಕಾಳುಕಡಿಯಾಗಲಿ ಸೋವಿ ಆಗುವ ದಿನಗಳು ಇಲ್ಲ. ತುಟ್ಟಿ ದಿನಗಳು ಬಂದಿವೆ. ಏನೂ ಮಾಡಕ್ಕಾಗಲ್ಲ ಎಂದು ಹೇಳುತ್ತ, ಈರುಳ್ಳಿ ಖರೀದಿಗೆ ಮುಂದಾದರು.

ʼವಾರದಿಂದ ವಾರಕ್ಕೆ ಈರುಳ್ಳಿ ದರ ಹೆಚ್ಚಾಗುತ್ತಿದೆ. ಎಲ್ಲಿಯೋ ಒಂದು ಕಡೆ ಬೇಡಿಕೆ ಹೆಚ್ಚಾದರೆ, ಎಲ್ಲ ಕಡೆ ದರ ಏರುತ್ತದೆ. ಇದರಲ್ಲಿ ರೈತರಿಗೆ ಎಷ್ಟು ಲಾಭ ಆಗುತ್ತದೆಯೋ ಗೊತ್ತಿಲ್ಲ. ಸಾಮಾನ್ಯ ಜನರಂತೂ ದರ ಹೆಚ್ಚಾದರೂ ಕೊಳ್ಳಲೇಬೇಕಾಗಿದೆ. ಕೆಲವರು ಇನ್ನೂ ದರ ಹೆಚ್ಚಾಗುತ್ತದೆ ಎಂದಿದ್ದಕ್ಕೆ ಒಂದೆರೆಡು ಕೆಜಿ ಹೆಚ್ಚಿಗೆ ಖರೀದಿಸಿ, ಮುಂದಿನ ವಾರದ ಸಂತೆಯ ಖರ್ಚಿನಲ್ಲಿ ಉಳಿತಾಯ ಮಾಡುವ ಪ್ರಯತ್ನ ಮಾಡಿದ್ದಾರೆ.

‘ದೊಡ್ಡ ಗಾತ್ರದ್ದು ಹಾಗೂ ಒಣಗಿರುವ ಈರುಳ್ಳಿ ಪ್ರತಿ ಕೆಜಿಗೆ ₹80 ಹಾಗೂ ಸಣ್ಣ ಗಾತ್ರದ ಈರುಳ್ಳಿ ₹50 ರಂತೆ ಮಾರಾಟವಾಗಿದೆʼ ಎಂದು ಗ್ರಾಹಕ ದೇವೇಂದ್ರ ಬಂಕಾಪುರ ಹೇಳಿದರು.

ʼಸಾಮಾನ್ಯವಾಗಿ ಈರುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಮಳೆಯ ಏರಿಳಿತದಿಂದ ಈ ಸಲ ಬೇಡಿಕೆಯಷ್ಟು ಈರುಳ್ಳಿ ಉತ್ಪಾದನೆ ಆಗಿಲ್ಲ. ಹೊಸ ಈರುಳ್ಳಿ ಇನ್ನೂ ಬರಬೇಕಿದೆ. ಕೆಲವೆಡೆ ಹೊಸದಾಗಿ ಈರುಳ್ಳಿ ಬಂದರೂ ಅದು ದೊಡ್ಡ ಗಾತ್ರದಲ್ಲಿಲ್ಲ. ಉತ್ತಮ ಗುಣಮಟ್ಟದ ಈರುಳ್ಳಿ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿಯೇ ಪ್ರತಿ ಕೆಜಿಗೆ ₹65-70 ರ ಆಸುಪಾಸಿನಲ್ಲಿ ಖರೀದಿಯಾಗುತ್ತಿದೆ. ತುಸು ಸಣ್ಣಗಾತ್ರದ ಈರುಳ್ಳಿ ಪ್ರತಿ ಕೆಜಿಗೆ ₹55-65 ದರದಲ್ಲಿ ಖರೀದಿ ನಡೆದಿದೆ. ಸಾಗಾಟ ವೆಚ್ಚ, ಲಾಭ ಎಲ್ಲವೂ ಸೇರಿದಾಗ ಈರುಳ್ಳಿ ದರ ಸದ್ಯಕ್ಕೆ ಇಷ್ಟಿದೆ. ಬೇರೆ ರಾಜ್ಯಗಳಿಂದ ಈರುಳ್ಳಿ ಬರದಿದ್ದರೇ, ಇನ್ನೂ ಕೆಲವು ವಾರಗಳವರೆಗೆ ದರ ಏರಿಕೆಯಾಗುವ ಸಾಧ್ಯತೆಯಿದೆʼ ಎಂದು ವ್ಯಾಪಾರಿ ಅಬ್ದುಲ್‌ಖಾದರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT