ಕಾರವಾರ: ದೀಪಾವಳಿಯ ಹೊಸ್ತಿಲಿನಲ್ಲಿ ತುಟ್ಟಿ ಭತ್ಯೆ ಹೆಚ್ಚಳದ ಖುಷಿಯಲ್ಲಿ ಸರ್ಕಾರಿ ನೌಕರರು ಇದ್ದರೆ ಜಿಲ್ಲೆಯ ಕಾರವಾರ, ಶಿರಸಿ ಮತ್ತು ಯಲ್ಲಾಪುರದಲ್ಲಿರುವ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿ.ಎಂ.ಜಿ.ಎಸ್.ವೈ) ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ವೇತನವನ್ನೂ ಕಾಣದ ಸಮಸ್ಯೆಯಲ್ಲಿದ್ದಾರೆ.
ಯೋಜನೆಯ ಅಡಿ ಕಾರ್ಯನಿರ್ವಹಿಸುವ 15 ಮಂದಿ ಎಂಜಿನಿಯರ್‌ಗಳಿಗೆ ಕಳೆದ ಎಂಟು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಕಂಪ್ಯೂಟರ್ ಆಪರೇಟರ್, ಜವಾನರು ಸೇರಿದಂತೆ ಇನ್ನಿತರ 24 ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ಸಂಬಳ ಸಿಕ್ಕಿಲ್ಲ. ಇವರೆಲ್ಲರೂ ದಾವಣಗೆರೆ ಮೂಲದ ಜೆಮಿನಿ ಎಂಬ ಹೊರಗುತ್ತಿಗೆ ಕಂಪನಿಯ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ ಕೈಗೊಳ್ಳುವ ಜವಾಬ್ದಾರಿ ಹೊತ್ತಿರುವ ಪಿ.ಎಂ.ಜಿ.ಎಸ್.ವೈ ಕಚೇರಿಯು ಅಗತ್ಯದಷ್ಟು ಸಿಬ್ಬಂದಿಯನ್ನೂ ಹೊಂದಿಲ್ಲ. ಇರುವ ಸಿಬ್ಬಂದಿಯೇ ಒತ್ತಡದಲ್ಲಿ ಕೆಲಸ ಮಾಡಬೇಕಾದ ಸ್ಥಿತಿ ಇದೆ. ಕೆಲಸ ಮಾಡಿದರೂ ವೇತನ ಪಡೆಯಲಾಗದ ಅಸಹಾಯಕತೆಗೆ ಇಲ್ಲಿನ ಸಿಬ್ಬಂದಿ ಸಿಲುಕಿದ್ದಾರೆ.
‘ಕಚೇರಿಯು ನೇರವಾಗಿ ರಾಜ್ಯಮಟ್ಟದಲ್ಲಿರುವ ಕೆ.ಆರ್.ಡಿ.ಎಲ್ ಅಧೀನದಲ್ಲಿ ಬರುತ್ತದೆ. ಕೈಗೊಳ್ಳುವ ಕಾಮಗಾರಿಗಳ ಪೈಕಿ ತಲಾ ಶೇ 50ರಷ್ಟು ಪಾಲನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಆದರೆ, ಕಚೇರಿ ನಿರ್ವಹಣೆ ಮತ್ತು ಸಿಬ್ಬಂದಿ ವೇತನವನ್ನು ರಾಜ್ಯಮಟ್ಟದಿಂದಲೇ ನಿಭಾಯಿಸಲಾಗುತ್ತದೆ’ ಎನ್ನುತ್ತಾರೆ ಪಿ.ಎಂ.ಜಿ.ಎಸ್.ವೈ ವಿಭಾಗದ ಅಧಿಕಾರಿಯೊಬ್ಬರು.
‘ಇಬ್ಬರು ಸಿಬ್ಬಂದಿ ನಿಭಾಯಿಸುವ ಕೆಲಸವನ್ನು ಒಬ್ಬರೇ ಮಾಡಬೇಕಾದ ಸ್ಥಿತಿ ಇದೆ. ಇಲಾಖೆಯಲ್ಲಿ 40 ಮಂದಿ ಸಿಬ್ಬಂದಿ ಅಗತ್ಯವಿದೆ. ಆದರೆ 9 ಮಂದಿ ಮಾತ್ರ ಕಾಯಂ ಸಿಬ್ಬಂದಿ ಇದ್ದಾರೆ. ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರೇ ಹೆಚ್ಚಿದ್ದೇವೆ. ಸಕಾಲಕ್ಕೆ ವೇತನ ಸಿಗದೆ ಸಮಸ್ಯೆಯಾಗಿದೆ. ದೀಪಾವಳಿ ಸಮೀಪಿಸಿದರೂ ವೇತನ ಬಿಡುಗಡೆಯಾಗುವ ಲಕ್ಷಣವಿಲ್ಲ. ಹಬ್ಬ ಸಂಭ್ರಮದಿಂದ ಆಚರಿಸುವುದು ಬದಿಗಿರಲಿ, ಕನಿಷ್ಠ ದಿನನಿತ್ಯದ ಜೀವನ ನಡೆಸಲೂ ಪರದಾಡುತ್ತಿದ್ದೇವೆ’ ಎಂದು ಹೊರಗುತ್ತಿಗೆ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.