ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಕೊಯ್ಲು: ಯಂತ್ರಕ್ಕೆ ಕೆಲಸದ ಕೊರತೆ

ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ದರ: ಸುಗ್ಗಿ ಸಂಸ್ಕೃತಿ ದೂರವಾಗುವ ಆತಂಕ
Published 28 ನವೆಂಬರ್ 2023, 5:04 IST
Last Updated 28 ನವೆಂಬರ್ 2023, 5:04 IST
ಅಕ್ಷರ ಗಾತ್ರ

ಮುಂಡಗೋಡ: ಮಳೆಯ ಕೊರತೆಯ ನಡುವೆಯೂ ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಮಳೆಯಾಶ್ರಿತ ಭತ್ತ ಹಾಗೂ ಕೊಳವೆ ಬಾವಿ ಸೌಲಭ್ಯ ಹೊಂದಿರುವ ಗದ್ದೆಗಳಲ್ಲಿ ಬೆಳೆದಿರುವ ಭತ್ತವನ್ನು ಕೊಯ್ಲು ಮಾಡಲು, ಯಂತ್ರಗಳು ತಾಲ್ಲೂಕಿಗೆ ಆಗಮಿಸಿವೆ. ಆದರೆ, ನಿರೀಕ್ಷಿತ ಪ್ರಮಾಣದಷ್ಟು ಭತ್ತ ಬಾರದಿರುವುದರಿಂದ ಹೆಚ್ಚಿನ ಸಂಖ್ಯೆಯ ಭತ್ತ ಕಟಾವು ಮಾಡುವ ವಾಹನಗಳು ಅಲ್ಲಲ್ಲಿ ನಿಂತಿವೆ.

ಕಳೆದ ಒಂದು ದಶಕದಿಂದ ತಾಲ್ಲೂಕಿನ ಗದ್ದೆಗಳಲ್ಲಿ ತಮಿಳುನಾಡು ಮೂಲದ ಭತ್ತ ಕೊಯ್ಲು ಮಾಡುವ ವಾಹನಗಳು ಓಡಾಡುತ್ತಿವೆ. ಬಳ್ಳಾರಿ, ಹೊಸಪೇಟೆ, ರಾಯಚೂರು ಭಾಗಗಳಿಂದಲೂ ಕೆಲವು ವಾಹನಗಳು ಇಲ್ಲಿಗೆ ಆಗಮಿಸುತ್ತಿವೆ. ಈ ವರ್ಷ ತಾಲ್ಲೂಕು ಬರಪೀಡಿತ ಹಣೆಪಟ್ಟಿಯನ್ನು ಅಂಟಿಸಿಕೊಂಡಿರುವುದರಿಂದ, ಭತ್ತ ಕಟಾವು ಮಾಡುವ ವಾಹನಗಳಿಗೆ ನಿರೀಕ್ಷಿತ ಪ್ರಮಾಣದ ಕೆಲಸ ಸಿಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

‘ನೆರೆಯ ರಾಜ್ಯದ ವಾಹನಗಳ ಆಗಮನದಿಂದ, ಅರೆಮಲೆನಾಡಿನ ಸುಗ್ಗಿಯ ಸೊಬಗೂ ಮರೆಯಾಗುತ್ತಿದೆ. ಸಾಂಪ್ರದಾಯಿಕ ಕೊಯ್ಲು ಮಾಡುವ ಪದ್ಧತಿ ದೂರವಾಗಿ, ಸುಗ್ಗಿಯ ಹಾಡುಗಳು ಕೇಳದಂತಾಗಿದೆ’ ಎಂದು ಹಿರಿಯ ರೈತರು ಹೇಳುತ್ತಾರೆ.

‘ಕಾಡಾನೆಗಳು ಸಹಿತ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಿಕೊಳ್ಳಲು ರೈತರು ಕೊಯ್ಲಿಗೆ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಅಕಾಲಿಕ ಮಳೆಯ ಸಾಧ್ಯತೆಯಿಂದ ಪಾರಾಗಲು ಹಲವು ರೈತರು ಭತ್ತ ಕೊಯ್ಲು ಮಾಡಿಸುತ್ತಿದ್ದಾರೆ. ಭತ್ತ ಕೊಯ್ಲು ಮಾಡುವ ವಾಹನಗಳು ತಾಲ್ಲೂಕಿನ ಹಲವೆಡೆ ಸಂಚರಿಸುತ್ತಿದ್ದು, ಒಣಗಿದ ಭತ್ತವನ್ನು ಕೆಲವೇ ಗಂಟೆಗಳಲ್ಲಿ ಚೀಲದಲ್ಲಿ ತುಂಬುವಂತೆ ಮಾಡುತ್ತಿವೆ. ಭತ್ತದ ಗದ್ದೆಗಳಲ್ಲಿ ಹಲವು ರೈತರು ಗೋವಿನಜೋಳ ಬೆಳೆದಿರುವುದರಿಂದ ಈ ಸಲ ಭತ್ತದ ಬೆಳೆ ವರ್ಷಕ್ಕಿಂತ ತುಸು ಕಡಿಮೆಯಿದೆ’ ಎಂದು ರೈತ ಶಿವಜ್ಯೋತಿ ಹೇಳಿದರು.

‘ಅರೆಮಲೆನಾಡು ತಾಲ್ಲೂಕಿನಲ್ಲಿ ಭತ್ತದ ಬೆಳೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅಡಿಕೆ, ಕಬ್ಬು, ಗೋವಿನಜೋಳದತ್ತ ರೈತರ ಒಲವು ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ. ಈ ವರ್ಷ ಮಳೆಯೂ ಕೈ ಕೊಟ್ಟಿದ್ದರಿಂದ ಸಾಂಪ್ರದಾಯಿಕ ಭತ್ತ ಬೆಳೆಗಾರರಿಗೂ ಹೊಡೆತ ಬಿದ್ದಿದೆ. ಭತ್ತ ಕೊಯ್ಲು ಮಾಡುವ ಯಂತ್ರಗಳಿಂದ ಕೈಗೆ ಬಂದಿರುವ ಭತ್ತವನ್ನು ಕಟಾವು ಮಾಡಿಸಲಾಗುತ್ತಿದೆ. ಪ್ರತಿ ಗಂಟೆಗೆ ₹1,700- 2,000 ದರವಿದೆ. ಭತ್ತದ ಮೇವಿಗೂ ಉತ್ತಮ ದರ ಇದ್ದು, ಯಂತ್ರಗಳಿಂದಲೇ ಭತ್ತದ ಮೇವಿನ ಸುರುಳಿ ಮಾಡಿಸಲಾಗುತ್ತಿದೆ. ಭತ್ತದ ಗದ್ದೆಗಳು ಬಹುತೇಕ ಖಾಲಿ ಖಾಲಿ ಕಾಣುತ್ತಿರುವುದರಿಂದ, ಕೊಯ್ಲು ಮಾಡುವ ವಾಹನಗಳು ಇನ್ನೊಂದು ತಿಂಗಳಲ್ಲಿ ಮರಳಿ ಹೋಗಬಹುದು’ ಎಂದು ಪ್ರಗತಿಪರ ಕೃಷಿಕ ಶಿವಕುಮಾರ ಪಾಟೀಲ ಅಭಿಪ್ರಾಯ ಪಡುತ್ತಾರೆ.

ಮಳೆಯಾಶ್ರಿತ ಭತ್ತ ಈಗಾಗಲೇ ಕೊಯ್ಲು ಹಂತಕ್ಕೆ ಬಂದಿದೆ. ನಾಟಿ ಮಾಡಿರುವ ಭತ್ತ ಕೊಯ್ಲು ಮಾಡಲು ಇನ್ನೂ ಕೆಲವು ದಿನಗಳು ಹೋಗಬೇಕಾಗಿದೆ. ಮಳೆ ಕೊರತೆಯಿಂದ ಶೇ.50ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇಳುವರಿ ಕುಂಠಿತಗೊಂಡಿದೆ
ಎಂ.ಎಸ್‌.ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT