ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಟ್ಕಳ: ವಿದ್ಯುತ್ ಸಮಸ್ಯೆಗೆ ಸಿಗದ ಶಾಶ್ವತ ಪರಿಹಾರ

ಪೂರ್ಣಗೊಳ್ಳದ 110 ಕೆ.ವಿ ಸಾಮರ್ಥ್ಯದ ಗ್ರಿಡ್ ಸ್ಥಾಪನೆ ಯೋಜನೆ
Published 25 ಮೇ 2024, 7:08 IST
Last Updated 25 ಮೇ 2024, 7:08 IST
ಅಕ್ಷರ ಗಾತ್ರ

ಭಟ್ಕಳ: ತಾಲ್ಲೂಕಿನಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಅಗತ್ಯ ಇರುವ 110 ಕೆ.ವಿ ಗ್ರಿಡ್ ಸ್ಥಾಪನೆಯಾಗಬೇಕು ಎನ್ನುವ ದಶಕದ ಕೂಗಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಇದರಿಂದಾಗಿ ವಿದ್ಯುತ್ ಸಮಸ್ಯೆ ಉಂಟಾದರೆ ಪರ್ಯಾಯ ವಿದ್ಯುತ್ ಸಂಪರ್ಕ ಇಲ್ಲದೇ ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.‌

ಮುರ್ಡೇಶ್ವರದ 110 ವಿದ್ಯುತ್ ಗ್ರೀಡ್‍ನಿಂದ ಭಟ್ಕಳ ಹೆಬಳೆಯಲ್ಲಿರುವ 33 ಗ್ರೇಡ್ ವಿದ್ಯುತ್‌ನ್ನು ವರ್ಗಾಯಿಸಿ ಅಲ್ಲಿಂದ ತಾಲ್ಲೂಕಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಪ್ರಸ್ತುತ ಹೆಬಳೆಯಲ್ಲಿರುವ 1*5 ಮೆಗಾ ವ್ಯಾಟ್ ಶಕ್ತಿಯ 3 ಪರಿವರ್ತಕಗಳು ಕಳೆದ 3 ದಶಕಗಳ ಹಿಂದಿನವು. ಇಲ್ಲಿನ ಮೂರು ವಿದ್ಯುತ್ ಪರಿವರ್ತಕದ ಮೂಲಕ ವಿದ್ಯುತ್ ಸರಬರಾಜು ಮಾಡುತ್ತಿರುವ ಪರಿಣಾಮ ಹೆಚ್ಚು ಒತ್ತಡ ಬಿದ್ದರೆ ವಿದ್ಯುತ್ ವ್ಯತ್ಯಯ ಎದುರಾಗುತ್ತದೆ ಎನ್ನುತ್ತಾರೆ ತಜ್ಞರೊಬ್ಬರು.

‘ಎರಡು ವರ್ಷದ ಹಿಂದೆ ಮಳೆಗಾಲದಲ್ಲಿ 1*5 ಮೆಗಾ ವ್ಯಾಟ್ ಶಕ್ತಿಯ ಪರಿವರ್ತಕ ವಿಫಲಗೊಂಡಾಗ ಹುಬ್ಬಳ್ಳಿಯಿಂದ ತಂದು ಮರುಜೋಡಿಸಲಾಗಿತ್ತು. ಈಗ ಇನ್ನೊಂದು ಪರಿವರ್ತಕ ವಿಫಲಗೊಂಡಿದ್ದು ಕಾರವಾರದಿಂದ ತಂದು ಮರುಜೋಡಿಸಲಾಗುತ್ತಿದೆ. ಹಬಳೆಯಲ್ಲಿ 33 ಕೆ.ವಿ ಗ್ರಿಡ್‍ನಲ್ಲಿರುವ ಮೂರು ಪರಿವರ್ತಕಗಳ ವಿದ್ಯುತ್ ಭಾರ ಹೆಚ್ಚಿದಾಗಲೆಲ್ಲಾ ಪದೇ ಪದೇ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ’ ಎಂದು ಹೆಸ್ಕಾಂ ಅಧಿಕಾರಿಯೊಬ್ಬರು ಹೇಳಿದರು.

‘ಈ ಸಮಸ್ಯೆ ತಪ್ಪಿಸಲು ಹೆಚ್ಚುವರಿ ಪರಿವರ್ತಕ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಇದು ಸಫಲವಾದರೆ ತಾತ್ಕಾಲಿಕ ಲೋಡ್‌ ಶೆಡ್ಡಿಂಗ್‍ನಿಂದ ಮುಕ್ತಿ ಸಿಗಲಿದೆ’ ಎಂದರು.

110 ಗ್ರಿಡ್ ಸ್ಥಾಪನೆಗೆ ಕೂಡ ಬರದ ಕಾಲ: ಭಟ್ಕಳಕ್ಕೆ ಹೊನ್ನಾವರ ಮಾರ್ಗದಿಂದ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಒಂದೊಮ್ಮೆ ಅಲ್ಲಿ ವಿದ್ಯುತ್ ಕೈಕೊಟ್ಟರೆ ಬದಲಿ ಮಾರ್ಗದ ವಿದ್ಯುತ್ ಪಡೆಯುವ ವ್ಯವಸ್ಥೆ ಭಟ್ಕಳದಲಿಲ್ಲ. ಅದನ್ನು ಮನಗಂಡು ಕಳೆದ 15 ವರ್ಷಗಳ ಹಿಂದೆ ಭಟ್ಕಳದಲ್ಲಿ 110 ಕೆ.ವಿ ಗ್ರಿಡ್ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಯೋಜನೆ ಇನ್ನೂ ಕಾಮಗಾರಿ ಹಂತದಲ್ಲಿದೆ.

‘110 ಕೆ.ವಿ ತಂತಿ ಬರುವ ಮಾರ್ಗವನ್ನು ಮಾಲ್ಕಿ ಜಮೀನುದಾದರು ಅಲ್ಲಲ್ಲಿ ನ್ಯಾಯಾಲಯ ದಾವೆ ಹೂಡಿದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ. ಪಟ್ಟಣದ ಸಾಗರ ರಸ್ತೆಯಲ್ಲಿ 110 ಕೆ.ವಿ ಗ್ರೀಡ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ತಂತಿ ಮಾರ್ಗ ಜೋಡಣೆ ವಿಳಂಬದಿಂದ ಕಾಮಗಾರಿ ಇನ್ನಷ್ಟು ವಿಳಂಬವಾಗುತ್ತಿದೆ’ ಎಂದು ಹೆಸ್ಕಾಂ ಎಇ ಶಿವಾನಂದ ನಾಯ್ಕ ತಿಳಿಸಿದರು.

‘ಮೆಸ್ಕಾಂ’ನಿಂದ ತುರ್ತು ವಿದ್ಯುತ್

‘ಭಟ್ಕಳಕ್ಕೆ ಅಗತ್ಯ ಬಿದ್ದಾಗ ಮೆಸ್ಕಾಂ ನಿಂದ ತುರ್ತು ವಿದ್ಯುತ್ ಸರಬರಾಜು ಪಡೆಯಲು ಬೈಂದೂರಿನಿಂದ ಭಟ್ಕಳಕ್ಕೆ ವಿದ್ಯುತ್ ಮಾರ್ಗ ಎಳೆಯಲು ಯೋಜನೆ ಅನುಮೋದನೆಯಾಗಿದೆ. ಭಟ್ಕಳದಲ್ಲಿ 110 ಗ್ರಿಡ್ ಸ್ಥಾಪನೆ ಹಾಗೂ ಮೆಸ್ಕಾಂನಿಂದ ವಿದ್ಯುತ್ ಸರಬರಾಜು ಆದರೆ ಭಟ್ಕಳದಲ್ಲಿ ವಿದ್ಯುತ್ ಸಮಸ್ಯೆ ಶಾಶ್ವತ ಪರಿಹಾರ ಸಿಗಲಿದೆ’ ಎಂದು ಹೆಸ್ಕಾಂ ಎಇಇ ಮಂಜುನಾಥ ನಾಯ್ಕ ಅತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT