ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯಕ್ಕಿಂತ ಜನಪರ ಯೋಜನೆಗೆ ಆದ್ಯತೆ: ಬಸವರಾಜ ಬೊಮ್ಮಾಯಿ

Last Updated 28 ಫೆಬ್ರುವರಿ 2023, 8:50 IST
ಅಕ್ಷರ ಗಾತ್ರ

ಸಿದ್ದಾಪುರ: 'ಜನಪ್ರಿಯ ಯೋಜನೆಗಿಂತ ಜನಪರ ಕಾರ್ಯಕ್ರಮ ನೀಡುವುದು ನಮ್ಮ ಆದ್ಯತೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಮಂಗಳವಾರ ₹ 59 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ, ಹಲವು ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಅವರು ಮಾತನಾಡಿದರು.

'ಡಬಲ್ ಎಂಜಿನ್ ಸರ್ಕಾರದಿಂದಾಗಿ ಸರ್ವೋದಯ, ನವೋದಯದ ಆಡಳಿತ ನಡೆಯುತ್ತಿದೆ' ಎಂದು ಹೇಳಿದರು.

'ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ‌. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಕರ್ಯ ವೃದ್ಧಿಸುವ ಜತೆಗೆ ಸಿಬ್ಬಂದಿ ನೇಮಕಗೊಳಿಸಲಾಗಿದೆ. ಸಮಾಜದ ಎಲ್ಲ ವರ್ಗಗಳ ಏಳ್ಗೆಗೆ ಆದ್ಯತೆ ನೀಡಲಾಗಿದೆ' ಎಂದರು.

'ದುಡಿಮೆಯೆ ದೊಡ್ಡಪ್ಪ. ದುಡಿಯುವ ವರ್ಗ ದೇಶ ಕಟ್ಟುತ್ತಿದೆ' ಎಂದರು.

'ಜನಪರ ರಾಜಕಾರಣ ಮಾಡುವವರಿಗೆ ಸೋಲು ಇರದು. ವಿರೋಧ ಎದುರಿಸಿ ಯೋಜನೆ ಜಾರಿಗೊಳಿಸುವುದು ಇಚ್ಚಾಶಕ್ತಿ ಇರುವ ನಾಯಕರಿಗೆ ಖುಷಿ ಕೊಡುತ್ತದೆ' ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, 'ಅಭಿವೃದ್ದಿಯ ಹೊಸ ಪರ್ವ ಆರಂಭವಾಗಿದೆ‌. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯದ ಜತೆಗೆ ಸೌಲಭ್ಯ ಒದಗಿಸಲಾಗಿದೆ' ಎಂದರು.

ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ, 'ಕಡು ಬಡವರನ್ನು ಮೇಲೆತ್ತುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಭಾಷಣದಲ್ಲಿ ಕಾಲ ಕಳೆಯುತ್ತಿತ್ತು. ಬಿಜೆಪಿ ಸರ್ಕಾರ ಕೆಲಸ ಮಾಡಿ ತೋರಿಸಿದೆ' ಎಂದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, 'ಶಿಕ್ಷಣ, ಆಡಳಿತ, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಸಿದ್ದಾಪುರದ ಚಿತ್ರಣ ಬದಲಿಸಲಾಗಿದೆ. ಸಂವಿಧಾನಬದ್ಧ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು ಕೆಲಸ ಮಾಡಲಾಗುತ್ತಿದೆ. ಒಡೆದು ಆಳುವ ಬದಲು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ' ಎಂದರು.

'ಸಿದ್ದಾಪುರ ಪಟ್ಟಣಕ್ಕೆ ನೀರು ಒದಗಿಸಲು ಯೋಜನೆ ರೂಪಿಸಲಾಗುವುದು. ಸಾರಿಗೆ ಘಟಕ, ಕಾನಸೂರಿನಲ್ಲಿ ಗ್ರಿಡ್ ಸ್ಥಾಪನೆ ಮಾಡಲಾಗುವುದು' ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು. ಶಾಸಕ ದಿನಕರ ಶೆಟ್ಟಿ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಸಿಸಿಎಫ್ ವಸಂತ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT