ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೀರಜ್ ಸಾಹು ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ಭ್ರಷ್ಟಾಚಾರದ ಜನಕ- ಕಾಗೇರಿ ಆರೋಪ

Published 11 ಡಿಸೆಂಬರ್ 2023, 8:28 IST
Last Updated 11 ಡಿಸೆಂಬರ್ 2023, 8:28 IST
ಅಕ್ಷರ ಗಾತ್ರ

ಕಾರವಾರ: ಅಕ್ರಮವಾಗಿ ಕೋಟ್ಯಂತರ ಮೊತ್ತ ದಾಸ್ತಾನಿಟ್ಟುಕೊಂಡಿದ್ದ ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕ ಧರಣಿ ನಡೆಸಿದ ಬಳಿಕ ಕಾಲ್ನಡಿಗೆ ಮೂಲಕ ಗಾಂಧಿ ಉದ್ಯಾನಕ್ಕೆ ಮುಖಂಡರು, ಕಾರ್ಯಕರ್ತರು ತೆರಳಿದರು. ಗಾಂಧಿ ಪ್ರತಿಮೆ ಎದುರು ಕುಳಿತು ಪ್ರತಿಭಟನೆ ನಡೆಸಿ ಭ್ರಷ್ಟ ಕಾಂಗ್ರೆಸ್ ನಾಯಕರನ್ನು ಬಂಧಿಸಲು ಆಗ್ರಹಿಸಲಾಯಿತು.

ನಗರದ ಮುಖ್ಯ ರಸ್ತೆಯಲ್ಲಿಯೂ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ಸುಭಾಷ ವೃತ್ತದಲ್ಲಿ ಸೇರಿ ಪ್ರತಿಭಟಿಸಿದರು.

ಪ್ರತಿಭಟನೆ

ಪ್ರತಿಭಟನೆ

ಪ್ರತಿಭಟನೆ ನೇತೃತ್ವ ವಹಿಸಿದ್ದ ವಿಧಾನಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಧೀರಜ್ ಸಾಹು ಎಂಬ ಸಂಸದ ಕಾಂಗ್ರೆಸ್ ಸಾವಿಗೆ ದಾರಿಮಾಡಿಕೊಟ್ಟಿದ್ದಾರೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಬೋಫೋರ್ಸ್, 2ಜಿ ಹಗರಣ ಸೇರಿದಂತೆ ನೀರು, ನೆಲ, ಗಾಳಿಯಲ್ಲಿಯೂ ಭ್ರಷ್ಟಾಚಾರ ನಡೆದಿತ್ತು. ಕಾಂಗ್ರೆಸ್ ಹಣ ಹಂಚಿ ಮತ ಖರೀದಿಸುವ ಷಡ್ಯಂತ್ರ ನಡೆಸುತ್ತಿದೆ. ಕರ್ನಾಟಕವನ್ನು ಕಾಂಗ್ರೆಸ್ ನಾಯಕರು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಬಳಕೆಯಾಯಿತೆ ವಿನಃ ಅವುಗಳನ್ನು ಅರ್ಹರಿಗೆ ತಲುಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಭ್ರಷ್ಟ ಹಣದ ಮೂಲಕ ಚುನಾವಣೆ ಗೆಲ್ಲುತ್ತಿದ್ದ ಕಾಂಗ್ರೆಸ್ ಈಗ ಪಂಚರಾಜ್ಯ ಚುನಾವಣೆಯ ಸೋಲಿನ ಬಳಿಕ ದೃತಿಗೆಟ್ಟಿದೆ. ಲೋಕಸಭೆ ಚುನಾವಣೆಗೆ ಹಣ ಒಗ್ಗೂಡಿಸಲಾಗುತ್ತಿದೆ ಎಂದರು.

ಮುಖಂಡ ಸುನೀಲ ಹೆಗಡೆ, ಕಾಂಗ್ರೆಸ್ ರಕ್ತದಲ್ಲಿ ಭ್ರಷ್ಟಾಚಾರ ತುಂಬಿಕೊಂಡಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ನಾಯಕ, ರಾಹುಲ್ ಗಾಂಧಿ ಅವರ ಆಪ್ತ ಸಂಸದನ ಮನೆಯಲ್ಲಿ ದೊಡ್ಡ ಮೊತ್ತದ ನಗದು ಪತ್ತೆಯಾಗಿದ್ದು, ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಬಣ್ಣ ಬಹಿರಂಗವಾಗಿದೆ ಎಂದರು.

ಪ್ರಮುಖರಾದ ಚಂದ್ರು ಎಸಳೆ, ಗೋವಿಂದ ನಾಯ್ಕ, ನಾಗರಾಜ ನಾಯಕ, ಎಂ.ಜಿ.ಭಟ್, ಎನ್.ಎಸ್.ಹೆಗಡೆ, ನಯನಾ ನೀಲಾವರ, ನಗರಸಭೆಯ ಬಿಜೆಪಿ ಸದಸ್ಯರು, ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT