ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಗ್ಯಾರಂಟಿ ಯೋಜನೆ: ಹೊಸ ಚೀಟಿಗೆ ಹೆಚ್ಚಿದ ಬೇಡಿಕೆ

ಹೊಸ ಪಡಿತರ ಚೀಟಿಗೆ ವರ್ಷಗಳಿಂದ ಕಾಯುತ್ತಿರುವ ಜನರು
Published 9 ಸೆಪ್ಟೆಂಬರ್ 2023, 5:07 IST
Last Updated 9 ಸೆಪ್ಟೆಂಬರ್ 2023, 5:07 IST
ಅಕ್ಷರ ಗಾತ್ರ

ಮುಂಡಗೋಡ: ಹೊಸದಾಗಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬೇಕೆನ್ನುವರ ಸಂಖ್ಯೆಯೂ ದಿನೇ ದಿನೆ ಏರತೊಡಗಿದೆ. ಮತ್ತೊಂದೆಡೆ ಕಳೆದ ಮೂರು ವರ್ಷಗಳ ಹಿಂದೆಯೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಅನುಮೋದನೆ ಆಗದೇ, ಪಡಿತರ ಚೀಟಿಗಾಗಿ ಆಹಾರ ವಿಭಾಗದ ಕಚೇರಿಗೆ ಜನರು ಅಲೆದಾಡುತ್ತಿದ್ದಾರೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಡಿ ನೀಡಲಾಗುವ ಅಂತ್ಯೋದಯ, ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರ ಚೀಟಿಗಳ ಬೇಡಿಕೆ ಪಟ್ಟಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ, ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಜನರ ಸಂಖ್ಯೆಯೂ ಹೆಚ್ಚಾಗಿದೆ.

‘ಗೃಹಲಕ್ಷ್ಮಿ ಯೋಜನೆಯ ಪರಿಣಾಮ ಕೆಲವರು ಪಡಿತರ ಚೀಟಿಯಲ್ಲಿರುವ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿ ಹೊಸ ಪಡಿತರ ಚೀಟಿ ನೀಡುವಂತೆ ಮನವಿ ಮಾಡುತ್ತಿರುವುದು ಹೆಚ್ಚುತ್ತಿದೆ. ತಂದೆ, ತಾಯಿ ಸಹಿತ ಕುಟುಂಬ ಸದಸ್ಯರು ಕೂಡಿ ಇದ್ದವರೂ ಈಗ ಪ್ರತ್ಯೇಕ ಪಡಿತರ ಚೀಟಿಗಾಗಿ ಬೇಡಿಕೆ ಇಡುತ್ತಿದ್ದಾರೆ’ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯ ಸಿಬ್ಬಂದಿಯೊಬ್ಬರು.

‘ಎರಡು ವರ್ಷಗಳ ಹಿಂದೆಯೇ ಬಿಪಿಎಲ್‌ ಪಡಿತರ ಚೀಟಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದೆ. ಈವರೆಗೆ ಪರಿಶೀಲನೆ ಕೆಲಸವೂ ನಡೆದಿಲ್ಲ. ಪಡಿತರ ಚೀಟಿಯನ್ನೂ ನೀಡಿಲ್ಲ. ಪಡಿತರ ಚೀಟಿ ನೀಡದಿರುವುದರಿಂದ ಸರ್ಕಾರದ ಯೋಜನೆ ಪಡೆಯಲು ಸಾಧ್ಯವಾಗುತ್ತಿಲ್ಲ’ ಎಂದು ಪಟ್ಟಣದ ನಿವಾಸಿ ಮುತ್ತುರಾಜ ಸಮಸ್ಯೆ ಹೇಳಿಕೊಂಡರು.

‘ಬಿಪಿಎಲ್‌ ಪಡಿತರ ಚೀಟಿಯಲ್ಲಿ ಮಗ, ಸೊಸೆ ಹಾಗೂ ಮೊಮ್ಮಕ್ಕಳ ಹೆಸರು ಇದೆ. ಅವರು ಬೇರೆ ಊರಿನಲ್ಲಿ ವಾಸವಾಗಿದ್ದಾರೆ. ಗಂಡ, ಹೆಂಡತಿ ಇಬ್ಬರೇ ಈ ಊರಲ್ಲಿ ಇದ್ದು ಪಡಿತರ ಪಡೆಯಲು ಹೋದರೆ, ಕುಟುಂಬ ಸದಸ್ಯರ ಎಲ್ಲರದ್ದೂ ಕೆವೈಸಿ ಮಾಡಿಸಬೇಕು ಎನ್ನುತಿದ್ದಾರೆ. ಕೆವೈಸಿ ಆಗದ ಕಾರಣ ಪಡಿತರವೂ ಸಿಗುತ್ತಿಲ್ಲ. ಮಗ, ಸೊಸೆಗೆ ಕೆವೈಸಿ ಮಾಡಿಸಲು ಕರೆದರೂ ಅವರು ಬರುತ್ತಿಲ್ಲ. ಪ್ರತ್ಯೇಕ ಪಡಿತರ ಚೀಟಿ ಮಾಡಿಸಲೂ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ’ ಎಂದು ಪರಸಪ್ಪ ಓಣಿಕೇರಿ ಅಸಹಾಯಕರಾಗಿ ಹೇಳಿದರು.

––––––––––––

ಅಂಕಿ–ಅಂಶ

23,288

ತಾಲ್ಲೂಕಿನಲ್ಲಿ ಒಟ್ಟು ಪಡಿತರದಾರರು

1,372

ಅಂತ್ಯೋದಯ ಪಡಿತರದಾರರು

21,916

ಬಿಪಿಎಲ್‌ ಪಡಿತರದಾರರು

ಹೊಸ ಪಡಿತರ ಚೀಟಿ ವಿತರಣೆಗೆ ಯಾವುದೇ ಆದೇಶ ಬಂದಿಲ್ಲ. ಈ ಹಿಂದೆ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಒಟ್ಟು 880 ಜನರ ಅರ್ಜಿಗಳು ಅನುಮೋದನೆಗಾಗಿ ಬಾಕಿಯಿವೆ.
ಹನಮಂತ ಹೆಬ್ಬಳ್ಳಿ ಆಹಾರ ನಿರೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT