ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಪೆಡಲ್ ತುಳಿಯದೇ ಸಾಗುವ ಸೈಕಲ್!

ಬ್ಯಾಟರಿ ಚಾಲಿತ ವಾಹನವನ್ನಾಗಿ ಮಾರ್ಪಡಿಸಿದ ಪ್ರಥಮ ಪಿ.ಯು ವಿದ್ಯಾರ್ಥಿಗಳು
Last Updated 12 ಜನವರಿ 2021, 15:10 IST
ಅಕ್ಷರ ಗಾತ್ರ

ಕಾರವಾರ: ನಗರದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಬ್ಬರು ಲಾಕ್‌ಡೌನ್ ಸಮಯದಲ್ಲಿ ಸಿದ್ಧಪಡಿಸಿದ ವಿದ್ಯುತ್ ಚಾಲಿತ ಸೈಕಲ್‌ಗಳು, ಈಗ ಜನರನ್ನು ಸೆಳೆಯುತ್ತಿವೆ.

ಸೇಂಟ್ ಜೋಸೆಫ್ಸ್ ಪಿ.ಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಾಗಿರುವ ತನ್ವಿ ವಿನಾಯಕ ಚಿಪ್ಕರ್ (ಪಿ.ಸಿ.ಎಂ.ಸಿ ವಿಭಾಗ) ಹಾಗೂ ಕುನಾಲ್ ಜಗದೀಶ ನಾಯ್ಕ (ಪಿ.ಸಿ.ಎಂ.ಬಿ ವಿಭಾಗ) ಈ ಸಾಧನೆ ಮಾಡಿದವರು.

ಮಾರುಕಟ್ಟೆಗಳಲ್ಲಿ ದೊರೆಯುವ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳಲ್ಲಿ ಬ್ಯಾಟರಿ ಶಕ್ತಿ ಖಾಲಿಯಾದರೆ ಮುಂದೆ ಸಾಗಲು ಸಾಧ್ಯವಾಗುವುದಿಲ್ಲ. ಆದರೆ, ಇವರು ಸಿದ್ಧಪಡಿಸಿದ ಸೈಕಲ್‌ಗಳ ಬ್ಯಾಟರಿಗಳಲ್ಲಿ ಚಾರ್ಜ್ ಖಾಲಿಯಾದರೆ, ಪೆಡಲ್ ತುಳಿದು ಮುಂದೆ ಸಾಗಲು ಸಾಧ್ಯವಾಗುವುದು ವಿಶೇಷವಾಗಿದೆ. ಇದಕ್ಕಾಗಿ ಸೈಕಲ್‌ಗಳಿಗೆ ಎರಡು ಚೈನ್‌ಗಳನ್ನು ಅಳವಡಿಸಿ ಪರಸ್ಪರ ಹೊಂದಾಣಿಕೆ ಆಗುವಂತೆ ಚಾಕಚಕ್ಯತೆಯಿಂದ ಜೋಡಿಸಿದ್ದಾರೆ.

ಹೇಗೆ ಸಾಧ್ಯವಾಯಿತು?:‘ಎರಡು ಸಾದಾ ಸೈಕಲ್‌ಗಳಿಗೆ ತಲಾ 12 ವಾಟ್‌ಗಳ ಸಾಮರ್ಥ್ಯದ ಎರಡು ಬ್ಯಾಟರಿಗಳನ್ನು ಅಳವಡಿಸಿದ್ದೇವೆ. ಹಿಂದೆ ಬಲಭಾಗದಲ್ಲಿ 24 ವಾಟ್ ಸಾಮರ್ಥ್ಯದ ಮೋಟರ್‌ ಜೋಡಿಸಿ, ಅದಕ್ಕೆ ಸರ್ಕ್ಯೂಟ್ ಹಾಗೂ ಚೈನ್‌ಗಳ ಸಂಪರ್ಕ ನೀಡಿದ್ದೇವೆ. ಅದರ ಮೂಲಕ ವೇಗವರ್ಧನೆ ಮಾಡಲಾಗುತ್ತದೆ. ಬ್ರೇಕ್ ಅನ್ವಯಿಸಿದ ಕೂಡಲೇ ಮೋಟರ್ ಬಂದ್ ಆಗುತ್ತದೆ. ಹಾಗಾಗಿ ಸೈಕಲ್‌ನ ವೇಗವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ’ ಎಂದು ತನ್ವಿ ವಿವರಿಸಿದರು.

‘ಹೆಡ್‌ಲೈಟ್, ಇಂಡಿಕೇಟರ್, ಬ್ರೇಕ್‌ ಲೈಟ್‌ಗಳನ್ನೂ ಅಳವಡಿಸಿದ್ದೇವೆ. ಆ್ಯಸಿಡ್ ಬ್ಯಾಟರಿಗಳನ್ನು ಬಳಸಿದ್ದು, ನಾಲ್ಕರಿಂದ ಐದು ತಾಸು ಚಾರ್ಜ್‌ ಮಾಡಬೇಕು. ಬಳಿಕ ಸುಮಾರು 30 ಕಿಲೋಮೀಟರ್ ಸಾಗಲು ಸಾಧ್ಯವಾಗುತ್ತದೆ. ಗಂಟೆಗೆ ಸುಮಾರು 20 ಕಿಲೋಮೀಟರ್‌ಗಳಷ್ಟು ವೇಗದಲ್ಲಿ ಸಾಗಬಹುದು’ ಎಂದು ಕುನಾಲ್ ಹೇಳಿದರು.

‘ಇಬ್ಬರೂ ನಂದನಗದ್ದಾ ನಿವಾಸಿಗಳಾಗಿದ್ದು, ನೆರೆಹೊರೆಯವರು. ಮನೆಯಿಂದ ಆರು ಕಿಲೋಮೀಟರ್ ದೂರದಲ್ಲಿರುವ ಕಾಲೇಜಿಗೆ ದಿನವೂ ಸೈಕಲ್ ತುಳಿಯಲು ಬೇಸರವಾಗಿತ್ತು. ಹಾಗಾಗಿ ಬ್ಯಾಟರಿ ಚಾಲಿತ ಸೈಕಲ್ ಸಿದ್ಧಪಡಿಸುವ ಬಗ್ಗೆ ಮನೆಯಲ್ಲಿ ತಿಳಿಸಿದೆವು. ನಮ್ಮ ಆಲೋಚನೆಗೆ ಪಾಲಕರೂ ಬಹಳ ಸಹಕಾರ ನೀಡಿದರು’ ಎಂದು ಮುಗುಳ್ನಕ್ಕರು.

ಒಂದು ತಿಂಗಳ ಪರಿಶ್ರಮ:‘ಮೋಟರ್ ಅಳವಡಿಕೆಯನ್ನು ಯೂಟ್ಯೂಬ್ ಮೂಲಕ ಕಲಿತೆವು. ಸರಿಯಾಗಿ ಅಲೈನ್‌ಮೆಂಟ್ ಮಾಡಲು ಒಂದು ತಿಂಗಳು ಬೇಕಾಯಿತು. ಸರ್ಕ್ಯೂಟ್ ಅನ್ನು ಸಂಪೂರ್ಣವಾಗಿ ಮುಚ್ಚಿದ್ದು, ಮಳೆ ಅಥವಾ ತೊಳೆಯುವಾಗ ನೀರು ಬಿದ್ದರೂ ಹಾಳಾಗದು. ಸೈಕಲ್ ಅನ್ನೂ ಒಳಗೊಂಡು ₹15 ಸಾವಿರದಿಂದ ₹18 ಸಾವಿರದ ವೆಚ್ಚವಾಯಿತು. ಮಾರುಕಟ್ಟೆಯಲ್ಲಿ ಸಿಗುವ ಇಂಥ ವಾಹನಗಳಿಗೆ ಸುಮಾರು ₹35 ಸಾವಿರ ದರವಿದೆ’ ಎಂದು ಕುನಾಲ್ ಮಾಹಿತಿ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT